ಹಂಪಾಪುರ: ಕಬಿನಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡುತ್ತಿರುವುದರಿಂದ ನದಿಪಾತ್ರದ ಪ್ರಮುಖ ಸ್ಥಳಗಳಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ಕಳೆದ ಹದಿನೈದು ದಿನಗಳಿಂದ 40 ಸಾವಿರದಿಂದ 70ಸಾವಿರ ಕ್ಯುಸೆಕ್ಸ್ ನೀರನ್ನು ಜಲಾಶಯದಿಂದ ಕಪಿಲಾ ನದಿಗೆ ಬಿಡಲಾಗುತ್ತಿದ್ದು, ಈ ಮನಮೋಹಕ ದೃಶ್ಯವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಬಿದರಹಳ್ಳಿ ಮತ್ತು ಬೀಚನಹಳ್ಳಿ ಗ್ರಾಮಗಳ ಸಂಪರ್ಕ ಸೇತುವೆ ಮುಳುಗಡೆಯಿಂದಾಗಿ ಜಲಾಶಯದ ಮೇಲಿನ ರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳನ್ನು ಬಿಡುತ್ತಿರುವುದರಿಂದ ಜನ ಮತ್ತಷ್ಟು ಹರ್ಷಿತರಾಗಿದ್ದಾರೆ.
ಹಿನ್ನೀರು ವೀಕ್ಷಣೆಯ ಆಕರ್ಷಣೆ: ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಹಿನ್ನೀರಿನ ಪ್ರಮುಖ ದೇವಾಲಯಗಳಾದ ಭೀಮನಕೊಲ್ಲಿ ಮಹದೇಶ್ವರ ದೇವಾಲಯ, ತೆರಣಿಮುಂಟಿ ಗ್ರಾಮದ ರವಿ ರಾಮೇಶ್ವರ ದೇವಾಲಯಗಳ ಸಮೀಪ ನೀರು ಬಂದಿದ್ದು, ಈ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಿದ್ದಾರೆ.
‘ಮಕ್ಕಳಿಗೆ ಜಲಾಶಯ ತೋರಿಸಲು ಕರೆದುಕೊಂಡು ಬಂದಿದ್ದೆವು. ಹಿನ್ನೀರಿನ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಜಲಾಶಯದ ಮೇಲೆ ಅನುವು ಮಾಡಿಕೊಡಬೇಕು’ ಎಂದು ಪ್ರವಾಸಿಗ ಪುಟ್ಟರಾಜು ಮನವಿ ಮಾಡಿದರೇ, ‘ಜಲಾಶಯದ ಕ್ರಸ್ಟ್ ಗೇಟ್ ಸಮೀಪ ನದಿಗೆ ಬೀಳುವ ನೀರನ್ನು ನೋಡಲು ಪ್ರವಾಸಿಗರನ್ನು ಬಿಡಬೇಕಿತ್ತು, ಅಲ್ಲಿಗೆ ಬಿಡದೇ ಇದ್ದದ್ದು ತೀವ್ರ ನಿರಾಸೆಯುಂಟು ಮಾಡಿದೆ’ ಎಂದು ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ ಎಂ.ಬಿ.ವಿನುತ್ ಹೇಳಿದರು.
ನದಿ ಪಾತ್ರದ ದೇವಾಲಯಗಳಾದ ಎಚ್. ಮಟಕೆರೆ ಗ್ರಾಮದಲ್ಲಿರುವ ತಾರಕ - ಕಬಿನಿಯ ಸಂಗಮ ಕ್ಷೇತ್ರವಾದ ರಾಮಲಿಂಗೇಶ್ವರ ದೇವಸ್ಥಾನ, ನಂಜನಗೂಡು ತಾಲ್ಲೂಕಿನ ಸಂಗಮ ಗ್ರಾಮದಲ್ಲಿನ ನುಗು - ಕಬಿನಿ ಸಂಗಮ ಕ್ಷೇತ್ರವಾದ ಮಹದೇವ ತಾತ ಸನ್ನಿಧಿಗೆ ಪ್ರವಾಸಿಗರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಜಲಾಶಯದಿಂದ ನದಿಗೆ ಹೆಚ್ಚಿನ ನೀರು ಬಿಡುವುದು ಮುಂದುವರಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ.
ನದಿ ಪಾತ್ರದ ದೇವಾಲಯಗಳತ್ತ ಜನರು ಜಲಾಶಯ ಮೇಲಿನ ರಸ್ತೆಯಲ್ಲಿ ಚಾಲನೆ ಸಂಭ್ರಮ ಪ್ರವಾಸಿಗರ ಸಂಖ್ಯೆ ಹೆಚ್ಚಳದ ಸಾಧ್ಯತೆ
ಕಬಿನಿ ತುಂಬಿದ ಹಿನ್ನಲೆ ಹಾವೇರಿ ಜಿಲ್ಲೆಯಿಂದ ವೀಕ್ಷಣೆಗೆ ಬಂದಿದ್ದೆವು ಉತ್ತಮವಾದ ಅನುಭವ ದೊರೆತಿದೆಎಂ.ಬಿ.ವಿನುತ್ ಪ್ರವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.