ADVERTISEMENT

ಆರ್‌ಎಸ್‌ಎಸ್‌ನವರು ಕಳ್ಳರು, ಸುಳ್ಳು ಹೇಳುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 10:52 IST
Last Updated 30 ನವೆಂಬರ್ 2022, 10:52 IST
ಮೈಸೂರಿನಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಕನಕ ಜಯಂತ್ಯುತ್ಸವದಲ್ಲಿ ಸಂಘದವರು ನೀಡಿದ ಬೆಳ್ಳಿಯ ಖಡ್ಗವನ್ನು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರದರ್ಶಿಸಿದರು. ಕಾಗಿನೆಲೆ ಕನಕ ಗುರುಪೀಠದ  ನಿರಂಜನಾನಂದಪುರಿ ಸ್ವಾಮೀಜಿ, ಅಧ್ಯಕ್ಷ ಸುಬ್ರಹ್ಮಣ್ಯ ಇದ್ದಾರೆ.
ಮೈಸೂರಿನಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಕನಕ ಜಯಂತ್ಯುತ್ಸವದಲ್ಲಿ ಸಂಘದವರು ನೀಡಿದ ಬೆಳ್ಳಿಯ ಖಡ್ಗವನ್ನು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರದರ್ಶಿಸಿದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಅಧ್ಯಕ್ಷ ಸುಬ್ರಹ್ಮಣ್ಯ ಇದ್ದಾರೆ.   

ಮೈಸೂರು: ‘ಆರ್‌ಎಸ್‌ಎಸ್‌ನವರು ಕಳ್ಳರು, ಸುಳ್ಳು ಹೇಳುತ್ತಾರೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘ ನಗರ, ತಾಲ್ಲೂಕು ಹಾಗೂ ಜಿಲ್ಲಾ ಘಟಕದಿಂದ ಇಲ್ಲಿನ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕನಕ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪಟ್ಟಭದ್ರ ಹಿತಾಸಕ್ತಿಗಳು ಸಮಾಜದಲ್ಲಿ ಬದಲಾವಣೆ ಬಯಸುವುದಿಲ್ಲ. ಆರ್‌ಎಸ್‌ಎಸ್‌ನವರು ಬದಲಾವಣೆ ಬೇಡ ಎನ್ನುತ್ತಾರೆ. ಶೋಷಣೆ, ದೌರ್ಜನ್ಯ ಮಾಡುವುದಕ್ಕಾಗಿ ಅಸಮಾನತೆ ಇರಲೆಂದು ಬಯಸುತ್ತಾರೆ. ಮುಸ್ಲಿಮರನ್ನು ಬೆದರು‌ಬೊಂಬೆಯಾಗಿ ಇಟ್ಟುಕೊಂಡು ದೇಶವನ್ನು ಒಡೆಯುತ್ತಿದ್ದಾರೆ. ಸಂಘ ಪರಿವಾರದವರು ಬಹಳ ನಾಜೂಕಾಗಿ ಮಾತನಾಡುತ್ತಾರೆ. ಅವರ ಬಗ್ಗೆ ಎಚ್ಚರ ವಹಿಸಬೇಕು. ಜಾಗೃತರಾಗಬೇಕು’ ಎಂದರು.

ADVERTISEMENT

‘ಆರ್‌ಎಸ್‌ಎಸ್‌ನವರು, ನಮ್ಮದು ದೇಶಭಕ್ತರನ್ನು ಹುಟ್ಟು ಹಾಕುತ್ತಿರುವ ಸಂಸ್ಥೆ ಎನ್ನುತ್ತಾರೆ. ಅವರಲ್ಲಿ ಯಾರಾದರೊಬ್ಬರು ದೇಶಕ್ಕಾಗಿ ತ್ಯಾಗ–ಬಲಿದಾನ ಮಾಡಿದ್ದಾರಾ? ಇದೆಲ್ಲವನ್ನೂ ತಿಳಿದುಕೊಂಡು, ವಿಚಾರವಂತರಾಗಬೇಕು. ಶಿಕ್ಷಣ ಪಡೆಯಬೇಕು. ಸಾಮಾಜಿಕ ಅವ್ಯವಸ್ಥೆಗೆ ಕಾರಣವಾದವರನ್ನು ದೂರವಿಡಬೇಕು’ ಎಂದು ತಿಳಿಸಿದರು.

‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಬರೆದಿದ್ದ ಕೇಕ್‌ ಕತ್ತರಿಸಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಮತ್ತು ಹಾಲುಮತ ಸಮಾಜದ ಮುಖಂಡರೊಂದಿಗೆ ಜನ್ಮದಿನ ಆಚರಿಸಿಕೊಂಡರು. ಸಂಘದವರು ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿದರು.

ಮುಖ್ಯ ಭಾಷಣ ಮಾಡಿದ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ, ‘ಈಗ ಬದಲಾಣೆಯ ಗಾಳಿ ಬೀಸಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಮತದಾರರಿಗೆ ಮತ್ತೊಂದು ಅವಕಾಶ ಬಂದಿದೆ. ಅವರು ಅಧಿಕಾರಕ್ಕೆ ಬಂದಲ್ಲಿ ಭಾರತದ ಸಂತ ಸಾಹಿತ್ಯದ ಪುನರುಜ್ಜೀವನಗೊಳಿಸಲು ಸಮಿತಿಯನ್ನು ರಚಿಸಬೇಕು. ಸಂಪುಟಗಳನ್ನು ಹೊರತರಬೇಕು. ಅವೇ ನಮ್ಮ ಸಂವಿಧಾನವನ್ನು ರಕ್ಷಣೆ ಮಾಡುತ್ತವೆ’ ಎಂದು ಆಶಯ ವ್ಯಕ್ತಪಡಿಸಿದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.