ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇಂಗ್ಲಿಷ್ ಅಬ್ಬರವೇ ಕೈಮೇಲಾಗಿರುವ ಪರಿಣಾಮ, ನೆಲದ ಭಾಷೆಯಾದ ಕನ್ನಡ ‘ಏದುಸಿರು’ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕನ್ನಡದ ವಾತಾವರಣ ಮಂಕಾಗಿಸುವಂತಹ ಬೆಳವಣಿಗೆಗಳು ಹೆಚ್ಚುತ್ತಿವೆ. ‘ತ್ರಿಭಾಷಾ ಸೂತ್ರ’ ಪಾಲನೆಯೂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಾರದಿರುವುದು ತೊಡಕಾಗಿದೆ.
ವಾಣಿಜ್ಯ ಮಳಿಗೆಗಳು, ಅಂಗಡಿಗಳು, ಹೋಟೆಲ್‌ಗಳು ಸೇರಿದಂತೆ ಎಲ್ಲಡೆ ನಾಮಫಲಕಗಳಲ್ಲಿ ಕನ್ನಡವನ್ನು ದೊಡ್ಡದಾಗಿ ಅಂದರೆ ಶೇ 60ರಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬ ನಿಯಮ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಇಂಗ್ಲಿಷ್ ವಿಜೃಂಭಿಸುತ್ತಿದೆ. ಕನ್ನಡಕ್ಕೆ ‘ಮನ್ನಣೆ’ ದೊರೆಯುತ್ತಿಲ್ಲ. ಪೊಲೀಸ್ ಇಲಾಖೆಯವರು ಹಾಕುತ್ತಿರುವ ಸಂಚಾರ ನಿಯಮ ಸೂಚನಾಫಲಕಗಳಲ್ಲೂ ಕನ್ನಡ ಬಳಸುತ್ತಿಲ್ಲ. ಇದು ಕನ್ನಡಪರ ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಶ್ರೀಸಾಮಾನ್ಯರಿಗೆ ತೊಂದರೆ: ರೈತರು, ಜನಸಾಮಾನ್ಯರು ಸೇರಿದಂತೆ ಹಲವು ರೀತಿಯ ಜನರು ಗ್ರಾಹಕರಾಗಿರುವ ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲ ಸಿಬ್ಬಂದಿ ಇರಬೇಕು; ಅಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ತ್ರಿಭಾಷಾ ಸೂತ್ರ ಪಾಲನೆ ಆಗಬೇಕು ಎಂಬುದು ನಿಯಮ. ಇಲ್ಲಿ ಇದೂ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ.
ರಾಷ್ಟ್ರೀಕೃತ ಬ್ಯಾಂಕ್ ಪ್ರಧಾನ ಕಚೇರಿ ಅಥವಾ ಶಾಖೆಗಳಲ್ಲಿ ಇಂಗ್ಲಿಷ್ ಅಥವಾ ಹಿಂದಿಯದ್ದೇ ಮೇಲುಗೈ. ಇದರಿಂದಾಗಿ, ಸಮರ್ಪಕ ಹಾಗೂ ಸುಗಮವಾದ ಸೇವೆ ಪಡೆದುಕೊಳ್ಳಲು ‘ಕನ್ನಡಿಗರು’ ಪರದಾಡುವಂತಾಗಿದೆ. ಈ ಪರಿಸ್ಥಿತಿಗೆ, ಕೇಂದ್ರ ಸರ್ಕಾರದ ‘ಹಿಂದಿ ಹೇರಿಕೆ’ಯ ಧೋರಣೆಯೂ ಕಾರಣವಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಕನ್ನಡದ ಸಮರ್ಪಕ ಅನುಷ್ಠಾನದ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ‘ಪರಿಶೀಲನಾ ಕಾರ್ಯ’ ಕಂಡುಬರುತ್ತಿಲ್ಲ!
ಏನಾಗುತ್ತಿದೆ?: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಮ.ಗು. ಸದಾನಂದಯ್ಯ ಈ ಸನ್ನಿವೇಶದ ಕುರಿತು ಹೀಗೆ ಹೇಳುತ್ತಾರೆ; ಆಡಳಿತಾತ್ಮಕವಾಗಿಯೂ ಕನ್ನಡ ಬಳಕೆಯು ಪರಿಣಾಮಕಾರಿಯಾಗಿಲ್ಲ. ಅರಣ್ಯ ಇಲಾಖೆ, ಆರ್‌ಟಿಒ ಮೊದಲಾದವುಗಳ ಅರ್ಜಿ ನಮೂನೆಗಳು ಇಂಗ್ಲಿಷ್‌ನಲ್ಲಿರುತ್ತವೆ. ಇದೆಲ್ಲವೂ ರೈತರಿಗೆ ಹೇಗೆ ಅರ್ಥವಾಗುತ್ತದೆ?’ ಎಂದು ಕೇಳಿದರು.
‘ಅಪಾರ್ಟ್‌ಮೆಂಟ್‌ಗಳಲ್ಲಿ ಕನ್ನಡದ ಫಲಕಗಳಿಲ್ಲ. ಕೇಂದ್ರ ಸರ್ಕಾರದ ಸಂಸ್ಥೆ, ಬ್ಯಾಂಕ್‌ಗಳಲ್ಲಿ ತ್ರಿಭಾಷಾ ಸೂತ್ರ ಪಾಲಿಸುತ್ತಿಲ್ಲ. ಹೊರಗಿನ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ. ಜನಸಾಮಾನ್ಯರಿಗೆ ಇಂಗ್ಲಿಷ್ ತಿಳಿಯುವುದಿಲ್ಲ. ಹಲವು ಸಂಸ್ಥೆಗಳಲ್ಲಿ ಕನ್ನಡದ ಗಂಧಗಾಳಿಯೇ ಸುಳಿಯದಂತೆ ನೋಡಿಕೊಳ್ಳುತ್ತಿದ್ದಾರೆ. ಕನ್ನಡವು ಫಲಕಗಳಲ್ಲಿ ಚಿಕ್ಕದಾಗಿರುತ್ತದೆ. ಕನ್ನಡದ ವಚನ, ದಾಸರ ಪದಗಳನ್ನು ಕಲಿಸುವುದು ಅಥವಾ ಕಲಿಯುವವರ ಸಂಖ್ಯೆ ಕಡಿಮೆಯಾಗಿರುವುದು ಕಳವಳ ಮೂಡಿಸುತ್ತದೆ’ ಎನ್ನುತ್ತಾರೆ ಅವರು.
ನಡೆಯದ ಪರಿಶೀಲನೆ: ‘ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ದಿಢೀರ್ ಭೇಟಿ ನೀಡಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲಿಸುತ್ತಿದ್ದೆವು; ಎಚ್ಚರಿಕೆ ನೀಡುತ್ತಿದ್ದೆವು. ಈಗ, ಆ ಇಲಾಖೆಯ ಅಧಿಕಾರಿಗಳಿಗೆ ‘ವಿವಿಧ ಜಯಂತಿ’ ಆಚರಿಸುವುದೇ ದೊಡ್ಡ ಕೆಲಸವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕನ್ನಡವನ್ನು ಉಳಿಸಬೇಕೆಂದು ಗಡಿಯಲ್ಲಿ ಹೋರಾಟ ಮಾಡುವುದರಲ್ಲಿ ಅರ್ಥವಿದೆ. ಆದರೆ, ಮೈಸೂರಿನಲ್ಲೂ ಕನ್ನಡದ ಉಳಿವಿನ ಬಗ್ಗೆ ಮಾತನಾಡಬೇಕಾದ ಪರಿಸ್ಥಿತಿ ಬಂದಿರುವುದು ದುರಂತದ ಸಂಗತಿ. ಅಪಾರ್ಟ್‌ಮೆಂಟ್ ಸಂಸ್ಕೃತಿಯು ಕನ್ನಡವನ್ನು ಮರೆ ಮಾಡುತ್ತಿದೆ. ಹೀಗೆಯೇ ಮುಂದುವರಿದರೆ, ಭಾಷೆಯ ಜೊತೆಗೆ ಈ ನೆಲದ ಸಂಸ್ಕೃತಿಯೂ ಹಾಳಾಗುತ್ತದೆ. ಇದಕ್ಕೆ ಅವಕಾಶ ಆಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಅವರು.
ಇನ್ನೂ ಸುಧಾರಿಸಬೇಕಾದ ಸ್ಥಿತಿ ಕನ್ನಡದ ವಾತಾವರಣ ನಿರ್ಮಾಣವಾಗಲೆಂಬ ಆಶಯ ಅಪಾರ್ಟ್‌ಮೆಂಟ್ ಸಂಸ್ಕೃತಿಯಿಂದಲೂ ಕನ್ನಡಕ್ಕೆ ಕುತ್ತು: ಅಭಿಪ್ರಾಯ
ಕನ್ನಡ ಭಾಷೆ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಗರಪಾಲಿಕೆಗೆ ಇಚ್ಛಾಶಕ್ತಿ ಕೊರತೆ ಇದೆ. ಇದರಿಂದ ಮೈಸೂರಿನಂತಹ ಪ್ರದೇಶದಲ್ಲೂ ನಮ್ಮ ಭಾಷೆ ಸೊರಗುತ್ತಿದೆಮೋಹನ್ಕುಮಾರ್ ಗೌಡ ಅಧ್ಯಕ್ಷ ಕರ್ನಾಟಕ ಕಾವಲು ಪಡೆ ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.