ಹುಣಸೂರು: ನಗರದ ರಂಗನಾಥ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವ ಬುಧವಾರ ಆಚರಿಸಲಾಯಿತು. ಶಾಸಕ ಹರೀಶ್ ಗೌಡ ಭುವನೇಶ್ವರಿ ಉತ್ಸವ ಮೂರ್ತಿ ಮತ್ತು ನಂದಿ ಕಂಬಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿ, ‘ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಮುಖ್ಯಮಂತ್ರಿ ದಿ.ದೇವರಾಜ ಅರಸು ಹುಣಸೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಗಡಿನಾಡಿನಲ್ಲಿ ಕನ್ನಡ ಉಳಿವಿಗಾಗಿ ಹೋರಾಡಬೇಕಾದ ಅನಿವಾರ್ಯತೆಯಿದೆ. ಆಡಳಿತರೂಢ ಸರ್ಕಾರ ಇವನ್ನು ಗಂಭೀರವಾಗಿ ಪರಿಗಣಿಸಿ ಕನ್ನಡ ಕಾವಲು ಸಮಿತಿಗೆ ಹೆಚ್ಚಿನ ಶಕ್ತಿ ತುಂಬುಬೇಕಿದೆ’ ಎಂದರು.
ರಂಗನಾಥ ಬಡಾವಣೆಯಿಂದ ಪಂಚಲೋಹದ ಭುವನೇಶ್ವರಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ವಿವಿಧ ಶಾಲೆಗಳಿಂದ ಮತ್ತು ಸರ್ಕಾರಿ ಇಲಾಖೆಗಳ ಸ್ತಬ್ಥ ಚಿತ್ರ ಗಮನ ಸೆಳೆಯಿತು. ಜಾನಪದ ಸೊಗಡಿನ ಗಾವಡಗೆರೆ ಗ್ರಾಮದ ಗೋವಿಂದನಾಯಕ ನೇತೃತ್ವದ ಡೊಳ್ಳು ಕುಣಿತ, ಕಟ್ಟೆಮಳಲವಾಡಿ ಅಂಬೇಡ್ಕರ್ ಕೋಲಾಟ ತಂಡದ ಕೋಲಾಟ, ಮೋದೂರು ಗ್ರಾಮದ ವೀರಗಾಸೆ, ಪೌರಕಾರ್ಮಿಕರ ಕಾಲೋನಿಯ ಬ್ಯಾಂಡ್ ಮತ್ತು ಕೇರಳದ ಚೆಂಡೆ ನೆರೆದವರನ್ನು ಆಕರ್ಷಿಸಿತು.
ವಿಶ್ವೇಶ್ವರಯ್ಯ ವೃತ್ತದಲ್ಲಿ ವಿವಿಧ ವೃತ್ತಿಯಲ್ಲಿ ತೊಡಗಿರುವವರು ರೈಸ್ ಬಾತ್ ವಿತರಿಸಿದರು. ಮಾರುತಿ ಆಟೋ ನಿಲ್ದಾಣ, ಎಚ್.ಡಿ.ಕೋಟೆ ವೃತ್ತದಲ್ಲಿ ಭುವನೇಶ್ವರಿ ಮತ್ತು ತಿರುಪತಿ ಶ್ರೀನಿವಾಸ ಸ್ಥಾಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.