ಮೈಸೂರು: ಇಲ್ಲಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಅಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಅವರಿಗೆ ಅವಕಾಶ ನೀಡಲಾಗಿದೆ.
ಟಿಕೆಟ್‌ಗಾಗಿ ರಾಮದಾಸ್ ಹಾಗೂ ‘ಮುಡಾ’ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷವು ಸಂಘಟನೆಯಲ್ಲಿ ತೊಡಗಿದ್ದ ಹೊಸ ಮುಖಕ್ಕೆ ಅಸ್ತು ಎಂದಿದೆ.
‘ಇದು ನನ್ನ ಕೊನೆಯ ಚುನಾವಣೆ, ಇದೊಂದು ಬಾರಿ ಅವಕಾಶ ಕೊಡಿ’ ಎಂಬ ರಾಮದಾಸ್ ಮನವಿಗೆ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಂದ ರಾಮದಾಸ್ ಅವರಿಗೆ ಟಿಕೆಟ್ ದೊರೆಯುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಎರಡು ಪಟ್ಟಿಗಳಲ್ಲೂ ರಾಮದಾಸ್ ಹೆಸರಿಲ್ಲದಿದ್ದರಿಂದ ಅವರಿಗೆ ಟಿಕೆಟ್ ದೊರೆಯುವುದಿಲ್ಲ ಎನ್ನುವುದು ದೃಢವಾಗಿತ್ತು. ಇದೀಗ, ಪಕ್ಷ ಅಧಿಕೃತವಾಗಿ ಪ್ರಕಟಿಸಿದೆ.
‘ನೀವು ಪಕ್ಷೇತರರಾಗಿ ಸ್ಪರ್ಧಿಸಬೇಕು’ ಎಂದು ಅವರ ಬೆಂಬಲಿಗರು ಅವರ ನಿವಾಸದ ಬಳಿಗೆ ಎರಡು ಬಾರಿ ಬಂದು ಒತ್ತಡ ಹೇರಿದ್ದರು.
ಸಂಘಟಕನಿಗೆ ಮಣೆ:
ಕ್ಷೇತ್ರದ ಟಿಕೆಟ್‌ಗೆ ತೀವ್ರ ಪೈಪೋಟಿ ಕಂಡುಬಂದಿದ್ದರಿಂದ ತೀವ್ರ ಕುತೂಹಲ ಉಂಟಾಗಿತ್ತು. ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ 8 ಮಂದಿ ಮತ್ತು 2ನೇ ಪಟ್ಟಿಯಲ್ಲಿ ಇಬ್ಬರ ಹೆಸರನ್ನು ಪಕ್ಷ ಘೋಷಿಸಿತ್ತು. ಆದರೆ, ಕೃಷ್ಣರಾಜ ಕ್ಷೇತ್ರದ ಟಿಕೆಟ್ ಬಾಕಿ ಉಳಿಸಿಕೊಂಡಿದ್ದರಿಂದ ಹಲವು ರೀತಿಯ ಚರ್ಚೆಗಳು ನಡೆದಿದ್ದವು. ರಾಮದಾಸ್–ರಾಜೀವ್ ಪೈಪೋಟಿಯ ನಡುವೆ ಪಕ್ಷವು 3ನೇ ವ್ಯಕ್ತಿಗೆ ಅವಕಾಶ ಕೊಟ್ಟಿದೆ. ಶ್ರೀವತ್ಸ ಕೂಡ ಬ್ರಾಹ್ಮಣ ಸಮಾಜದವರು.
ರಾಮದಾಸ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಅನೇಕ ನಾಯಕರನ್ನು ಭೇಟಿಯಾಗಿ ಮನವೊಲಿಸಿದ್ದರಾದರೂ ಫಲ ಸಿಕ್ಕಿಲ್ಲ. ಶ್ರೀವತ್ಸ ಹೆಸರು ಘೋಷಣೆಗೂ ಮುನ್ನ ರಾಮದಾಸ್ ಹಾಗೂ ಎಚ್.ವಿ.ರಾಜೀವ್ ಅವರನ್ನು ರಾಜ್ಯ ನಾಯಕರು ಬೆಂಗಳೂರಿಗೆ ಕರೆಸಿಕೊಂಡು ಸಮಾಲೋಚನೆ ನಡೆಸಿದ್ದರು. ಪಕ್ಷದ ಪರವಾಗಿ ಕೆಲಸ ಮಾಡಬೇಕು ಎಂದು ತಿಳಿ ಹೇಳಿದ್ದರು ಎನ್ನಲಾಗಿದೆ.
ಶ್ರೀವತ್ಸ ಹಲವು ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿದ್ದವರು. ವಾರ್ಡ್ ಅಧ್ಯಕ್ಷ, ಕೃಷ್ಣರಾಜ ಕ್ಷೇತ್ರ ಪ್ರಧಾನ ಕಾರ್ಯದರ್ಶಿ, ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2002ರಿಂದ 2006ರವರೆಗೆ ಮೈಸೂರು ನಗರ ಸಂಘಟನಾ ಪ್ರಧಾನ ಕಾರ್ಯದರ್ಶಿ, 2006ರಿಂದ 2018ರವರೆಗೆ ವಿಭಾಗೀಯ ಸಂಘಟನಾ ಕಾರ್ಯದರ್ಶಿ, ಬಿ.ಎಸ್.ಯಡಿಯೂರಪ್ಪ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದರು. 3 ವರ್ಷದಿಂದ ನಗರ ಘಟಕದ ಅಧ್ಯಕ್ಷರಾಗಿದ್ದಾರೆ. ಅವರ ಕೆಲಸವನ್ನು ಪಕ್ಷ ಗುರುತಿಸಿ, ಮನ್ನಣೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.