ಎಚ್.ಡಿ.ಕೋಟೆ: ಮುಂಗಾರು ವಿಳಂಬವಾಗುತ್ತಿದ್ದಂತೆಯೇ, ಕಬಿನಿ ಜಲಾಶಯದ ಹಿನ್ನೀರು ಇಳಿಮುಖವಾಗಿದ್ದು ಸರಗೂರು ತಾಲ್ಲೂಕಿನ ಕಿತ್ತೂರು ತೆರಣಿಮುಂಟಿ ಗ್ರಾಮದಲ್ಲಿದ್ದ ಕಪುನ್ನಾಟ ರಾಜ್ಯದ ರಾಜಧಾನಿ ಮಾಂಕಾಳಮ್ಮ ದೇವಸ್ಥಾನದ ಅಡಿಪಾಯ (ಮಂಟಪ) ಕಾಣಿಸಿಕೊಂಡಿದೆ.
ಈಗ ಸದ್ಯ ಗದ್ದಿಗೆಯ ಮೇಲ್ಭಾಗ ಕಾಣಿಸಿಕೊಂಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಪೂರ್ಣ ಪ್ರಮಾಣದಲ್ಲಿ ಕಾಣಿಸುತ್ತದೆ.
ಹೆಗ್ಗಡದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿ, ಬಿದರಹಳ್ಳಿ ಸಮೀಪ 1973ರಲ್ಲಿ ಕಬಿನಿ ಅಣೆಕಟ್ಟೆ ನಿರ್ಮಿಸಲಾಯಿತು. ಕಿತ್ತೂರು, ಹೊಸಹಳ್ಳಿ, ಸೋಗಹಳ್ಳಿ, ಮಳಲಿ-ಮಗ್ಗೆ, ಬೆಳತ್ತೂರು ಮುಂತಾದ 33 ಹಳ್ಳಿಗಳು ಮುಳುಗಡೆಯಾಗಿದ್ದವು. ಕೇರಳದ ವಯನಾಡಿನಲ್ಲಿ ಮಳೆಯಾದರೆ ಮಾತ್ರ ಕಬಿನಿ ಜಲಾಶಯ ಭರ್ತಿಯಾಗುತ್ತದೆ. ಈ ಬಾರಿ ಮುಂಗಾರು ವಿಳಂಬವಾಗಿದ್ದು, ನೀರಿನ ಪ್ರಮಾಣ ತೀವ್ರ ಕುಸಿತ ದಾಖಲಿಸಿದೆ. ಹೀಗಾಗಿ ಅಣೆಕಟ್ಟಿನ ಅಡಿಯಲ್ಲಿ ಮುಳುಗಿರುವ ಸ್ಮಾರಕಗಳು ಕಾಣಿಸಲಾರಂಭಿಸಿದೆ.
2013ರಲ್ಲಿ ರಾಜ್ಯದಲ್ಲಿ ತೀವ್ರ ಬರಗಾಲ ಬಂದ ವೇಳೆ ತೆರಣಿ ಮುಂಟಿ (ಕಿತ್ತೂರು) ಗ್ರಾಮದಲ್ಲಿ ಬಂದಿದ್ದಾಗ ಈ ದೇಗುಲ ಕಾಣಿಸಿತ್ತು. ಅದನ್ನು ಬಿಟ್ಟರೆ 40 ವರ್ಷದ ಹಿಂದೆ ನೀರು ತಳಮುಟ್ಟಿದ ವೇಳೆ ಇಲ್ಲಿನ ದೇವಾಲಯವನ್ನು ಕಾಣಬಹುದಿತ್ತು.
ಮಾಂಕಾಳಮ್ಮ ದೇವಾಲಯ: 2013ರಲ್ಲಿ ಶ್ರೀ ಮಂಕಾಳಮ್ಮ ದೇವಸ್ಥಾನದ ಗದ್ದಿಗೆ ಕಾಣಿಸಿಕೊಂಡಾಗ ಕುರುಹುಗಳಾಗಿ ಮುರಿದು ಬಿದ್ದಿರುವ ಮಂಟಪ, ವಿರೂಪಗೊಂಡಿರುವ ವಿಗ್ರಹಗಳು, ಮಾಂಕಾಳಮ್ಮ ದೇವಾಲಯ ಚದುರಿ ಬಿದ್ದ ಇಟ್ಟಿಗೆಗಳನ್ನು ಕಾಣಬಹುದಾಗಿತ್ತು. ಈ ದೇವಾಲಯವನ್ನು 1943 ರಲ್ಲಿ ‘ಪಲ್ಲಕ್ಕಾಡು ಸೋಮಚಾರಿ’ ಎಂಬಾತ ನಿರ್ಮಿಸಿದ್ದ ಎನ್ನಲಾಗಿದೆ. ಹಿನ್ನೀರಿನಲ್ಲಿ ಇಲ್ಲಿಂದ ಮುಂದೆ ಸಾಗಿದರೆ ಭವಾನಿ ಶಂಕರ ದೇವಾಲಯ ಗುರುತುಗಳಿವೆ. ಸಮೀಪದಲ್ಲಿ ನಂದಿ, ಲಿಂಗ, ಭೃಂಗಿ ಮತ್ತು ನಾಗದೇವತೆ ವಿಗ್ರಹಗಳಿವೆ. ಈ ಜಾಗವು ಮಹಾರಾಜರ ಕಾಲದಲ್ಲಿ ‘ಕೀರ್ತಿಪುರ’ ಎಂದು ಹೆಸರು ಪಡೆದಿತ್ತು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ತೆರಣಿಮುಂಟಿ, ಕಿತ್ತೂರು ಮೊದಲು ‘ಕೀರ್ತಿಪುರ’ವು ಪ್ರಾಚೀನ ಪುನ್ನಾಟದ ರಾಜ್ಯದ ರಾಜಧಾನಿ. ಕಬಿನಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ತೆರಣಿಮುಂಟಿ ಉಳಿಕೆ ಪ್ರದೇಶದಲ್ಲಿ ರವಿರಾಮೇಶ್ವರ ದೇವಾಲಯ, ಶಾಸನ, ಬಿಡಿ ಶಿಲ್ಪಗಳು ಅಲ್ಲಲ್ಲಿ ಕಂಡು ಬರುತ್ತವೆ. ಲಿಂಗರಾಜೇ ಅರಸುವಿಗೆ ಮೈಸೂರು ಮಹಾರಾಜರು ಉಂಬಳಿಯಾಗಿ ನೀಡಿದ್ದರು. ‘ಹತ್ತೂರ್ ಕೊಟ್ರು ಕಿತ್ತೂರ್ ಕೊಡಲ್ಲ’ ಎಂಬ ಮಾತು ಈ ಊರಿನ ಮಹತ್ವ ವನ್ನು ಸಾರುತ್ತದೆ.
2013ರಲ್ಲಿ ಶ್ರೀ ಮಾಂಕಾಳಮ್ಮ ಗದ್ದಿಗೆ ಪೂರ್ಣ ಕಾಣಿಸಿಕೊಂಡಿತ್ತು. ಈ ವರ್ಷ ಮೇಲ್ಭಾಗ ಕಾಣಿಸಿಕೊಂಡಿದೆ.ಭಾಸ್ಕರ್ ರವಿ ರಾಮೇಶ್ವರ ದೇವಾಲಯದ ಪ್ರಧಾನ ಅರ್ಚಕ ತೆರಣಿಮುಂಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.