ADVERTISEMENT

ಮೈಸೂರು | ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 9:27 IST
Last Updated 13 ನವೆಂಬರ್ 2024, 9:27 IST
<div class="paragraphs"><p>ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಮತ್ತು ಕಲಾ ಕಾಲೇಜಿನ ನೂತನ ಹಾಸ್ಟೆಲ್ ಹಾಗೂ ವಿಜ್ಞಾನ ಕಾಲೇಜಿನ ನೂತನ ಕಟ್ಟಡ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು. ಡಾ. ಯತೀಂದ್ರ, ಡಾ. ಎಚ್.ಸಿ. ಮಹಾದೇವಪ್ಪ, ಡಾ. ಎಂ.ಸಿ. ಸುಧಾಕರ್, ಕೆ.ಎಂ. ಶಿವಲಿಂಗೇಗೌಡ ಇದ್ದಾರೆ.&nbsp;</p></div>

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಮತ್ತು ಕಲಾ ಕಾಲೇಜಿನ ನೂತನ ಹಾಸ್ಟೆಲ್ ಹಾಗೂ ವಿಜ್ಞಾನ ಕಾಲೇಜಿನ ನೂತನ ಕಟ್ಟಡ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು. ಡಾ. ಯತೀಂದ್ರ, ಡಾ. ಎಚ್.ಸಿ. ಮಹಾದೇವಪ್ಪ, ಡಾ. ಎಂ.ಸಿ. ಸುಧಾಕರ್, ಕೆ.ಎಂ. ಶಿವಲಿಂಗೇಗೌಡ ಇದ್ದಾರೆ. 

   

ಪ್ರಜಾವಾಣಿ ಚಿತ್ರ

ಮೈಸೂರು: ‘ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು, ಗ್ಯಾರಂಟಿ ಯೋಜನೆಗಳ ಜಾರಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ಉನ್ನತ ಶಿಕ್ಷಣ ಇಲಾಖೆಯಿಂದ ₹ 170 ಕೋಟಿ ವೆಚ್ಚದಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಮತ್ತು ಕಲಾ ಕಾಲೇಜಿನ ನೂತನ ಹಾಸ್ಟೆಲ್ ಹಾಗೂ ವಿಜ್ಞಾನ ಕಾಲೇಜಿನ ನೂತನ ಕಟ್ಟಡ, ₹ 49 ಕೋಟಿ ವೆಚ್ಚದಲ್ಲಿ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ 3, 4ನೇ ಅಂತಸ್ತು ಹಾಗೂ ಹಾಸ್ಟೆಲ್‌ನ 3ನೇ ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಹಿಂದುಳಿದವರು, ದುರ್ಬಲರು ಎಂಬ ಹಣೆಪಟ್ಟಿ ‌ಹೋಗಬೇಕಾದರೆ ಮಹಿಳೆಯರು ಸ್ವಾವಲಂಬಿಯಾಗಿ ಆಗಬೇಕಾಗುತ್ತದೆ. ಇದಕ್ಕಾಗಿ ಶಿಕ್ಷಣ ಪಡೆದುಕೊಳ್ಳಬೇಕು. ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು. ವೈಚಾರಿಕ ‍ಪ್ರಜ್ಞೆ ಬೆಳೆಸಿಕೊಳ್ಳಬೇಕು ಹಾಗೂ ವೈಜ್ಞಾನಿಕವಾಗಿ ವಿಚಾರ ಮಾಡುವುದನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

1,700 ವಿದ್ಯಾರ್ಥಿನಿಯರಿಗೆ ಅನುಕೂಲ

‘ಮಹಾರಾಣಿ ಕಾಲೇಜು ಮೈಸೂರಿನ ಪ್ರತಿಷ್ಠಿತ ‌ಕಾಲೇಜು. ಇಲ್ಲಿ ಒಟ್ಟು 11ಸಾವಿರ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಬಹುತೇಕರು ಸಾಮಾನ್ಯ ಕುಟುಂಬದಿಂದ ಬಂದವರೇ ಆಗಿದ್ದಾರೆ. ಅವರ ಅನುಕೂಲಕ್ಕಾಗಿ ಒಟ್ಟು ₹ 219 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದೇವೆ. ನೂತನ ಹಾಸ್ಟೆಲ್‌ನಿಂದ 1,700 ವಿದ್ಯಾರ್ಥಿನಿಯರಿಗೆ ಅವಕಾಶ ಸಿಗಲಿದೆ’ ಎಂದು ತಿಳಿಸಿದರು.

‘ಹೆಣ್ಣು ಕಲಿತರೆ ಶಾಲೆಯೊಂದು ತೆರೆದಂತೆಯೇ. ಹೀಗಾಗಿಯೇ, ಎಲ್ಲ ಹೆಣ್ಣು ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಉದ್ದೇಶ. ಶತಮಾನಗಳಿಂದಲೂ ಶೂದ್ರರಂತೆಯೇ ಮಹಿಳೆಯರನ್ನೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿತ್ತು. ಇದರಿಂದಾಗಿ ಇಂದಿಗೂ ಅಸಮಾನತೆಯನ್ನು ಕಾಣುತ್ತಿದ್ದೇವೆ’ ಎಂದರು.

24 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ

ಮೈಸೂರಿಗೆ ಮಹಾರಾಜರು ನೀಡಿದ ‌ಕೊಡುಗೆಯನ್ನು ಸ್ಮರಿಸಿದ ಅವರು, ‘ಈಗ ಶಂಕುಸ್ಥಾಪನೆ ಆಗಿರುವ ಹಾಸ್ಟೆಲ್‌ ಸೇರಿದಂತೆ ಎಲ್ಲ ಕಾಮಗಾರಿಗಳನ್ನು 24 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ’ ಎಂದರು.

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಮಾತನಾಡಿ, ‌‘ಪುರಾತತ್ವ ಇಲಾಖೆಯವರು ಒಪ್ಪಿದ ವಿನ್ಯಾಸದಲ್ಲಿ ಇಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮೈಸೂರು ಮಹಾರಾಜರ ಹೆಸರಿನಂತೆ ಸಿದ್ದರಾಮಯ್ಯ ಅವರ ಹೆಸರೂ ಅಜರಾಮರವಾಗಿ ಉಳಿಯುತ್ತದೆ. ಇಂತಹ ಅಭಿವೃದ್ಧಿ ಕೆಲಸಗಳು ದೂರದೃಷ್ಟಿ ಇರುವಂತಹ ನಾಯಕನಿಂದ ಮಾತ್ರ ಸಾಧ್ಯ’ ಎಂದು ಹೇಳಿದರು.

‘ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ತಾತ್ಕಾಲಿಕವಾಗಿ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು.

ಅಭಿವೃದ್ಧಿಯಾಗಿದ್ದೇ ಸಿದ್ದರಾಮಯ್ಯ ಬಂದ ಮೇಲೆ

ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ‘ಮೈಸೂರಿನಲ್ಲಿ ಅಭಿವೃದ್ಧಿ ಆಗಿರುವುದೇ ಸಿದ್ದರಾಮಯ್ಯ ಬಂದ ಮೇಲೆ. ಹಿಂದಿನ ಸರ್ಕಾರ ₹ 1.50 ಲಕ್ಷ ಕೋಟಿ ಸಾಲ ಉಳಿಸಿ ಹೋಗಿತ್ತು. ನಮ್ಮ ಸರ್ಕಾರವನ್ನು ಟೀಕಿಸುವವರು ಅಂಕಿ–ಅಂಶಗಳನ್ನು ಇಟ್ಟುಕೊಂಡು ಚರ್ಚೆಗೆ ಬರಲಿ. ನಾವೇನೂ ದಡ್ಡರಲ್ಲ. ಟೀಕಿಸುತ್ತಿರುವವರು ಬಜೆಟ್ ಬಗ್ಗೆ ತಿಳಿದುಕೊಳ್ಳಲಿ. ಗ್ಯಾರಂಟಿ ಯೋಜನೆಗಳನ್ನೂ ನೀಡಿ, ಯಾವುದೇ ಅಭಿವೃದ್ಧಿ ಕಾರ್ಯ‌ ನಿಲ್ಲದಂತೆ ಸಿದ್ದರಾಮಯ್ಯ ನೋಡಿಕೊಂಡಿದ್ದಾರೆ’ ಎಂದರು.

‘ಅಂದು ದೇವರಾಜ ಅರಸು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ‌ ನೀಡಿದಂತೆ, ಸಿದ್ದರಾಮಯ್ಯ ಅವರು ಈಗ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಮಾಡುತ್ತಿದ್ದಾರೆ. ಟೀಕಿಸುವವರು ಕಾಮಾಲೆ ಕಣ್ಣಿನವರು, ಅವರಿಗೆ ಏನೂ ಮಾಡಲಾಗದು. ಮುಖ್ಯಮಂತ್ರಿ ಉತ್ತಮ ಹಾಗೂ ದಕ್ಷ ಆಡಳಿತ ನಡೆಸುತ್ತಿದ್ದಾರೆ. ಶೋಷಿತ ವರ್ಗಗಳ ದನಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ‘ಮೈಸೂರಿನಲ್ಲಿ ಉಳಿಯಲು ಆಗದೇ ಇರುವ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಮೊಟಕುಗೊಳಿಸುತ್ತಿದ್ದುದು ಕಂಡುಬಂದಿತ್ತು. ಆದ್ದರಿಂದ ಈಗ, ಹಾಸ್ಟೆಲ್ ಕಟ್ಟಿಸಲಾಗುತ್ತಿದೆ’ ಎಂದರು.

‘ಬಿಜೆಪಿಯವರು ಈ ಕಾಲೇಜುಗಳ ಅಭಿವೃದ್ಧಿಗೆ ಬಿಡಿಗಾಸನ್ನೂ ಕೊಟ್ಟಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ಮೈಸೂರಿಗೆ ಹೆಚ್ಚಿನ ಅನುದಾನ ನೀಡಿ ಸಾಕಷ್ಟು ಅನುದಾನವನ್ನು ಕೊಟ್ಟಿದ್ದಾರೆ. ಸೂರ್ಯ– ಚಂದ್ರ ಇರುವವರೆಗೂ ಸಿದ್ದರಾಮಯ್ಯ ಅವರ ಹೆಸರು ಅಜರಾಮರವಾಗಿರುತ್ತದೆ’ ಎಂದು ಹೇಳಿದರು.

‘ಹಲವು ಆಸ್ಪತ್ರೆಗಳನ್ನು ನಿರ್ಮಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡಲು ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ತನ್ವೀರ್‌ ಸೇಠ್‌, ವಿಧಾನಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಎಂ.ಸತ್ಯನಾರಾಯಣ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆ ಎನ್.ಮಂಜುಶ್ರೀ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ. ಸಿಇಒ ಕೆ.ಎಂ.ಗಾಯಿತ್ರಿ, ಮಹಾರಾಣಿ ಕಾಲೇಜುಗಳು ಪ್ರಾಂಶುಪಾಲರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.