ಮೈಸೂರು: ಅಭಿನವ ಶಂಕರಾಲಯದಲ್ಲಿ ಶುಕ್ರವಾರ ಶಂಕರ ಮಠದ ಶಾರದಾಂಬಾ ಹಾಗೂ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿ ಸನ್ನಿಧಿಯಲ್ಲಿ ಕುಂಭಾಭಿಷೇಕ, ಶಿಖರ ಕುಂಭಾಭಿಷೇಕ, ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿದವು.
ದೇಗುಲದ ಆವರಣದ ಮಹಾಗಣಪತಿ, ಸತ್ಯನಾರಾಯಣ, ಶಂಕರಾಚಾರ್ಯ ಸನ್ನಿಧಿಗಳಲ್ಲಿ ಪೂಜೆ, ಮಂಗಳಾರತಿ ಸಮರ್ಪಿಸಿದ ಶಂಕರಾಚಾರ್ಯ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ, ಶಾರದಾಂಬೆ ದೇಗುಲಕ್ಕೆ ಪ್ರತಿಷ್ಠಾಪಿಸಿದ 7 ಅಡಿ ಎತ್ತರದ ಬಂಗಾರ ಲೇಪಿತ ಕಂಚಿನ ಕಳಸಕ್ಕೆ ವಿಧಿ ವಿಧಾನಗಳ ಮೂಲಕ ಪೂಜೆ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಶತಮಾನೋತ್ಸವ ಅಂಗವಾಗಿ ನಿರ್ಮಿಸಿರುವ ‘ಸಚ್ಚಿದಾನಂದ ವಿಲಾಸ’ ಗುರುಭವನದಲ್ಲಿ ಸ್ವಾಮೀಜಿ ಪಾದಪೂಜೆ ಸ್ವೀಕಾರ ಮಾಡಿದರು. ನಂತರ ಭಕ್ತರಿಗೆ ಫಲ, ಮಂತ್ರಾಕ್ಷತೆ ನೀಡಿದರು. ನೂರಾರು ಮಾತೆಯರಿಂದ ಸೌಂದರ್ಯ ಲಹರಿ ಪಾರಾಯಣ ನಡೆಯಿತು.
ಇದಕ್ಕೂ ಮುನ್ನ ಶ್ರೀಗಳು ಅರಮನೆಗೆ ಭೇಟಿ ನೀಡಿದ್ದರು. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಕುಟುಂಬದವರು ಆಶೀರ್ವಾದ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.