ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ (ಕರ್ನಾಟಕ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿ ಜಾರಿಗೆ ತರಲು ಮುಂದಾಗಿದ್ದನ್ನು ಸಹಿಸದೆ ಅವರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದ್ದು, ಮುಡಾ ಹಗರಣ ತನಿಖೆಯೂ ಅದರ ಭಾಗವಾಗಿಯೇ ನಡೆಯುತ್ತಿದೆ’ ಎಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಅಸಮಾಧಾನ ಹೊಂದಿದ್ದು, ಸಿದ್ದರಾಮಯ್ಯ ವಿರುದ್ಧ ದ್ವೇಷ ಕಾರುತ್ತಿವೆ. ಮುಡಾ ಹಗರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಪಾಲು ದೊಡ್ಡದಿದ್ದು, ಮುಖ್ಯಮಂತ್ರಿ ವಿರುದ್ಧ ಮಾತನಾಡುವ ನೈತಿಕತೆ ಅವರಿಗಿಲ್ಲ. ಇದೇ ರೀತಿ ಆರೋಪಿಸುವುದನ್ನು ಮುಂದುವರಿಸಿದರೆ ಮುಂದಿನ ವಾರ ಬೆಂಗಳೂರಿನ ಅವರ ನಿವಾಸಕ್ಕೆ ವೇದಿಕೆ ಸದಸ್ಯರು ಮುತ್ತಿಗೆ ಹಾಕಲಿದ್ದಾರೆ’ ಎಂದು ಎಚ್ಚರಿಸಿದರು.
‘ವಿರೋಧ ಪಕ್ಷಗಳ ಷಡ್ಯಂತ್ರಕ್ಕೆ ಮಣಿದು ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ರಾಜೀನಾಮೆ ನೀಡಿದ್ದಾರೆಯೇ, ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ಆಗಿದ್ದರೂ ಒಂಬತ್ತು ತಿಂಗಳು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿಲ್ಲವೇ’ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಮುಖಂಡರಾದ ಲೋಕೇಶ್ ಕುಮಾರ್ ಮಾದಾಪುರ, ಹರೀಶ್ ಮೋಗಣ್ಣ, ರಾಜೇಶ್, ರವಿನಂದನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.