ಮೈಸೂರು: ‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)–2020 ಪ್ರಕಾರ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳನ್ನು ಪಠ್ಯಕ್ರಮವೆಂದು ಪರಿಗಣಿಸಲಾಗಿದ್ದು, ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಇಂತಿಷ್ಟು ಅಂಕಗಳನ್ನು ನೀಡಲಾಗುತ್ತದೆ’ ಎಂದು ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ತಿಳಿಸಿದರು.
ಇಲ್ಲಿನ ಮಾನಸ ಗಂಗೋತ್ರಿಯ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ(ಜೆಎಸ್‌ಎಸ್–ಎಸ್‌ಟಿಯು)ದಲ್ಲಿ ಆರಂಭಿಸಿರುವ ಎನ್‌ಎಸ್‌ಎಸ್ ಘಟಕವನ್ನು ವರ್ಚುವಲ್ ಆಗಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕಟ್ಟಕಡೆಯ ವ್ಯಕ್ತಿಗಳಿಗೂ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಸೇವೆ ಎನ್ನುವುದು ಎನ್‌ಎಸ್‌ಎಸ್‌ನ ಮುಖ್ಯ ಉದ್ದೇಶವಾಗಿದ್ದು, ಅದನ್ನು ಕಲಿಸುತ್ತಿದೆ’ ಎಂದರು.
‘ನಾಯಕತ್ವ ಗುಣ ಹಾಗೂ ಮೌಲ್ಯಗಳನ್ನು ಕಲಿಯುವುದಕ್ಕೆ ಎನ್ಎಸ್‌ಎಸ್ ಸಹಕಾರಿಯಾಗಿದೆ. ಸ್ವಯಂ ಸೇವಕರು ರಾಯಭಾರಿಗಳಾಗಿ ಕಾರ್ಯನಿರ್ವಹಿಸಿ, ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ 192 ಘಟಕ:
‘ಎನ್‌ಎಸ್‌ಎಸ್ ಅನ್ನು ದೇಶವ್ಯಾಪಿ ಸ್ವೀಕಾರ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಐದು ಲಕ್ಷ ಸ್ವಯಂಸೇವಕ, ಸ್ವಯಂಸೇವಕಿಯರಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯೊಂದರಲ್ಲೇ 192 ಘಟಕಗಳಿದ್ದು, 19,200 ಮಂದಿ ನೋಂದಾಯಿಸಿದ್ದಾರೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಟಿ.ಸುರೇಶ್ ತಿಳಿಸಿದರು.
‘ವಿದ್ಯಾರ್ಥಿಗಳು ಸಹಿಷ್ಣುತೆಯ ಭಾವವನ್ನು ಬೆಳೆಸಿಕೊಂಡರೆ ಸಮಾಜಮುಖಿಯಾಗಿ ಕೆಲಸ ಮಾಡಬಹುದು. ಎನ್‌ಎಸ್‌ಎಸ್‌ನಿಂದ ಆರ್ಥಿಕವಾಗಿ ಲಾಭವಿಲ್ಲ. ಆದರೆ, ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಮಾಡುತ್ತದೆ. ವಿವಿಧ ಕೌಶಲಗಳನ್ನು ಕಲಿಯಲು ಸಹಕಾರಿಯಾಗಿದೆ. ತಂಡವಾಗಿ ಕೆಲಸ ಮಾಡುವುದನ್ನು ತಿಳಿಸಿಕೊಡುತ್ತದೆ. ಎನ್ಇಪಿಯಲ್ಲಿ ಎಸ್‌ಎಸ್‌ಎಸ್‌ಗೆ ಹೆಚ್ಚು ಮಹತ್ವ ಕೊಡಲಾಗಿದೆ’ ಎಂದು ನುಡಿದರು.
‘ಯೋಜನೆಯ ಸ್ವಯಂಸೇವಕರು ಕೋವಿಡ್ ಸಂದರ್ಭದಲ್ಲಿ ನರ್ಸ್‌ಗಳಿಗೂ ಕಡಿಮೆ ಇಲ್ಲದಂತೆ ಕೊರೊನಾ ಯೋಧರಾಗಿ ಕೆಲಸ ಮಾಡಿದ್ದಾರೆ. ಸರ್ಕಾರ ಹಾಗೂ ವಿಶ್ವವಿದ್ಯಾಲಯದಿಂದ ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ನಾವೆಲ್ಲರೂ ಒಂದೇ ಎಂಬ ಮನೋಭಾವ ಬೆಳೆಸುವ ಈ ಚಟುವಟಿಕೆಯಲ್ಲಿ ಯುವಜನರು ಭಾಗವಹಿಸಿ, ದೇಶದ ಭಾವೈಕ್ಯ ಹಾಗೂ ಏಕತೆಗೆ ಕೈಜೋಡಿಸಬೇಕು’ ಎಂದು ತಿಳಿಸಿದರು.
ಎಸ್‌ಜೆಸಿಇ ಪ್ರಾಂಶುಪಾಲ ಪ್ರೊ.ಎಸ್.ಬಿ.ಕಿವಡೆ, ‘ಕಾಲೇಜಿನಲ್ಲಿ ಎನ್‌ಎಸ್‌ಎಸ್ ಚಟುವಟಿಕೆಗಳಿಗೂ ಇಂತಿಷ್ಟು ಅಂಕ ನಿಗದಿಪಡಿಸಲಾಗುವುದು’ ಎಂದರು.
ಜೆಎಸ್‌ಎಸ್–ಎಸ್‌ಟಿಯು ಕುಲಸಚಿವ ಪ್ರೊ.ಎಸ್.ಎ.ಧನರಾಜ್, ಉಪಪ್ರಾಂಶುಪಾಲ ನಟರಾಜ್ ಭಾಗವಹಿಸಿದ್ದರು.
ಸಹಾಯಕ ಪ್ರಾಧ್ಯಾಪಕ ರೋಹಿತ್ ಪ್ರಾರ್ಥಿಸಿದರು. ನಿಂಗರಾಜು ತಂಡದವರು ಎನ್‌ಎಸ್‌ಎಸ್ ಮತ್ತು ನಾಡಗೀತೆ ಹಾಡಿದರು. ಕಾಲೇಜಿನ ಎನ್ಎಸ್‌ಎಸ್ ಅಧಿಕಾರಿ ಪ್ರೊ.ಎನ್.ಶಿವಪ್ರಸಾದ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಸಿಂಧು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.