ADVERTISEMENT

ರಾಜ್ಯ ಸರ್ಕಾರ ಯಾವುದೇ ಕ್ಷಣದಲ್ಲಾದರೂ ಪತನ ಆಗಬಹುದು: ಕೆ.ಎಸ್. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 10:10 IST
Last Updated 4 ನವೆಂಬರ್ 2023, 10:10 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಮೈಸೂರು: ಜಾತಿಗಣತಿ ವರದಿ ಕುರಿತು ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ಜಾತಿಗಣತಿಗೆ ವೀರಶೈವ ಲಿಂಗಾಯತ, ಒಕ್ಕಲಿಗ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸದ್ಯಕ್ಕೆ ವರದಿ ಬಿಡುಗಡೆ ಆಗುವುದಿಲ್ಲ. ಸಿದ್ದರಾಮಯ್ಯ ಜಾತಿ ವಿಚಾರವನ್ನು ಮುಂದಿಟ್ಟುಕೊಂಡು ದಲಿತ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅವರಿಗೆ ಈ ಎಲ್ಲರ ಶಾಪ ತಟ್ಟಲಿದೆ’ ಎಂದು ದೂರಿದರು.

‘ಜಾತಿಗಣತಿ ವರದಿಯನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಕಚ್ಚಾಡುತ್ತಿದ್ದಾರೆ. ಈ ವರದಿಗೆ ಕಾರ್ಯದರ್ಶಿಯ ಸಹಿಯೇ ಆಗಿಲ್ಲ, ಹೀಗಾಗಿ ಅದು ಅವೈಜ್ಞಾನಿಕ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ. ಸಹಿಯೇ ಆಗದಿದ್ದರೆ ಅದನ್ನು ಕಸದ ಬುಟ್ಟಿಗೆ ಹಾಕಬೇಕಷ್ಟೇ’ ಎಂದರು.

ADVERTISEMENT

ಶೀಘ್ರ ಸರ್ಕಾರ ಪತನ: ರಾಜ್ಯ ಸರ್ಕಾರ ಯಾವುದೇ ಕ್ಷಣದಲ್ಲಿ ಪತನ ಆಗಬಹುದು. ಆಗ ಮತ್ತೆ ಚುನಾವಣೆಗೆ ಹೋಗುವುದು ಉತ್ತಮ ಮಾರ್ಗ ಎಂದು ಈಶ್ವರಪ್ಪ ಹೇಳಿದರು.

‘ಸಿದ್ದರಾಮಯ್ಯ ನೆನ್ನೆವರೆಗೆ ನಾನೇ ಐದು ವರ್ಷ ಮುಖ್ಯಮಂತ್ರಿ ಎನ್ನುತ್ತಿದ್ದರು. ಅದಕ್ಕೆ ವಿರೋಧ ವ್ಯಕ್ತ ಆಗುತ್ತಿದ್ದಂತೆ ಹೈಕಮಾಂಡ್ ಹೇಳಿದಂತೆ ಕೇಳುವೆ ಎನ್ನುತ್ತಿದ್ದಾರೆ. ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ ತಿರುಗಿ ಬೀಳುತ್ತಿದ್ದಂತೆ ಅವರಿಗೆ ಹೈಕಮಾಂಡ್ ನೆನಪಾಗಿದೆ’ ಎಂದು ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.