ADVERTISEMENT

ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ: ದೇವನೂರ ಮಹಾದೇವ

ಪ್ರಚಾರ ಸಭೆಯಲ್ಲಿ ಸಾಹಿತಿ ದೇವನೂರ ಮಹಾದೇವ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಮೇ 2023, 3:26 IST
Last Updated 8 ಮೇ 2023, 3:26 IST
ತಲಕಾಡಿನಲ್ಲಿ ಭಾನುವಾರ ನಡೆದ ಸಭೆಯಲ್ಲಿ ದೇವನೂರ ಮಹಾದೇವ ಮಾತನಾಡಿದರು
ತಲಕಾಡಿನಲ್ಲಿ ಭಾನುವಾರ ನಡೆದ ಸಭೆಯಲ್ಲಿ ದೇವನೂರ ಮಹಾದೇವ ಮಾತನಾಡಿದರು   

ಮೈಸೂರು: ‘ಸಂವಿಧಾನ ವಿರೋಧಿ ಯಾದ ಬಿಜೆಪಿಯನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಬೇಕು’ ಎಂದು ಸಾಹಿತಿ ದೇವನೂರ ಮಹಾದೇವ ಸಲಹೆ ನೀಡಿದರು.

ತಲಕಾಡಿನಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಧರ್ಮ, ಜಾತಿಯ ಹೆಸರಿನಲ್ಲಿ ದ್ವೇಷ, ವಿಷಬೀಜ ಬಿತ್ತಿ ವಿಭಜನೆಗೆ ಕಾರಣವಾಗುವ ವ್ಯಕ್ತಿ ಹಾಗೂ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದೆ. ಪಿಎಫ್‌ಐ, ಬಜರಂಗದಳ ಸಂಘಟನೆಗಳ ನಿಷೇಧ ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕನಿಷ್ಠ ಅರ್ಹತೆಯಾಗಿರುತ್ತದೆ. ಆ ಕೆಲಸವನ್ನು ಮಾಡಲು ಹೊರಟಿರುವ ಪಕ್ಷವನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್‌, ಹಲಾಲ್‌, ಗೋ ಸಾಗಣೆ, ಗಲಭೆಗಳು ನಡೆದವು. ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಅನುಮಾನ ಬಂದಿತ್ತು. ಕಾನೂನು ಕೈಗೆತ್ತಿಕೊಳ್ಳುವ ‘ಬಜರಂಗದಳ ನಿಷೇಧ’ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗವಾಗಿ ವಿರೋಧಿಸುತ್ತಾರೆ. ಈ ಸಂಘಟನೆಗಳು ಅವಾಂತರ ಸೃಷ್ಟಿಸುವಾಗ ಸರ್ಕಾರವೊಂದು ಸುಮ್ಮನಿರಬೇಕೇ’ ಎಂದು ಪ್ರಶ್ನಿಸಿದರು.

ADVERTISEMENT

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಸದ ಶ್ರೀನಿವಾಸ ಪ್ರಸಾದ್‌ ಅವರು ‘ಅವಕಾಶವಾದಿ’ ಎಂದು ಹೇಳಿರುವುದಕ್ಕೆ ನಾನು ನೊಂದುಕೊಂಡೆ. ಖರ್ಗೆ ಅವರದ್ದು ಹಿತಮಿತ ವ್ಯಕ್ತಿತ್ವ. ನಂಬಿದ ಸಿದ್ಧಾಂತ, ಪಕ್ಷಕ್ಕೆ ಪರಮ ನಿಷ್ಠರು. ಅದೇ ರೀತಿ ಅವರ ಪುತ್ರ ಪ್ರಿಯಾಂಕ ಖರ್ಗೆ ಸಂಘ ಪರಿವಾರದವರ ಪಾಲಿಗೆ ಸಿಂಹಸ್ವಪ್ನದಂತಿದ್ದು, ಅವರ ವ್ಯಕ್ತಿತ್ವ ಮರಿಸಿಂಹದಂತಿದೆ. ಪ್ರಖರ ಬುದ್ಧಿವಂತ, ವಾಗ್ಮಿ ಆಗಿರುವ ಅವರ ವಿರುದ್ಧ ಬಿಜೆಪಿ ಮಣಿಕಂಠ ರಾಥೋಡ್‌ ರೌಡಿಶೀಟರ್‌ ಅನ್ನು ನಿಲ್ಲಿಸಿದೆ. ಈಗ ಆತ ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ. ಇದರ ವಿರುದ್ಧ ಪ್ರಗತಿಪರ ಸಂಘಟನೆಗಳು ರಾಜ್ಯದಾದ್ಯಂತ 1 ಗಂಟೆಗಳ ಧರಣಿ ಮಾಡಬೇಕು’ ಎಂದು ಸಲಹೆ ನೀಡಿದರು.

ದಸಂಸ ಮುಖಂಡರಾದ ಇಂದೂಧರ ಹೊನ್ನಾಪುರ, ಗುರು ಪ್ರಸಾದ್‌ ಕೆರಗೋಡು, ವಿ.ನಾಗರಾಜ್‌, ಆಲಗೂಡು ಶಿವಕುಮಾರ್‌, ಶಂಭುಲಿಂಗಸ್ವಾಮಿ, ಬಿ.ಡಿ.ಶಿವಬುದ್ಧಿ, ಕುಪ್ಪೆ ನಾಗರಾಜು, ಗ್ರಾ.ಪಂ ಅಧ್ಯಕ್ಷ ಕೆಂಪಯ್ಯ, ಕೆ.ನಾಗೇಶ್‌, ಸುಂದರ ನಾಯ್ಕ, ಸುಮಿತ್ರಾ ಬಾಯಿ, ಜನಾರ್ದನ್‌ (ಜನ್ನಿ), ರಾಜಣ್ಣ, ವಿಜಯ್‌ಕುಮಾರ್‌, ಕಿರಣ್‌ಕುಮಾರ್‌, ನಾಗೇಶ್‌, ಮನೋಜ್‌ಕುಮಾರ್, ತಲಕಾಡು ನಾಗರಾಜ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.