ADVERTISEMENT

ವಿಧಾನಸಭೆ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ 5 ವರ್ಷದಲ್ಲಿ 2.23 ಲಕ್ಷ ಮತದಾರರ ಏರಿಕೆ

ಚಾಮುಂಡೇಶ್ವರಿಯಲ್ಲಿ ಗರಿಷ್ಠ ಮತದಾರರು

ಬಾಲಚಂದ್ರ
Published 26 ಏಪ್ರಿಲ್ 2023, 6:17 IST
Last Updated 26 ಏಪ್ರಿಲ್ 2023, 6:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 26,55,998 ಮತದಾರರಿದ್ದಾರೆ. ಐದು ವರ್ಷದಲ್ಲಿ ಇಡೀ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ 2,23,650ರಷ್ಟು ಏರಿಕೆಯಾಗಿದೆ.

ಮಹಿಳೆಯರೇ ಮೇಲುಗೈ: ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗೆ ಹೋಲಿಸಿದರೆ, 21,516 ಮಹಿಳಾ ಮತದಾರರೇ ಹೆಚ್ಚಿದ್ದಾರೆ. 13,17,121 ಪುರುಷ ಮತದಾರರಿದ್ದರೆ, 13,38,637 ಮಹಿಳಾ ಮತದಾರರಿದ್ದಾರೆ. ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ ಪುರುಷರೇ ಹೆಚ್ಚಿನ ಮತದಾರರಿದ್ದು, ಉಳಿದ 9 ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ನರಸಿಂಹರಾಜದಲ್ಲಿ ಪುರುಷರಿಗಿಂತ 8,673 ರಷ್ಟು ಹೆಚ್ಚಿನ ಮಹಿಳಾ ಮತದಾರರನ್ನು ಹೊಂದಿದ ಕ್ಷೇತ್ರವಾಗಿದೆ.

ಚಾಮುಂಡೇಶ್ವರಿಯಲ್ಲಿ ಗರಿಷ್ಠ ಮತದಾರರು: ಪಾಲಿಕೆ ವ್ಯಾಪ್ತಿಯ ನಗರ ಹಾಗೂ ಗ್ರಾಮೀಣ ಭಾಗಗಳನ್ನು ಹೊಂದಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 3,29,141 ಮತದಾರರ ಮೂಲಕ ಜಿಲ್ಲೆಯಲ್ಲಿ ಗರಿಷ್ಠ ಮತದಾರರಿದ್ದರೆ, ಸಂಪೂರ್ಣ ಗ್ರಾಮೀಣ ಭಾಗವನ್ನು ಹೊಂದಿರುವ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 1,95,458 ಮತದಾರರ ಮೂಲಕ ಕಡಿಮೆ ಮತದಾರರಿದ್ದಾರೆ.

ADVERTISEMENT

230 ತೃತೀಯ ಲಿಂಗಿಗಳು: ಈ ಸಲದ ಮತಪಟ್ಟಿಯಲ್ಲಿ ತೃತೀಯಲಿಂಗಿಗಳನ್ನು ಪ್ರತ್ಯೇಕವಾಗಿ ದಾಖಲಿಸಿದ್ದು, ಜಿಲ್ಲೆಯಲ್ಲಿ 230 ತೃತೀಯ ಲಿಂಗಿ ಮತದಾರರಿದ್ದಾರೆ. ಇದರಲ್ಲಿ ನರಸಿಂಹರಾಜ (49), ಚಾಮುಂಡೇಶ್ವರಿ (35) ಗರಿಷ್ಠವಿದ್ದರೆ, ನಂಜನಗೂಡು (6), ಪಿರಿಯಾಪಟ್ಟಣ(7) ಕನಿಷ್ಠವಿದೆ.

ಪರಿಶೀಲನೆಗೂ ಅವಕಾಶ: ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿಯಾಗಿದೆಯೇ ಎಂಬುದನ್ನು ತಾವು ಇದ್ದಲ್ಲೇ https://ceo.karnataka.gov.in/finalroll_2023/ ಪರಿಶೀಲಿಸಿ, ಖಾತರಿಪಡಿಸಿಕೊಳ್ಳಬಹುದು. ಜಿಲ್ಲಾಡಳಿತದ ವೆಬ್‌ಸೈಟ್‌ https://mysore.nic.in/en/ನಲ್ಲಿ ಕೂಡ ಮಾಹಿತಿ ಲಭ್ಯವಿದೆ. ವೋಟರ್‌ ಹೆಲ್ಪ್‌ಲೈನ್‌ ಆ್ಯಪ್‌ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಖಾತರಿಪಡಿಸಿಕೊಳ್ಳಬಹುದು.

ಯಾವುದಾದರೂ ಚುನಾವಣಾ ಅಕ್ರಮದ ಕುರಿತು ಸಿ–ವಿಜಿಲ್‌ ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸಹಾಯವಾಣಿ 1950ಗೆ ರಾತ್ರಿ 8ರ ಒಳಗಾಗಿ ಕರೆ ಮಾಡಿ ತಿಳಿಸಲು ಅವಕಾಶ ಕಲ್ಪಿಸಿದೆ.

Highlights - ಪಟ್ಟಿಗೆ 230 ತೃತೀಯ ಲಿಂಗಿಗಳ ಸೇರ್ಪಡೆ ವೆಬ್‌ಸೈಟ್‌ನಲ್ಲಿ ಮತ ಚೀಟಿ ಪರಿಶೀಲನೆಗೂ ಅವಕಾಶ ಅಕ್ರಮ ಕಂಡುಬಂದರೆ ದೂರು ನೀಡಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.