ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ಕ್ಷೇತ್ರದ ಯುವಕರು ಹಾಗೂ ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ಉಚಿತ ತರಬೇತಿ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಮುಖ್ಯಮಂತ್ರಿ ಪುತ್ರ, ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಹಾಲಿ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ತರಬೇತಿ, ಮಾರ್ಗದರ್ಶನ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ವರುಣದ ಅಂಬೇಡ್ಕರ್ ಭವನದಲ್ಲಿ ನಾಲ್ಕು ತಿಂಗಳವರೆಗೆ ತರಬೇತಿ ನೀಡಲಾಗುವುದು. ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸುವ ಆಕಾಂಕ್ಷಿಗಳಿಗ, ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದಾರೆ.
ನ.11ರಿಂದ ನೋಂದಣಿ ಪ್ರಾರಂಭ ಗೊಳ್ಳಲಿದೆ. ನ.25ರೊಳಗೆ ಹೆಸರು ನೋಂದಾಯಿಸಿದವರಿಗೆ ಅವಕಾಶ ದೊರೆಯಲಿದೆ.
ಕೆಪಿಎಸ್ಸಿಯಿಂದ ನಡೆಸುವ ಕೆಎಎಸ್ ಮೊದಲಾದ ಪರೀಕ್ಷೆಗಳಿಗೆ, ಪಿಎಸ್ಐ, ಎಫ್ಡಿಎ, ಎಸ್ಡಿಎ, ಪಿಡಿಒ ಹಾಗೂ ಪೊಲೀಸ್ ಕಾನ್ಸ್ಟೆಬಲ್ ಹುದ್ದೆ ಗಳನ್ನು ಪಡೆಯಲು ಬಯಸುವವರು ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬೇಕಾಗುವ ಸಿದ್ಧತೆಯ ಕುರಿತು ಮಾರ್ಗದರ್ಶನವನ್ನು ಪಡೆಯಬಹುದಾಗಿದೆ.
ಪದವೀಧರರು, ಪದವಿ ವಿದ್ಯಾಭ್ಯಾಸ ಮಾಡುತ್ತಿರುವವರು ಹಾಗೂ ಪಿಯುಸಿ ಪಾಸಾದವರು ಪಾಲ್ಗೊಳ್ಳಬಹುದಾಗಿದೆ. ನೋಂದಣಿಗೆ ಮೊ.ಸಂ. 88670 71733 ಸಂಪರ್ಕಿಸಬಹುದು ಎಂದು ಕ್ಷೇತ್ರದಾದ್ಯಂತ ಪ್ರಚಾರ ಮಾಡಲಾಗುತ್ತಿದೆ.
ಅನುಕೂಲ: ಇದರಿಂದ ವರುಣ, ದಂಡಿಕೆರೆ, ಸಿದ್ದರಾಮನ ಹುಂಡಿ, ಯಡಕೊಳ, ಕುಪ್ಪೇಗಾಲ, ಹೊಸಹಳ್ಳಿ, ರಂಗನಾಥಪುರ, ಶ್ರೀನಿವಾಸಪುರ, ದೇವೇಗೌಡ ಹುಂಡಿ, ತುಮ್ಮನೇರಳೆ, ನಂದಿಗುಂದಿ, ಮರಡಿಹುಂಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ನಿರುದ್ಯೋಗಿ ಪದವೀಧರರಿಗೆ ಅನುಕೂಲವಾಗಲಿದೆ.
ಎಷ್ಟು ಮಂದಿ ನೋಂದಾಯಿ ಸುತ್ತಾರೆ ಎಂಬುದನ್ನು ನೋಡಿ ಕೊಂಡು ತರಬೇತಿಯ ವೇಳಾಪಟ್ಟಿಯನ್ನು ಸಿದ್ಧ ಪಡಿಸಲಾಗುತ್ತದೆ.
ದೂರದ ಊರಿಗೆ ಹೋಗುವುದು ತಪ್ಪುತ್ತದೆ: ಉದ್ಯೋಗ ಆಕಾಂಕ್ಷಿಯು ಪರೀಕ್ಷೆಯ ತರಬೇತಿಗೆಂದು ಬೆಂಗಳೂರು ಅಥವಾ ಧಾರವಾಡಕ್ಕೆ ಹೋಗಬೇಕಾದರೆ ₹50ಸಾವಿರದಿಂದ ₹60 ಸಾವಿರ ಬೇಕಾಗುತ್ತದೆ. ಸಮೀಪದಲ್ಲೇ ತರಬೇತಿ ದೊರೆತರೆ ಆ ಹಣ ಉಳಿಯಲಿದೆ. ಹೀಗಾಗಿ, ಇನ್ಮುಂದೆ ವರುಣ ಕ್ಷೇತ್ರದಲ್ಲೇ ಪ್ರತಿ ವರ್ಷ ತರಬೇತಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.
‘ಗ್ರಾಮೀಣ ಪ್ರದೇಶದ ಯುವಜನರು ಸರ್ಕಾರಿ ನೌಕರಿ ಪಡೆದುಕೊಳ್ಳಲು ಎದುರಿಸಬೇಕಾದ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ಸೂಕ್ತ ತರಬೇತಿಯ ಅಗತ್ಯವಿರುತ್ತದೆ. ಇದಕ್ಕೆಂದು ಅವರು ನಗರ ಪ್ರದೇಶಗಳಿಗೆ ಅಥವಾ ಬೆಂಗಳೂರು, ಧಾರವಾಡದಂತಹ ಕಡೆಗಳಿಗೆ ಹೋಗುವುದು ಆರ್ಥಿಕವಾಗಿ ಹೊರೆಯಾಗುತ್ತದೆ. ಹಣವನ್ನು ಹೊಂದಿಸುವುದು ಅವರಿಗೆ ಕಷ್ಟವಾಗುತ್ತದೆ. ಇದಕ್ಕಾಗಿ ಅವರಿಗೆ ಸಮೀಪದಲ್ಲೇ ತರಬೇತಿ ದೊರೆಯಲೆಂದು, ಕ್ಷೇತ್ರದಲ್ಲೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎನ್ನುತ್ತಾರೆ ಯತೀಂದ್ರ.
ನ.11ರಿಂದ ನೋಂದಣಿ 25ರವರೆಗೆ ಹೆಸರು ನೋಂದಾಯಿಸಬಹುದು ಪದವೀಧರರು, ಪದವಿ ವಿದ್ಯಾರ್ಥಿಗಳಿಗೆ ಅವಕಾಶ
ಇಂತಹ ತರಬೇತಿಯಿಂದ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಹೊಂದಬೇಕು ಎನ್ನುವವ ರಿಗೆ ಅನುಕೂಲವಾಗಲಿದೆ. ಕೋಚಿಂಗ್ ಕೇಂದ್ರಗಳಿಗೆ ಹೋಗಲಾರದ ಬಡವರಿಗೆ ಸಹಕಾರಿ ಆಗುತ್ತದೆ. ಇದು ನಿರಂತರವಾಗಿ ನಡೆಯಲಿದಂಡಿಕೆರೆ ನಾಗರಾಜ್ ಸಿಂಡಿಕೇಟ್ ಸದಸ್ಯ ಬೆಂಗಳೂರು ವಿಶ್ವವಿದ್ಯಾಲಯ
200 ಅಭ್ಯರ್ಥಿಗಳಿಗೆ ಅವಕಾಶ
ನಾಲ್ಕು ತಿಂಗಳ ಈ ತರಬೇತಿಯು ಡಿಸೆಂಬರ್ ಮೊದಲ ವಾರದಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ. ಒಟ್ಟು 200 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ನೋಂದಾಯಿಸಿದರಿಗೆ ವರುಣದಲ್ಲೇ ಪರೀಕ್ಷೆ ನಡೆಸಿ ಉತ್ತಮ ಅಂಕ ಗಳಿಸಿದ 200 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು. ಬೆಳಿಗ್ಗೆಯಿಂದ ಸಂಜೆವರೆಗೆ ಅಂದರೆ ದಿನದಲ್ಲಿ 6 ತಾಸು ತರಗತಿಗಳನ್ನು ನಡೆಸಲಾಗುವುದು. ಇದಕ್ಕೆ ಧಾರವಾಡದ ಫೋಕಸ್ ಕರಿಯರ್ ಅಕಾಡೆಮಿಯ ಸಹಯೋಗ ಪಡೆಯಲಾಗುತ್ತಿದೆ. ಇನ್ಸೈಟ್ ಐಎಎಸ್ ಅಕಾಡೆಮಿ ಮೊದಲಾದವುಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿರುವವರನ್ನು ಆಹ್ವಾನಿಸಲಾಗುವುದು. ಪ್ರತಿ ವಿಷಯದಲ್ಲೂ ಪರಿಣತಿ ಹೊಂದಿರುವ ಬೋಧಕರನ್ನು ಬಳಸಿ ಗುಣಮಟ್ಟದ ತರಬೇತಿ ಕೊಡಿಸಲು ಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.