ಮೈಸೂರು: ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರು ಸತತ 2ನೇ ದಿನವಾದ ಶುಕ್ರವಾರ ವರುಣ ಹೋಬಳಿ ಹಾಗೂ ತಿ.ನರಸೀಪುರ ತಾಲ್ಲೂಕಿನ ಹಳ್ಳಿಗಳಲ್ಲಿ ಶುಕ್ರವಾರ ಅಬ್ಬರದ ಪ್ರಚಾರ ನಡೆಸಿದರು. ಅವರಿಗೆ ಖ್ಯಾತ ಚಲನಚಿತ್ರ ನಟರಾದ ದುನಿಯಾ ವಿಜಯ್, ‘ಲೂಸ್ ಮಾದ’ ಯೋಗಿ ಹಾಗೂ ನಟಿ ನಿಶ್ವಿಕಾ ನಾಯ್ಡು, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರು ಸಾಥ್ ನೀಡಿದರು.
ಸಿದ್ದರಾಮಯ್ಯ ಅವರು ಚಿಕ್ಕಹಳ್ಳಿ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ದೊರೆಯಿತು. ಪಟಾಕಿ ಸಿಡಿಸಿ, ಹೂವಿನ ಸುರಿಮಳೆ ಮೂಲಕ ಬರಮಾಡಿಕೊಂಡರು. ಗುಲಾಬಿ ಹೂವುಗಳಿಂದ ಸಿದ್ಧಪಡಿಸಿದ್ದ ದೊಡ್ಡ ಹಾರವನ್ನು ಕ್ರೇನ್ ಮೂಲಕ ಹಾಕಿ ಸಂಭ್ರಮಿಸಿದರು. ಸಿದ್ದರಾಮಯ್ಯ, ವಿಜಿ ಹಾಗೂ ಯೋಗಿ ಪರವಾಗಿ ಜೈಕಾರ ಮೊಳಗಿತು.
‘ಈ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದ ಮುಖ್ಯ. 1978ರಲ್ಲಿ ನಾನು ತಾಲ್ಲೂಕು ಅಭಿವೃದ್ಧಿ ಮಂಡಳಿ ಸದಸ್ಯನಾಗಿ ರಾಜಕೀಯ ಆರಂಭ ಮಾಡಿದ್ದೇ ವರುಣ ಹೋಬಳಿಯಿಂದ. ಪಕ್ಕದ ಸಿದ್ದರಾಮನಹುಂಡಿ ಗ್ರಾಮದವನು ನಾನು. ಸ್ಥಳೀಯ. ನಿಮ್ಮವ. ಈ ಕ್ಷೇತ್ರದ ಮನೆ ಮಗ. ನನಗೆ ನೀವೆಲ್ಲರೂ ಮತ್ತೊಮ್ಮೆ ಆಶೀರ್ವಾದ ಮಾಡಬೇಕು’ ಎಂದು ಸಿದ್ದರಾಮಯ್ಯ ಕೋರಿದರು.
‘2013 ಹಾಗೂ 2018ರಲ್ಲಿ ಗೆಲ್ಲಿಸಿದ್ದಾಗ ಕ್ರಮವಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಆಗಿದ್ದೆ. ಈಗ ನನಗೆ ಮತ್ತೊಂದು ಅವಕಾಶವಿದೆ. ಅದು ಸಿಗಬೇಕಾದರೆ ನಿಮ್ಮವನಾದ ನನ್ನನ್ನು ಗೆಲ್ಲಿಸಿಕೊಡಿ’ ಎಂದು ಭಾವನಾತ್ಮಕವಾಗಿ ಮನವಿ ಮಾಡಿಕೊಂಡರು.
‘ಕ್ಷೇತ್ರದ ಎಲ್ಲೆಡೆ ಜನರು ನಿರೀಕ್ಷೆಗೂ ಮೀರಿ ಪ್ರೀತಿ- ವಿಶ್ವಾಸ ತೋರುತ್ತಿರುವುದರಿಂದ ನನಗೆ ಆತ್ಮವಿಶ್ವಾಸ ಜಾಸ್ತಿಯಾಗಿದೆ. ಒಂದು ಲಕ್ಷ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಬಂದಿದೆ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ನಾನು ಗೆಲ್ಲುವುದೂ ಅಷ್ಟೇ ಸತ್ಯ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನಮ್ಮ ಅವಧಿಯಲ್ಲಿ ಜಾರಿಗೆ ತಂದಿದ್ದ ಕಾರ್ಯಕ್ರಮಗಳು ಒಂದು ವರ್ಗ ಅಥವಾ ಜಾತಿಗೆ ಸೀಮಿತವಾಗಿರಲಿಲ್ಲ. ಅನ್ನ ಭಾಗ್ಯ, ಕೃಷಿ ಭಾಗ್ಯ, ಪಶು ಭಾಗ್ಯ, ಕ್ಷೀರಧಾರೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೆ. ರೈತರ ಅನುಕೂಲಕ್ಕಾಗಿ ಹಲವು ಕಾರ್ಯಕ್ರಮಗಳನ್ನು ತಂದಿದ್ದೆ. ವರುಣದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ವರುಣ ನಾಲೆ ಮಾಡಿದ್ದರಿಂದ ಈ ಭಾಗದ ರೈತರಿಗೆ ಬಹಳ ಅನುಕೂಲ ಆಗಿದೆ’ ಎಂದು ಹೇಳಿದರು.
ದುನಿಯಾ ವಿಜಯ್ ಮಾತನಾಡಿ, ‘ಸಿದ್ದರಾಮಯ್ಯ ಅವರ ಬಗ್ಗೆ ನಾನೇನೂ ಹೇಳಬೇಕಾಗಿಲ್ಲ. ಅವರು ನೀಡಿರುವ ಕೊಡುಗೆ ಹಾಗೂ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ್ದ ಯೋಜನೆಗಳ ಬಗ್ಗೆ ನಿಮಗೆ ಗೊತ್ತಿದೆ. ಅವರು ಈ ಕ್ಷೇತ್ರದ ಮನೆ ಮನ. ಅವರ ಕೈಬಿಡದೇ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕು’ ಎಂದು ಕೋರಿದರು.
‘ಸಿದ್ದರಾಮಯ್ಯ ಅವರು ಒಳ್ಳೆಯ ವ್ಯಕ್ತಿ. ಮತದಾರರು ಈ ಬಾರಿಯೂ ಅವರನ್ನು ಗೆಲ್ಲಿಸಬೇಕು’ ಎಂದು ಯೋಗಿ ಕೇಳಿಕೊಂಡರು.
ಮುಖಂಡರಾದ ವರುಣ ಮಹೇಶ್, ಆಲನಹಳ್ಳಿ ಪುಟ್ಟಸ್ವಾಮಿ, ಎಂ.ನೂತನ್, ಸಿ.ಬಸವೇಗೌಡ, ಕೆ.ಎಸ್.ಶಿವರಾಮ್, ಚಿಕ್ಕಜವರಪ್ಪ ಇದ್ದರು.
ಬಳಿಕ ಭುಗತಗಳ್ಳಿ, ವಾಜಮಂಗಲ, ಮೆಲ್ಲಹಳ್ಳಿ, ಹಾರೋಹಳ್ಳಿ, ಶಿವಪುರ ಹುನುಗನಹಳ್ಳಿಯಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.
ವಾಹನ ದಟ್ಟಣೆ: ಜನರಿಗೆ ತೊಂದರೆ
ಮೈಸೂರು: ಚಿಕ್ಕಹಳ್ಳಿಯಲ್ಲಿ ಸಿದ್ದರಾಮಯ್ಯ ಪ್ರಚಾರದ ವೇಳೆ ಪೊಲೀಸರು ಮುಂಜಾಗ್ರತೆ ವಹಿಸದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾದ್ದರಿಂದ ಜನರು ತೀವ್ರ ತೊಂದರೆ ಅನುಭವಿಸಿದರು. ಒಂದೂವರೆ ತಾಸಿಗೂ ಹೆಚ್ಚು ಸಮಯ ವಾಹನಗಳ ದಟ್ಟಣೆ ಉಂಟಾಯಿತು.
ಮೈಸೂರು–ತಿ.ನರಸೀಪುರ ಮುಖ್ಯರಸ್ತೆಯಲ್ಲೇ ಪ್ರಚಾರ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಅವರ ವಾಹನಗಳು ರಸ್ತೆಯಲ್ಲೇ ನಿಂತಿದ್ದವು. ಇದರಿಂದಾಗಿ, ಮೈಸೂರು ಹಾಗೂ ತಿ.ನರಸೀಪುರ ಕಡೆಗಳಿಂದ ಬರುತ್ತಿದ್ದ ವಾಹನಗಳು ಸಂಚರಿಸಲು ತೊಂದರೆಯಾಯಿತು. ಎರಡೂ ಕಡೆಯೂ ವಾಹನಗಳು ಕಿ.ಮೀ. ದೂರದವರೆಗೂ ಸಾಲುಗಟ್ಟಿ ನಿಂತು ಕಾಯಬೇಕಾಯಿತು. ರೋಗಿಯನ್ನು ಕರೆದುಕೊಂಡು ಬರಲು ಹೊರಟಿದ್ದ ಆಂಬುಲೆನ್ಸ್ ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿತ್ತು.
ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸದ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯು ಚಿಕ್ಕಹಳ್ಳಿ ಗ್ರಾಮದೊಳಕ್ಕೆ ಪ್ರವೇಶಿಸಿದ ನಂತರ, ಟ್ರಾಫಿಕ್ ಜಾಮ್ ಕಡಿಮೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.