ಮೈಸೂರು; 'ಪತ್ರಿಕೋದ್ಯಮವು ಸರ್ವಾಧಿಕಾರಿ ಆಡಳಿತ ಧೋರಣೆಯನ್ನು ಸಹಿಸಬಾರದು. ಜನಪರವಲ್ಲದ ದಪ್ಪಚರ್ಮದ ಜನಪ್ರತಿನಿಧಿಗಳನ್ನು ಚುಚ್ಚಿ ಎಚ್ಚರಿಸಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಜಿಲ್ಲಾ ಪತ್ರಕರ್ತರ ಸಂಘವು ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ದೇಶ ಅವಿರತ ಹೋರಾಟದಿಂದ ಗಳಿಸಿದ ಸ್ವಾತಂತ್ರ ಉಳಿಯಬೇಕಾದರೆ ಮಾಧ್ಯಮಗಳು ನಿರ್ಭೀತ, ನಿಷ್ಪಕ್ಷಪಾತ ಹಾಗೂ ಧರ್ಮ ನಿರಪೇಕ್ಷ ನಿಲುವಿನಿಂದ ಹಿಂದೆ ಸರಿಯಬಾರದು' ಎಂದರು.
'ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಸಮಾನತೆಯ ಆಶಯಕ್ಕೆ ಪೂರಕವಾಗಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು. ಉದ್ಯಮಿಗಳು ಹಾಗೂ ಬಲಾಢ್ಯರ ಪರವಾಗಿ ಮಾಧ್ಯಮ ನಿಂತರೆ ಅವರ ಪ್ರತಿಷ್ಠೆ ಹೆಚ್ಚಾಗುತ್ತದೆ. ದಮನಿತರು, ಶೋಷಿತರು, ದನಿ ಕಳೆದುಕೊಂಡವರ ಪರವಾಗಿ ಬರೆದರೆ ದೇಶದ ಪ್ರತಿಷ್ಠೆ ಹೆಚ್ಚಾಗುತ್ತದೆ ಎಂಬುದನ್ನು ಸದಾ ಗಮನದಲ್ಲಿರಿಸಿಕೊಳ್ಳಬೇಕು' ಎಂದರು.
'ಮಾಧ್ಯಮಗಳಿರುವುದು ಯಾರನ್ನೂ ಹೊಗಳಲು ಅಲ್ಲ. ಬದಲಿಗೆ ಸಮಸಮಾಜದ ನಿರ್ಮಾಣಕ್ಕೆ ಸಲಹೆಗಾರನಾಗಿರಬೇಕು' ಎಂದು ಪ್ರತಿಪಾದಿಸಿದರು.
'ಅಮೆರಿಕಾದ ಮೂರನೇ ಅಧ್ಯಕ್ಷರಾಗಿದ್ದ ಥಾಮಸ್ ಜೆಫರ್ಸನ್, ಸರ್ಕಾರ ಇಲ್ಲದೆ ಪ್ರಜಾಪ್ರಭುತ್ವ ನಡೆಯುತ್ತದೆ. ಆದರೆ ಮಾಧ್ಯಮ ಇಲ್ಲದೆ ನಡೆಯಲಾರದು ಎಂದಿದ್ದರು. ಹೀಗಾಗಿ ಮಾಧ್ಯಮಗಳ ಮೇಲಿನ ಜವಾಬ್ದಾರಿ ದೊಡ್ಡದು' ಎಂದು ಹೇಳಿದರು.
'ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಶ್ರೇಷ್ಠ ಮಾದರಿಗಳು. ಪತ್ರಿಕೆ ಜನರ ಹಿತ ಕಾಯುವ ಸಲಹೆಗಾರನಾಗಿ ಕೆಲಸ ಮಾಡಬೇಕು ಎಂದು ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ್ದರು. ರಾಷ್ಟ್ರದ ಮನಸನ್ನು ಓದದಿದ್ದರೆ ನಿರ್ಭೀತವಾಗಿ, ನಿಷ್ಪಕ್ಷಪಾತವಾಗಿ ಬರೆಯಲು ಆಗದು ಎಂದಿದ್ದರು. ಸಾಮಾಜಿಕವಾಗಿ ಹಿತವಲ್ಲದ ನಡವಳಿಕೆಯುಳ್ಳವರನ್ನು ಅಂಬೇಡ್ಕರ್ ಸಹಿಸುತ್ತಿರಲಿಲ್ಲ' ಎಂದು ಸ್ಮರಿಸಿದರು.
'ಪತ್ರಕರ್ತರಿಗೆ ನಿವೇಶನ ವಿತರಿಸುವ ಸಂಬಂಧ ಈಗಾಗಲೇ ಮುಡಾ ಆಯುಕ್ತರಿಗೆ ಸೂಚನೆ ನೀಡಲಾಗಿದೆ' ಎಂದರು.
ಮೇಯರ್ ಶಿವಕುಮಾರ್, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು, ಜಿಎಸ್ಎಸ್ ಮಾಧ್ಯಮ ಸಂಸ್ಥೆಯ ಅಧ್ಯಕ್ಷ ಶ್ರೀಹರಿ ದ್ವಾರಕಾನಾಥ್ ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಾಧಕ ಪತ್ರಕರ್ತರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.