ಕೆ.ಆರ್.ನಗರ: ‘ಇಲ್ಲಿನ ಮಹಿಳಾ ಪ್ರಥಮ ದರ್ಜೆ ಸರ್ಕಾರಿ ಕಾಲೇಜು ನ್ಯಾಕ್‌ನಿಂದ ‘ಎ’ ಗ್ರೇಡ್ ಪಡೆದು ಮೈಸೂರು ಭಾಗದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಸಾ.ರಾ.ಮಹೇಶ್ ಹೇಳಿದರು.
ಗ್ರೇಡ್ ಪಡೆದ ಹಿನ್ನೆಲೆಯಲ್ಲಿ ಇಲ್ಲಿನ ಮಹಿಳಾ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನಲ್ಲಿ ಬುಧವಾರ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಲೇಜು, ಅಧ್ಯಾಪಕರು, ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ವಿದ್ಯಾರ್ಥಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಇದ್ದಿದ್ದರಿಂದ ನ್ಯಾಕ್ ತಂಡ ಕಾಲೇಜಿಗೆ ‘ಎ’ ಗ್ರೇಡ್ ನೀಡಿದೆ. ಇದರಿಂದ ಕಾಲೇಜಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ₹ 2 ಕೋಟಿ ಅನುದಾನ ಬರಲಿದೆ’ ಎಂದು ತಿಳಿಸಿದರು.
‘2009ರಲ್ಲಿ ಪ್ರಾರಂಭವಾದ ಈ ಕಾಲೇಜಿಗೆ ಎಲ್ಲರ ಸಹಕಾರದಿಂದ 2023ನೇ ಸಾಲಿನಲ್ಲಿ ‘ಎ’ ಗ್ರೇಡ್ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ಕ್ಯಾಂಪಸ್ ನಿರ್ಮಿಸಬೇಕಾಗಿದೆ. ಕಾಂಪೌಂಡ್, ಪ್ರವೇಶದ್ವಾರ ನಿರ್ಮಾಣ ಮೊದಲಾದ ಇನ್ನಿತರ ಕೆಲಸಗಳು ಬಾಕಿ ಇವೆ. ಇದಕ್ಕೆ ಸಮಯ ಬೇಕಾಗುತ್ತದೆ’ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಬಿ.ಟಿ.ವಿಜಯ್ ಮಾತನಾಡಿ, ‘ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ 67 ಕಾಲೇಜುಗಳ ಪೈಕಿ ಅದರಲ್ಲೂ ಗ್ರಾಮೀಣ ಭಾಗದ ಕಾಲೇಜೊಂದು ನ್ಯಾಕ್‌ನಿಂದ ‘ಎ’ ಗ್ರೇಡ್ ಪಡೆದ ಹೆಗ್ಗಳಿಕೆಗೆ ನಾವೆಲ್ಲರೂ ಪಾತ್ರರಾಗಿದ್ದೇವೆ. ರಾಜ್ಯದ 412 ಕಾಲೇಜುಗಳ ಪೈಕಿ 4 ಕಾಲೇಜುಗಳು ಮಾತ್ರ ನ್ಯಾಕ್‌ನಿಂದ ‘ಎ’ ಗ್ರೇಡ್ ಪಡೆದಿವೆ. ಅವುಗಳಲ್ಲಿ ನಮ್ಮದೂ ಒಂದು’ ಎಂದು ಹೇಳಿದರು.
‘ಗ್ರೇಡ್ ಪಡೆದಿದ್ದರಿಂದ ಸ್ವಾಯತ್ತ ಕಾಲೇಜು ಮಾಡಿಕೊಳ್ಳಲು ಅವಕಾಶವಿದೆ. ಯುಜಿಸಿ ಅಡಿಯಲ್ಲಿ ಅನುದಾನ ಹೆಚ್ಚಾಗಿ ದೊರೆಯಲಿದೆ. ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರ ನಮ್ಮ ಕಾಲೇಜನ್ನು ವಿಶೇಷವಾಗಿ ಪರಿಗಣಿಸಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬಹುದಾಗಿದೆ. 5 ವರ್ಷಗಳವರೆಗೆ ‘ಎ’ ಗ್ರೇಡ್‌ನಲ್ಲೇ ಕಾಲೇಜು ಇರಲಿದೆ’ ಎಂದರು.
ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲಾಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಕೆ.ಟಿ.ರಮೇಶ್, ನಿರ್ದೇಶಕ ಸಿದ್ದರಾಮೇಗೌಡ, ಪುರಸಭೆ ಸದಸ್ಯ ಕೆ.ಪಿ.ಪ್ರಭುಶಂಕರ್ ಮಾತನಾಡಿದರು.
ಸಿಡಿಸಿ ಸದಸ್ಯರಾದ ಸತೀಶ್, ನಾಗರಾಜು, ರೂಪಾ ಹೃಷಿಕೇಶ್, ಕೋಮಲಾ ಶಿವನಂಜಪ್ಪ, ಪುರಸಭೆ ಸದಸ್ಯ ಉಮೇಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಮುಖಂಡ ಎಸ್.ವಿ.ಪ್ರಕಾಶ್, ಐಕ್ಯೂಎಸಿ ಸಂಚಾಲಕರಾದ ಡಾ.ಡಿ.ಶೃತಿ, ಸಿ.ಆರ್.ಸುನಿಲ್, ನ್ಯಾಕ್ ಮತ್ತು ಐಕ್ಯೂಎಸಿ ಸಮಿತಿ ಸದಸ್ಯರಾದ ವಿಜಯ್, ಎ.ಡಿ.ಕಾಂತರಾಜ್, ಎಂ.ರಾಜು, ಎಂ.ಶಿವಕುಮಾರ್, ಭಾನುಪ್ರಕಾಶ್, ಶಿವಾಜಿ, ಡಾ.ಸೀಮಾ ಬಡಿಗೇರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.