ADVERTISEMENT

ಸಾರಾ ಮಹೇಶ್ ₹ 28.46 ಕೋಟಿಯ ಒಡೆಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 14:26 IST
Last Updated 20 ಏಪ್ರಿಲ್ 2023, 14:26 IST
   

ಮೈಸೂರು: ಕೆ.ಆರ್. ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿರುವ ಹಾಲಿ ಶಾಸಕ ಸಾ.ರಾ. ಮಹೇಶ್ ₹ 28.46 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಪತ್ನಿ ಅನಿತಾ ಹೆಸರಿನಲ್ಲಿರುವ ಆಸ್ತಿ ಮೌಲ್ಯ ₹ 24.21 ಕೋಟಿ ಆಗುತ್ತದೆ.

57 ವರ್ಷ ವಯಸ್ಸಿನ ಅವರು ಬಿ.ಎಸ್ಸಿ. ಪದವೀಧರರಾದ ಅವರು ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದು, ವೈಯಕ್ತಿಕ ವಿವರಗಳನ್ನು ನೀಡಿದ್ದಾರೆ.

ಮಹೇಶ್ ಹೆಸರಿನಲ್ಲಿ₹ 4.35 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹ 20.67 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಪಿತ್ರಾರ್ಜಿತವಾಗಿ ಬಂದ ₹ 3.44 ಕೋಟಿ ಮೌಲ್ಯದ ಆಸ್ತಿ ಇದೆ. ಅವರ ಪತ್ನಿ ₹ 3.39 ಕೋಟಿ ಚರಾಸ್ತಿ, ₹ 20.80 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ₹ 2 ಲಕ್ಷ ಮೌಲ್ಯದ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ಅವರ ಮಕ್ಕಳಿಬ್ಬರ ಹೆಸರಿನಲ್ಲೂ ಆಸ್ತಿ ಇದೆ.

ADVERTISEMENT

ಮಹೇಶ್ ₹ 10.53 ಕೋಟಿ ಸಾಲ ಹೊಂದಿದ್ದರೆ, ಪತ್ನಿ ಹೆಸರಿನಲ್ಲಿ ₹ 7.39 ಕೋಟಿ ಸಾಲ ಇರುವುದಾಗಿ ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಈ ದಂಪತಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಅವರ ಕೈಯಲ್ಲಿ ಕ್ರಮವಾಗಿ ₹ 50ಸಾವಿರ ಹಾಗೂ ₹ 40ಸಾವಿರ ನಗದು ಇದೆ.

ಮಹೇಶ್ ವಿವಿಧ ಬ್ಯಾಂಕ್‌ಗಳಲ್ಲಿ ₹ 11.21 ಲಕ್ಷ ಠೇವಣಿ ಇಟ್ಟಿದ್ದಾರೆ.₹ 20.70 ಲಕ್ಷ ಹೂಡಿಕೆ ಮಾಡಿದ್ದಾರೆ.₹ 28.98 ಲಕ್ಷ ಮೌಲ್ಯದ ವಿಮೆಗಳನ್ನು ಹೊಂದಿದ್ದಾರೆ. ಸ್ನೇಹಿತರು ಹಾಗೂ ಇತರರಿಂದ ಬರಬೇಕಿರುವ ಮೊತ್ತ ₹ 2.97 ಕೋಟಿ ಆಗುತ್ತದೆ ಎಂದು ತಿಳಿಸಿದ್ದಾರೆ.

ಒಂದು ಜೀಪ್, ಇನ್ನೋವಾ ಕ್ರಿಸ್ಟ ಕಾರು, ಫೋರ್ಡ್‌ (ಎಂಡೆವರ್) ಕಾರು ಹಾಗೂ ಮಹೀಂದ್ರ ಥಾರ್‌ ಸೇರಿದಂತೆ₹ 62.37 ಲಕ್ಷ ಮೌಲ್ಯದ ವಾಹನಗಳಿವೆ. ಅನಿತಾ ಅವರ ಹೆಸರಿನಲ್ಲಿ ₹ 30.84 ಲಕ್ಷ ಮೌಲ್ಯದ ಬೆಂಜ್ ಕಾರಿದೆ. 2 ಕೆ.ಜಿ. ಚಿನ್ನ, 35 ಕೆ.ಜಿ. ಬೆಳ್ಳಿ, ಸ್ನೇಹಿತರು–ಬಂಧುಗಳು ಉಡುಗೊರೆಯಾಗಿ ನೀಡಿದ ವಜ್ರದ ಉಂಗುರವಿದೆ, ಅದರ ಬೆಲೆ ತಿಳಿದಿಲ್ಲ ಎಂದು ಘೋಷಿಸಿದ್ದಾರೆ. 14 ಹಸು, 2 ಕುದುರೆ ಹಾಗೂ ₹ 50ಸಾವಿರ ಮೌಲ್ಯದ 2 ಗಡಿಯಾರಗಳಿವೆ ಎಂದು ಮಾಹಿತಿ ನೀಡಿದ್ದಾರೆ. ಪತ್ನಿ ಹೆಸರಿನಲ್ಲಿ ಚಿನ್ನಾಭರಣವಿಲ್ಲ. ಕೃಷಿ ಮತ್ತು ವ್ಯವಹಾರ ತಮ್ಮ ಆದಾಯದ ಮೂಲ ಎಂದು ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ.

ಅಬ್ದುಲ್‌ ಖಾದರ್ ನಾಮಪತ್ರ:

ನರಸಿಂಹರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಖಾದರ್ ಗುರುವಾರ ನಾಮಪತ್ರ ಸಲ್ಲಿಸಿದರು. ₹ 1.55 ಕೋಟಿ ಮೌಲ್ಯದ ಚರಾಸ್ತಿ, ₹ 7 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು ₹ 8.55 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ₹ 1.71 ಕೋಟಿ ಸಾಲವನ್ನೂ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.