ಮೈಸೂರು: ‘ಗಿರೀಶ ಕಾರ್ನಾಡರು ನವದೆಹಲಿಯಲ್ಲಿ ಕನ್ನಡಿಗರ ಘನತೆಯನ್ನು ಹೆಚ್ಚಿಸಿದ್ದರು’ ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಂ ಹೇಳಿದರು.
ಮೈಸೂರು ಸಾಹಿತ್ಯ ಸಂಭ್ರಮದ ‘ಗಿರೀಶ ಮಂಡಲದ ಸುತ್ತಾ ಒಂದು ಸುತ್ತು’ ಸಂವಾದದಲ್ಲಿ ಮಾತನಾಡಿದ ಅವರು, ‘ಗಿರೀಶ ಕಾರ್ನಾಡರ ಖ್ಯಾತಿ ಕರ್ನಾಟಕಕ್ಕಷ್ಟೇ ಸೀಮಿತವಾಗಿರಲಿಲ್ಲ. ದೇಶದಾದ್ಯಂತ ತಮ್ಮದೇ ಪ್ರಭಾವಳಿ ಹೊಂದಿದ್ದರು’ ಎಂದರು.
‘ಬೆಂಗಳೂರಿನ ಕುರಿತಂತೆ ಕಾದಂಬರಿ ಬರೆದವರು ಕಾರ್ನಾಡರು ಮಾತ್ರ. ಜೀವಿತದ ಕೊನೆ ಕ್ಷಣದವರೆಗೂ ವಾಸ್ತವತೆಯಲ್ಲಿ ಬದುಕಿದರು. ಕಲಿಯುವ ಹಪಾಹಪಿತನ ಅವರಲ್ಲಿತ್ತು. ರಂಗದ ಮೇಲೆ ಪ್ರದರ್ಶನಗೊಂಡರೆ ಮಾತ್ರ ಅದು ನಾಟಕ. ನಾಟಕ ಓದಲಲ್ಲ ಎಂದು ಪ್ರತಿಪಾದಿಸಿದವರು ಅವರಾಗಿದ್ದರು’ ಎಂದು ಕಾರ್ನಾಡರ ಒಡನಾಡಿ ಚಲನಚಿತ್ರ ನಿರ್ದೇಶಕ ಚೈತನ್ಯ ಕರೆಹಳ್ಳಿ ತಿಳಿಸಿದರು.
‘ಅಗ್ನಿ ಶ್ರೀಧರ್ ‘ಆ ದಿನಗಳು’ ಚಿತ್ರ ನಿರ್ದೇಶನಕ್ಕಾಗಿ ಗಿರೀಶ ಕಾಸರವಳ್ಳಿ ಸಂಪರ್ಕಿಸಿದರು. ಕಾಸರವಳ್ಳಿ ಭೂಗತ್ತ ಜಗತ್ತು ಚಿತ್ರಿಸಲ್ಲ ಎಂದರು. ನಾಗಾಭರಣ ಕಲ್ಲರಳಿ ಹೂವಾಗಿ ಚಿತ್ರಿಸುತ್ತಿದ್ದರು. ಕೊನೆಗೆ ನನ್ನ ಮೂಲಕ ಕಾರ್ನಾಡರನ್ನು ಸಂಪರ್ಕಿಸಿದರು. ಕಾರ್ನಾಡರು ಒಪ್ಪಿಕೊಂಡು ಮಾತುಕತೆಗೆ ಆಹ್ವಾನಿಸಿದರು. ಚರ್ಚೆಯ ನಡುವೆ ಇದನ್ನು ನಾನು ನಿರ್ದೇಶಿಸುವ ಬದಲು ಯುವಕ ಚೈತನ್ಯ ನಿರ್ದೇಶಿಸಲಿ ಎನ್ನುವ ಮೂಲಕ ನನ್ನ ಮೊದಲ ಚಿತ್ರದ ನಿರ್ದೇಶನಕ್ಕೆ ಕಾರ್ನಾಡರು ಕಾರಣಿಭೂತರಾದರು’ ಎಂದು ಚೈತನ್ಯ ನೆನಪಿಸಿಕೊಂಡರು.
ರಂಗಭೂಮಿ ನಟ ವೆಂಕಟೇಶ ಪ್ರಸಾದ ಕಾರ್ನಾಡರ ಜತೆಗಿನ ಕೊನೆಯ ದಿನಗಳ ಒಡನಾಟವನ್ನು ಸ್ಮರಿಸಿಕೊಂಡರು. ‘ನೆಹರೂ ಆಡಳಿತ ಟೀಕಿಸಿ ಕಾರ್ನಾಡರು ಬರೆದ ತುಘಲಕ್ ನಾಟಕ ಅಮೆರಿಕ, ಇಸ್ರೇಲ್ ಸೇರಿದಂತೆ ಭಾರತದ ಪ್ರತಿಯೊಂದು ಸರ್ಕಾರಕ್ಕೆ ಇಂದಿಗೂ ಅನ್ವಯವಾಗುತ್ತಿದೆ’ ಎಂದು ಪ್ರೀತಿ ನಾಗರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.