ADVERTISEMENT

ಪೆನ್‌ಡ್ರೈವ್ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ನವೀನ್‌ ಗೌಡ ಗೊತ್ತಿಲ್ಲ: ಎ.ಮಂಜು

​ಪ್ರಜಾವಾಣಿ ವಾರ್ತೆ
Published 12 ಮೇ 2024, 15:45 IST
Last Updated 12 ಮೇ 2024, 15:45 IST
<div class="paragraphs"><p>ಎ.ಮಂಜು</p></div>

ಎ.ಮಂಜು

   

ಮೈಸೂರು: ‘ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ನನ್ನ ಹೆಸರನ್ನು ಎಳೆದು ತಂದಿರುವ ನವೀನ್ ಗೌಡ ಯಾರೆಂಬುದು ನನಗೆ ಗೊತ್ತಿಲ್ಲ’ ಎಂದು ಅರಕಲಗೂಡು ಶಾಸಕ ಎ.ಮಂಜು ಸ್ಪಷ್ಟಪಡಿಸಿದರು.

‘ಶಾಸಕ ಎ.ಮಂಜುಗೆ ಪೆನ್‌ಡ್ರೈವ್ ನೀಡಿದ್ದೆ’ ಎಂದು ಆರೋಪಿ ನವೀನ್‌ ಗೌಡ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿರುವ ಕುರಿತು ಇಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಏ.21ರಂದು ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಅಲ್ಲಿ ನೂರಾರು ಜನರನ್ನು ಮಾತನಾಡಿಸಿದ್ದೇನೆ. ಅವರಲ್ಲಿ ನವೀನ್‌ ಗೌಡ ಎನ್ನುವವರ‍್ಯಾರು ಎಂಬುದು ತಿಳಿದಿಲ್ಲ’ ಎಂದು ಹೇಳಿದರು.

ADVERTISEMENT

‘ನನಗೆ ಆತ ಯಾವುದೇ ಪೆನ್‌ಡ್ರೈವ್ ಕೊಟ್ಟಿಲ್ಲ. ಆತನ ಹಿಂದೆ ಯಾರೋ ಪ್ರಬಲರು ಇರುವುದು ಸತ್ಯ. ಆ ಬಗ್ಗೆ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

‘ಆತನ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಸೋಮವಾರ ಅರಕಲಗೂಡು ಠಾಣೆಗೆ ದೂರನ್ನೂ ಕೊಡುತ್ತೇನೆ. ನನ್ನ ಮತ್ತು ಎಚ್‌.ಡಿ. ದೇವೇಗೌಡರ ಸಂಬಂಧ ಹಾಳು ಮಾಡಲು ಈ ರೀತಿ ಮಾಡಲಾಗುತ್ತಿದೆ. ನೀಚ ರಾಜಕಾರಣವನ್ನು ನಾನು ಯಾವತ್ತೂ ಮಾಡಿಲ್ಲ. ಮೊದಲು ನವೀನ್ ಗೌಡ ಎನ್ನುವವನನ್ನು ಬಂಧಿಸಲಿ. ಅವನ ಮೂಲಕವೇ ಪೆನ್‌ಡ್ರೈವ್‌ ಇತಿಹಾಸ ತಿಳಿಯುತ್ತದೆ’ ಎಂದರು.

‘ಅವನನ್ನು ಬಂಧಿಸಲು ತಡವಾಗುತ್ತಿದೆ ಏಕೆ?’ ಎಂದು ಕೇಳಿದರು.

‘ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ನನ್ನ ಕೈ ಹಿಡಿದವರು ದೇವೇಗೌಡರು. ಅವರ ಕುಟುಂಬಕ್ಕೆ ದ್ರೋಹ ಎಸಗುವ ಕೆಲಸ ಮಾಡುವುದಿಲ್ಲ. ಪೆನ್‌ಡ್ರೈವ್‌ ಪ್ರಕರಣದಿಂದ ದೇವೇಗೌಡರು ಬಹಳ ನೊಂದಿದ್ದಾರೆ. ಅವರನ್ನು ಈಚೆಗೆ ಭೇಟಿ ಆಗಿದ್ದಾಗ, ಈ ವಿಚಾರದ ಬಗ್ಗೆ ಯಾಕೆ ಮೊದಲೇ ತಿಳಿಸಲಿಲ್ಲ ಎಂದು ನೊಂದು ಕೇಳಿದರು. ಯಾರಿಗೂ ಇಂತಹ ಸ್ಥಿತಿ ಬರಬಾರದು’ ಎಂದರು.

‘ಎಚ್.ಡಿ. ರೇವಣ್ಣ ಅವರನ್ನು ಕಾರಾಗೃಹದಲ್ಲಿ ಭೇಟಿಯಾಗಿ ಧೈರ್ಯ ತುಂಬಿದ್ದೇನೆ. ದೇವೇಗೌಡರ ಕುಟುಂಬದ ಜೊತೆಯಲ್ಲೇ ಇದ್ದೇನೆ. ಈ ಕಾರಣಕ್ಕಾಗಿಯೇ ಪ್ರಕರಣದಲ್ಲಿ ನನ್ನ ಹೆಸರು ಎಳೆದುತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.