ADVERTISEMENT

Karnataka Budget 2023: ಸಿದ್ದರಾಮಯ್ಯ ತವರು ಜಿಲ್ಲೆಗೆ ಸಿಗುತ್ತಾ ಬಂಪರ್‌ ಕೊಡುಗೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜ್ಯ ಬಜೆಟ್‌ ಮಂಡನೆ ನಾಳೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 6:55 IST
Last Updated 6 ಜುಲೈ 2023, 6:55 IST
ಕಡತ ಚಿತ್ರ
ಕಡತ ಚಿತ್ರ   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ (ಜುಲೈ 7) ಹೊಸ ಸರ್ಕಾರದ ಚೊಚ್ಚಲ ಹಾಗೂ ಹಣಕಾಸು ಸಚಿವರಾಗಿ ತಮ್ಮ 14ನೇ ಬಜೆಟ್‌ ಮಂಡಿಸಲಿದ್ದಾರೆ. ತವರು ಜಿಲ್ಲೆಗೆ ಏನೇನು ಕೊಡುಗೆ ಸಿಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲೇ ಐದು ‘ಗ್ಯಾರಂಟಿ’ ಯೋಜನೆಗಳನ್ನು ಘೋಷಿಸಿದ್ದು, ಅವುಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಸಿಗಲಿದೆ. ಈ ಹಿನ್ನೆಲೆಯಲ್ಲಿ ಉಳಿದ ಯೋಜನಗಳ ಪೈಕಿ ಯಾವೆಲ್ಲ ಕೆಲಸ–ಕಾರ್ಯಗಳಿಗೆ ಆದ್ಯತೆ ಸಿಗಲಿದೆ ಎನ್ನುವುದು ಸದ್ಯದ ಕುತೂಹಲ. ಸಾಂಸ್ಕೃತಿಕ ರಾಜಧಾನಿಯೆಂದೇ ಹೆಸರುವಾಸಿ ಆಗಿರುವ ಮೈಸೂರು ಪಾರಂಪರಿಕ ಕಟ್ಟಡಗಳಿಗೆ ಹೆಸರುವಾಸಿ. ಮೈಸೂರು ಅರಸರ ಆಳ್ವಿಕೆಯಲ್ಲಿ ನಿರ್ಮಾಣವಾದ ಭವ್ಯ ಭವನಗಳು ಇಲ್ಲಿನ ಹಿರಿಮೆ ಹೆಚ್ಚಿಸಿವೆ. ಆದರೆ ಇವುಗಳಲ್ಲಿ ಹೆಚ್ಚಿನವು ಶಿಥಿಲಾವಸ್ಥೆ ತಲುಪಿದ್ದು, ಅವುಗಳ ಪುನಶ್ಚೇತನಕ್ಕೆ ಅನುದಾನದ ನಿರೀಕ್ಷೆ ಇದೆ. ಮೈಸೂರನ್ನು ಪಾರಂಪರಿಕ ನಗರ ಎಂದು ಘೋಷಿಸಬೇಕು ಎಂಬ ಆಗ್ರಹವೂ ಈಚಿನ ದಿನಗಳಲ್ಲಿ ಕೇಳಿಬಂದಿದೆ.

ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಬೃಹತ್‌ ಆದ ಚಿತ್ರನಗರಿ ನಿರ್ಮಾಣ ಮಾಡಬೇಕು ಎನ್ನುವುದು ಬಹುದಿನಗಳ ಬೇಡಿಕೆ. ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ ಹತ್ತಾರು ರಮ್ಯ ರಮಣೀಯ ತಾಣಗಳೂ ಇಲ್ಲಿವೆ. ಈ ಹಿಂದೆ ಇಮ್ಮಾವಿನಲ್ಲಿ ಇದಕ್ಕಾಗಿ ಜಾಗ ಗುರುತಿಸಲಾಗಿತ್ತು. ಆದರೆ ನಂತರದಲ್ಲಿ ಬೆಂಗಳೂರಿಗೆ ಚಿತ್ರನಗರಿ ಸ್ಥಳಾಂತರ ಆಯಿತು. ಈಚೆಗೆ ಚಿತ್ರರಂಗದ ಪ್ರತಿನಿಧಿಗಳ ನಿಯೋಗವು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದೆ. ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲಿಯೇ ಇಮ್ಮಾವು ಇದ್ದು, ಈ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿಯ ಮುದ್ರೆ ಒತ್ತುವ ಸಾಧ್ಯತೆ ಇದೆ.

ADVERTISEMENT

ದಸರಾ ಎಂದರೆ ಮೊದಲು ನೆನೆಪಿಗೆ ಬರುವುದೇ ಮೈಸೂರು. ಪ್ರತಿ ವರ್ಷ ಇದಕ್ಕಾಗಿ ಕಡೆ ಕ್ಷಣದ ಸಿದ್ಧತೆಯ ಬದಲಿಗೆ ಇನ್ನಷ್ಟು ವ್ಯವಸ್ಥಿತವಾಗಿ ಈ ಕಾರ್ಯ ಆಗಬೇಕು. ಮೈಸೂರು ಪ್ರವಾಸೋದ್ಯಮದ ಹಬ್‌ ಆಗಿ ಬೆಳೆಯಬೇಕು ಎನ್ನುವ ಆಶಯ ಇಲ್ಲಿನ ಜನರದ್ದು. ಈ ಹಿನ್ನೆಲೆಯಲ್ಲಿ ದಸರಾಕ್ಕೆಂದೇ ಪ್ರತ್ಯೇಕ ಪ್ರಾಧಿಕಾರ ರಚನೆ ಆಗಬೇಕು ಎನ್ನುವ ಬೇಡಿಕೆ ಇದೆ. ಜೊತೆಗೆ ಚಾಮುಂಡಿಬೆಟ್ಟದ ಸುಸ್ಥಿರ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕು ಎನ್ನುವ ಬೇಡಿಕೆಯೂ ಇದೆ.

ಮೈಸೂರಿನ ಜನಸಂಖ್ಯೆ ಈಗಾಗಲೇ 13 ಲಕ್ಷ ದಾಟಿದೆ. ಇದಕ್ಕೆ ಅನುಗುಣವಾಗಿ ಬೃಹತ್‌ ಮೈಸೂರು ಮಹಾನಗರ ಪಾಲಿಕೆಯನ್ನು ರಚನೆ ಮಾಡಬೇಕು. ಮೈಸೂರು ಸುತ್ತ ಪೆರಿಪೆರಿಯಲ್ ರಿಂಗ್‌ ರಸ್ತೆ ನಿರ್ಮಾಣಕ್ಕೆ ಅನುದಾನ ಸಿಗಬೇಕು. ಜಿಲ್ಲೆಯ ಹೊಸ ತಾಲ್ಲೂಕುಗಳಾದ ಸರಗೂರು, ಸಾಲಿಗ್ರಾಮಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂಬುದೂ ಸೇರಿದಂತೆ ಈ ಭಾಗದ ಜನರ ಬೇಡಿಕೆಗಳಿಗೆ ಮುಖ್ಯಮಂತ್ರಿ ಈ ಬಾರಿಯ ಬಜೆಟ್‌ನಲ್ಲಿ ಸ್ಪಂದನೆ ದೊರೆಯುವ ನಿರೀಕ್ಷೆ ಇದೆ.


ಮೈಸೂರು ಜನರ ನಿರೀಕ್ಷೆಗಳಿವು

* ಮೈಸೂರು ಪಾರಂಪರಿಕ ನಗರವಾಗಿ ಘೋಷಣೆ
* ದಸರಾ ಪ್ರಾಧಿಕಾರ ರಚನೆ
* ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ
* ಮೈಸೂರಿನಲ್ಲಿ ಚಿತ್ರ ನಗರಿ ನಿರ್ಮಾಣ
* ಶತಮಾನದ ಇತಿಹಾಸ ಇರುವ ಮೈಸೂರು ವಿ.ವಿ.ಗೆ ಅನುದಾನ
* ಮೈಸೂರು ನಗರಕ್ಕೆ ಸುಸಜ್ಜಿತ ಬಸ್‌ ನಿಲ್ದಾಣ
* ಹೊಸ ತಾಲ್ಲೂಕುಗಳಾದ ಸಾಲಿಗ್ರಾಮ, ಸರಗೂರಿಗೆ ವಿಶೇಷ ಅನುದಾನ
* ಪೆರಿಪೆರಿಯಲ್ ರಿಂಗ್‌ ರಸ್ತೆ ನಿರ್ಮಾಣಕ್ಕೆ ಅನುದಾನ
* ಚಾಮುಂಡಿ ವಿಹಾರ ಕ್ರೀಡಾಂಗಣ ಅಭಿವೃದ್ಧಿ
* ಬೃಹತ್‌ ಮೈಸೂರು ಮಹಾನಗರ ಪಾಲಿಕೆ ರಚನೆ
* ತಾಲ್ಲೂಕು ಕ್ರೀಡಾಂಗಣಗಳ ಅಭಿವೃದ್ಧಿ
* ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನ
* ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ
* ನಗರದ ನಾಲ್ಕು ದಿಕ್ಕಿನಲ್ಲೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ

ಹುಣಸೂರು

* ಹುಣಸೂರು ಪಟ್ಟಣದ ಒಳಚರಂಡಿ ನಿರ್ಮಾಣಕ್ಕೆ ಡಿ.ಪಿ.ಆರ್. ಸಿದ್ಧಗೊಂಡು ಸರ್ಕಾಕ್ಕೆ ಸಲ್ಲಿಸಿದ್ದು ಅನುದಾನದ ನಿರೀಕ್ಷೆ.

* ದೇವರಾಜಅರಸು ಸಾರ್ವಜನಿಕ ಆಸ್ಪತ್ರೆ ಪೂರ್ಣಕ್ಕೆ ₹10 ಕೋಟಿ ಅನುದಾನ
* ಲಕ್ಷ್ಮಣತೀರ್ಥ ನದಿ ಶುದ್ಧೀಕರಣಕ್ಕೆ ವಿಶೇಷ ಪ್ಯಾಕೇಜ್

* ಹುಣಸೂರು ನಗರ ವಾಹನ ಸಂಚಾರ ನಿಯಂತ್ರಣಕ್ಕೆ ಟ್ರಾಫಿಕ್ ಸಿಗ್ನಲ್ ಮತ್ತು ಸಂಚಾರ ಪೊಲೀಸ್‌ ಠಾಣೆ

ಎಚ್.ಡಿ. ಕೋಟೆ

* ತಾರಕ ಏತ ನೀರಾವರಿ ಸಮರ್ಪಕ ವಿಸ್ತರಣೆ

* ಕಬಿನಿ ಮುಂಭಾಗ ಕೆಆರ್‌ಎಸ್‌ ಮಾದರಿ ಉದ್ಯಾನ ನಿರ್ಮಾಣ

* ಹೆಬ್ಬಾಳ ಜಲಾಶಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ

* ಸಣ್ಣ ಕೈಗಾರಿಕೆಗಳ ಸ್ಥಾಪನೆ

ತಲಕಾಡು


* ತಲಕಾಡು ಗ್ರಾ.ಪಂ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕು
* ತಲಕಾಡನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ
* ಹೊರ ವರ್ತುಲ ರಸ್ತೆ ಅಭಿವೃದ್ಧಿ

ಕೆ.ಆರ್.ನಗರ


* ಹೊಸ ಬಡಾವಣೆಗಳಲ್ಲಿ ಮೂಲ ಸೌಕರ್ಯಕ್ಕೆ ಅನುದಾನ
ಯಡತೊರೆಯಲ್ಲಿನ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿ ದೇವಸ್ಥಾನ ಪ್ರವಾಸಿ ತಾಣವಾಗಿ ಅಭಿವೃದ್ಧಿ
* ಕೈಗಾರಿಕೆಗಳ ಸ್ಥಾಪನೆ
* ವೈದ್ಯಕೀಯ, ಎಂಜಿನಿಯರಿಂಗ್, ನರ್ಸಿಂಗ್ ಕಾಲೇಜು ಸ್ಥಾಪನೆ

ಜಯಪುರ


* ಗಾರ್ಮೆಂಟ್ಸ್‌ ಕಾರ್ಖಾನೆಗಳ ಸ್ಥಾಪನೆ
* ಜಯಪುರ ಗ್ರಾ.ಪಂ.ಗೆ ಪಟ್ಟಣ ಪಂಚಾಯಿತಿ ಸ್ಥಾನಮಾನ
* ಪಿಯು, ಪದವಿ ಕಾಲೇಜು ಹಾಗೂ ಐಟಿಐ ಸ್ಥಾಪನೆ
* ಕೆರೆ ತುಂಬಿಸುವ ಯೋಜನೆಗಳಿಗೆ ಅನುದಾನ

ತಿ.ನರಸೀಪುರ

* ಸುಸಜ್ಜಿತ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ
* ಸರ್ಕಾರಿ ಬಸ್ ಡಿಪೊ ನಿರ್ಮಾಣ, ಹಳ್ಳಿಗಳಿಗೆ ಬಸ್ ಸೌಲಭ್ಯ ವಿಸ್ತರಣೆ
* ತಲಕಾಡು, ಸೋಮನಾಥಪುರ, ತಿ. ನರಸೀಪುರ ಪ್ರವಾಸೋದ್ಯಮ ಸರ್ಕ್ಯೂಟ್‌ ರಚನೆ
* ನಾಲೆಗಳ ಆಧುನೀಕರಣ

ಬೆಟ್ಟದಪುರ

* ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಬೆಟ್ಟದ ಪರಿಸರ ಅಭಿವೃದ್ಧಿ
* 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ
* ಕಸ ವಿಲೇವಾರಿ ಘಟಕ ಸ್ಥಾಪನೆ

ಸರಗೂರು


* ನೂತನ ತಾಲ್ಲೂಕು ಕೇಂದ್ರಕ್ಕೆ ವಿಶೇಷ ಅನುದಾನ
* ಜಯಚಾಮರಾಜೇಂದ್ರ ಕ್ರೀಡಾಂಗಣ ಅಭಿವೃದ್ಧಿ

* ಒಳಚರಂಡಿ ವ್ಯವಸ್ಥೆ ಸುಧಾರಣೆ
* ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ನಿರ್ಮಾಣ
* ಉಪ ನೋಂದಣಾಧಿಕಾರಿ ಕಚೇರಿ ಆರಂಭ

ಪಿರಿಯಾಪಟ್ಟಣ


* ಒಳಚರಂಡಿ ವ್ಯವಸ್ಥೆ ಕಾಮಗಾರಿ ಪೂರ್ಣಗೊಳಿಸಲು ಅನುದಾನ
ಪ್ರತ್ಯೇಕ ಹೆರಿಗೆ ಆಸ್ಪತ್ರೆ ಸ್ಥಾಪನೆ
ಕೆರೆ ನೀರು ತುಂಬಿಸುವ ಯೋಜನೆ ಪೂರ್ಣಗೊಳಿಸಲು ಅನುದಾನ

ನಂಜನಗೂಡು

* ಶ್ರೀಕಂಠೇಶ್ವರ ದೇವಸ್ಥಾನದ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಅನುದಾನ
* ಯಡಿಯಾಲ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಗೆ ಹಣ ಬಿಡುಗಡೆ
* ಮೈಸೂರಿನ ಉಪನಗರವಾಗಿ ನಂಜನೂಡು ಅಭಿವೃದ್ಧಿ
* ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚಿನ ಅನುದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.