ADVERTISEMENT

ಸಮಕಾಲೀನತೆಗೆ ಕನ್ನಡಿ ಹಿಡಿದಿದ್ದ ಕಾರ್ನಾಡ

ಮಂಡ್ಯ ರಮೇಶ್‌
Published 10 ಜೂನ್ 2019, 19:49 IST
Last Updated 10 ಜೂನ್ 2019, 19:49 IST
ಮೈಸೂರಿನ ರಂಗಾಯಣವು 1997ರಲ್ಲಿ ಬಿಕ್ಕಟ್ಟಿನಲ್ಲಿದ್ದಾಗ, ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್‌ ಅವರೊಂದಿಗೆ ಕಲಾವಿದರ ಪರ ಮಾತನಾಡಲು ಗಿರೀಶ ಕಾರ್ನಾಡ ಬಂದಿದ್ದ ಸಂದರ್ಭ
ಮೈಸೂರಿನ ರಂಗಾಯಣವು 1997ರಲ್ಲಿ ಬಿಕ್ಕಟ್ಟಿನಲ್ಲಿದ್ದಾಗ, ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್‌ ಅವರೊಂದಿಗೆ ಕಲಾವಿದರ ಪರ ಮಾತನಾಡಲು ಗಿರೀಶ ಕಾರ್ನಾಡ ಬಂದಿದ್ದ ಸಂದರ್ಭ   

ಗಿರೀಶ ಕಾರ್ನಾಡರನ್ನು ಜನರು ಬೇರೆ ಬೇರೆ ಆಯಾಮಗಳಿಂದ ನೋಡಿದ್ದಾರೆ. ಸಾಮಾನ್ಯ ಜನರಿಗೆ ಅವರು ಯಾವಾಗಲೂ ಒಬ್ಬ ನಟ. ಆರಡಿ ದೇಹ, ಸುಂದರ ದೇಹದಾರ್ಢ್ಯ, ಸ್ಫುರದ್ರೂಪಿ, ಕನ್ನಡ ಮತ್ತು ಇಂಗ್ಲಿಷ್‌ ಅನ್ನು ಸ್ಫುಟವಾಗಿ ಮಾತನಾಡುತ್ತಾರೆ ಎನ್ನುವುದು ಅದಕ್ಕೆ ಕಾರಣ. ಜುಬ್ಬಾ ಹಾಕಿರುತ್ತಾರೆ, ಸ್ಟೈಲಿಶ್‌ ಆಗಿಯೂ ಇದ್ದಾರೆ ಎನ್ನುವ ಕಾರಣಕ್ಕಾಗಿ, ಇನ್ನೊಂದಿಷ್ಟು ಜನರಿಗೆ ಅವರು ಸಾಹಿತಿ. ಇನ್ನು ಕೆಲವು ಜನರಿಗೆ ಅವರು ಪ್ರಗತಿಪರ ಚಿಂತಕ.

ಆದರೆ, ವೈಯಕ್ತಿಕವಾಗಿ ನನಗೆ ಕಾರ್ನಾಡ ಅವರು ಇಡೀ ವಿಶ್ವದ ಮೊದಲ ಸಾಲಿನಲ್ಲಿ ನಿಲ್ಲುವ ನಾಟಕಕಾರ. ಏಕೆಂದರೆ, ಅವರ ಆರಂಭದ ‘ಹಿಟ್ಟಿನ ಹುಂಜ’ದಿಂದ ಹಿಡಿದು, ಈಚಿನ ‘ಬಲಿ’ ನಾಟಕದವರೆಗೂ ಬಂದು ಹೋದಂತಹ ಅವರ ನಾಟಕ ಪರಂಪರೆ ಅದ್ಭುತವಾದುದು. ‘ಯಯಾತಿ’, ‘ಹಯವದನ’, ‘ಅಗ್ನಿ ಮತ್ತು ಮಳೆ’, ‘ತಲೆದಂಡ’ ನಾಟಕಗಳಿಗೆ ಸರಿಸಮಾನವಾದ ನಾಟಕಗಳೇ ಇಲ್ಲ.

ಅವರು ಈ ತಮ್ಮ ನಾಟಕಗಳ ಮೂಲಕ ಬಹುದೊಡ್ಡ ಸವಾಲನ್ನು ಸ್ವೀಕರಿಸಿದ್ದರು. ಅದೆಂದರೆ, ‘ಕಾರ್ನಾಡ ಇಂಗ್ಲಿಷಿನಲ್ಲಿ ಯೋಚನೆ ಮಾಡ್ತಾರೆ; ಕನ್ನಡದಲ್ಲಿ ಬರೀತಾರಷ್ಟೇ’ ಎಂಬ ಕೆಲವರ ಟೀಕೆ. ಆದರೆ, ಸೂಟು ಬೂಟು ಹಾಕಿಕೊಂಡು ದಕ್ಷಿಣ ಏಷ್ಯಾದ ವಿದ್ವಾಂಸರ ಮುಂದೆ ಕಾರ್ನಾಡ ಮಂಡಿಸುವ ವಿಷಯ ಯಾವುದು? ಭಾರತ ಜಾನಪದ ಲೋಕವನ್ನು. ಜಾತಿ ಪದ್ಧತಿಯ ಬಗ್ಗೆ ಹೇಳುತ್ತಾ, ಅವುಗಳನ್ನು ವಿಮರ್ಶಿಸುತ್ತ ವಿಚಾರ ಕ್ರಾಂತಿ ಮಾಡಿದ ಅವರು ನನಗೆ ಸ್ಫೂರ್ತಿ ತುಂಬಿದ್ದಾರೆ.

ADVERTISEMENT

ಅವರ ‘ಅಗ್ನಿ ಮತ್ತು ಮಳೆ’ ಪೌರಾಣಿಕ ನಾಟಕದಲ್ಲಿ ಮಾಟ–ಮಂತ್ರದ ದೃಶ್ಯವೊಂದು ಬರುತ್ತದೆ. ಅದು ಬ್ರಹ್ಮರಾಕ್ಷಸನ ಪ್ರಸಂಗ. ಅದನ್ನು ಬರೆಯುವ ಮುಂಚೆ ಧಾರವಾಡದಲ್ಲಿ ಸುರೇಶ್‌ ಕುಲಕರ್ಣಿ ಎಂಬುವವರೊಂದಿಗೆಅಥರ್ವ ವೇದವನ್ನು ಅಧ್ಯಯನ ಮಾಡುತ್ತಾರೆ. ಸನ್ಯಾಸಿಯೊಬ್ಬರ ಮುಂದೆ ಮಂಡಿಯೂರಿ ಚರ್ಚೆ ಮಾಡಿ, ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಅವುಗಳ ಮೂಲಕ ಇವತ್ತಿನ ಕಾಲಕ್ಕೆ ಹೇಗೆ ರಾಕ್ಷಸ ಪ್ರವೃತ್ತಿ ನಮ್ಮಲ್ಲೂ ಇದೆ ಎನ್ನುವುದನ್ನು ವಿವರಿಸುತ್ತಾರೆ. ಎಂತಹ ವಿಚಾರ ಸಿಕ್ಕರೂ ಅದಕ್ಕೆ ಆಧುನಿಕ ಸ್ಪರ್ಶವನ್ನು ನೀಡುವ ಅವರ ಕಲೆ ನನಗೆ ಒಬ್ಬ ನಾಟಕಕಾರನಾಗಿ ಆತ್ಮೀಯವಾಗಿ ಕಾಣುತ್ತದೆ.

ಮೈಸೂರಿನ ರಂಗಾಯಣದಲ್ಲಿ: ಕಾರ್ನಾಡ ಕೇವಲ ಬೌದ್ಧಿಕ ಮಾತಿನ ಸರದಾರ ಅಲ್ಲ. ಜನಸಾಮಾನ್ಯರಿಗೂ ಸರಳವಾಗಿ ವಿಚಾರ ತಲುಪಿಸುತ್ತಾರೆ. ಇದಕ್ಕೆ ಸಾಕ್ಷಿಯಾಗಿದ್ದು ಮೈಸೂರಿನ ರಂಗಾಯಣ. ರಂಗಾಯಣಕ್ಕಾಗಿ ಅವರು ‘ತಲೆದಂಡ’ ನಾಟಕವನ್ನು ಬರೆದುಕೊಟ್ಟರು. ಈ ನಾಟಕದಲ್ಲಿ ಬಿಜ್ಜಳನು ಬಸವಣ್ಣನ ಬಳಿ ತನ್ನ ಮಗ ಸೋವಿದೇವನ ಬಗ್ಗೆ ಹೇಳುತ್ತಾನೆ; ‘ನಾವಿಷ್ಟೆಲ್ಲಾ ಕಷ್ಟಪಟ್ಟು ರಾಜಕೀಯ ಯಾಕೆ ಮಾಡ್ತೀವಿ. ಅಧಿಕಾರ ಯಾಕೆ ಪಡೀತೀವಿ? ಮಗನಿಗೋಸ್ಕರ ಬದುಕಬೇಕು. ನಿನಗೂ ಒಬ್ಬ ಮಗ ಇದ್ದಾನೆ ಯೋಚನೆ ಮಾಡು’ ಎಂದು. ಈ ವಿಚಾರಗಳು ಈಗಲೂ ಪ್ರಸ್ತುತ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇವತ್ತಿನ ರಾಜಕಾರಣಿಗಳು ಬಿಜ್ಜಳನಂತೆಯೇ ಮಾಡುತ್ತಿದ್ದಾರೆ ಅಲ್ಲವೇ?

ಯು.ಆರ್‌.ಅನಂತಮೂರ್ತಿ ಅವರ ‘ಸಂಸ್ಕಾರ’ ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಟಿಸಿದ ಅವರು, ಅದನ್ನು ನಟನೆಯೊಂದಿಗೇ ಬಿಟ್ಟುಕೊಡಲಿಲ್ಲ. ನನ್ನ ಸಾವಿನಲ್ಲಿ ಯಾವ ‘ಸಂಸ್ಕಾರ’ವನ್ನೂ ಮಾಡಬೇಡಿ ಎಂದು ಹೇಳಿ, ಅದರಂತೆ ನಡೆದುಕೊಂಡಿದ್ದು ಈಗಿನ ಕಾಲದಲ್ಲಿ ಅಪರೂಪವಾದ ಗುಣ. ನುಡಿದಂತೆಯೇ, ನಿರ್ಭೀತಿಯಿಂದ ಕಾರ್ನಾಡ ಬದುಕಿದರು.

ಅಗ್ನಿ ಮತ್ತು ಮಳೆಯ ನೆನಪು: ‘ಅಗ್ನಿ ಮತ್ತು ಮಳೆ’ ನಾಟಕವನ್ನು ನಿರ್ದೇಶಿಸಿದ್ದು ಬಲು ದೊಡ್ಡ ಹೆಸರನ್ನು ನನಗೆ ತಂದುಕೊಟ್ಟಿತು. 99ನೇ ಪ್ರದರ್ಶನ ಬೆಂಗಳೂರಿನ ‘ರಂಗಶಂಕರ‘ದಲ್ಲಿ ನಡೆಯಿತು. ಆ ನಾಟಕಕ್ಕೆ ಬಂದ ಕಾರ್ನಾಡ, ನಾಟಕವನ್ನು ಪೂರ್ಣ ವೀಕ್ಷಿಸಿ ಬೆನ್ನು ತಟ್ಟಿದ್ದರು.

‘ಏನಯ್ಯಾ, ಗ್ರಾಮೀಣ ಕಲಾವಿದರಿಂದ ಇಷ್ಟು ಗಂಭೀರವಾದ ನಾಟಕ ಮಾಡಿಸಿದ್ದೀಯಾ...’ ಎಂದು ಹುರಿದುಂಬಿಸಿದ್ದರು. ನನಗೆ ಅವರ ಬಗ್ಗೆ ಆರಾಧನಾ ಮನೋಭಾವವಿತ್ತು. ಅವರು ಎದುರಿಗೇ ಸಿಕ್ಕಿಬಿಟ್ಟಾಗ ಏನು ಮಾತನಾಡಬೇಕು ಎಂದು ತಿಳಿಯದೇ ಮೌನವಾಗಿಬಿಟ್ಟಿದ್ದೆ.

ನಿರೂಪಣೆ: ನೇಸರ ಕಾಡನಕುಪ್ಪೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.