ADVERTISEMENT

ಜಾತ್ಯತೀತ ಮುಕುಟವನ್ನು ಮಣ್ಣಿಗೆ ಕೆಡವಿದ ಗೌಡರ ಕುಟುಂಬ: ಬಿ.ಟಿ. ಲಲಿತಾ ನಾಯಕ್‌

‘ಕುವೆಂಪು ಕ್ರಾಂತಿಕಹಳೆ–50’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
<div class="paragraphs"><p>ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶನಿವಾರ ‘ಕುವೆಂಪು ಕ್ರಾಂತಿಕಹಳೆ–50’ ಕಾರ್ಯಕ್ರಮವನ್ನು ಹೋರಾಟಗಾರ್ತಿ ಬಿ.ಟಿ. ಲಲಿತಾ ನಾಯಕ್‌ ಅವರು ಕುವೆಂಪು ಸಂದೇಶ ಓದಿ ಉದ್ಘಾಟಿಸಿದರು. </p></div>

ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶನಿವಾರ ‘ಕುವೆಂಪು ಕ್ರಾಂತಿಕಹಳೆ–50’ ಕಾರ್ಯಕ್ರಮವನ್ನು ಹೋರಾಟಗಾರ್ತಿ ಬಿ.ಟಿ. ಲಲಿತಾ ನಾಯಕ್‌ ಅವರು ಕುವೆಂಪು ಸಂದೇಶ ಓದಿ ಉದ್ಘಾಟಿಸಿದರು.

   

ಮೈಸೂರು: ‘ನಾನು ಜನತಾದಳ ಸರ್ಕಾರದಲ್ಲಿ ಸಚಿವೆಯಾಗಿದ್ದಾಗ ಎಚ್‌.ಡಿ. ದೇವೇಗೌಡರು ತಮ್ಮ ಜಾತ್ಯತೀತ ತತ್ವಗಳಿಂದ ನಮಗೆಲ್ಲ ಮಾದರಿಯಾಗಿದ್ದರು. ಆದರೆ ಇಂದು ಅವರು ಹಾಗೂ ಅವರ ಕುಟುಂಬದವರೇ ಕೇಸರಿ ಶಾಲು ಹೊದ್ದು ಆ ಮುಕುಟವನ್ನು ಮಣ್ಣಿಗೆ ಬೀಳಿಸಿದ್ದಾರೆ’ ಎಂದು ಹೋರಾಟಗಾರ್ತಿ ಬಿ.ಟಿ. ಲಲಿತಾ ನಾಯಕ್‌ ವಿಷಾದಿಸಿದರು.

ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶನಿವಾರ ಜಾಗೃತ ಕರ್ನಾಟಕ ಸಂಘಟನೆಯು ಆಯೋಜಿಸಿದ್ದ ‘ಕುವೆಂಪು ಕ್ರಾಂತಿಕಹಳೆ–50’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಎಲ್ಲರೂ ಕುವೆಂಪು ಸಾಹಿತ್ಯ ಓದಿದ್ದರೆ ಇಂದು ಮಂಡ್ಯದ ಕೆರಗೋಡಿನಲ್ಲಿ ರಾಷ್ಟ್ರಧ್ವಜಕ್ಕೆ ಬದಲಾಗಿ ಧರ್ಮ ಧ್ವಜ‌ ಹಾರಿಸುವ ಪ್ರಯತ್ನ ಮಾಡುತ್ತಿರಲಿಲ್ಲ. ಇಂದಿನ ರಾಜಕೀಯ ಸಜ್ಜನಿಕೆ‌ ಕಳೆದುಕೊಂಡಿದ್ದು, ಸಂಪೂರ್ಣ ಗುಲಾಮಗಿರಿಗೆ ಮನಸ್ಸುಗಳು ಹೊಂದಿಕೊಂಡಿವೆ. ಜಾತ್ಯತೀತ ಮನೋಭಾವ ಬೆಳಸಿಕೊಳ್ಳದ ಸ್ಥಿತಿಗೆ ಬದಲಾಗಿದ್ದೇವೆ’ ಎಂದು ದೂರಿದರು.

ADVERTISEMENT

‘ರಾಮನ ಪಟ್ಟಾಭಿಷೇಕ ನೋಡಿದ್ದೆವೆ, ಮುಂದೆ ಮೋದಿ ಪಟ್ಟಾಭಿಷೇಕವನ್ನೂ ನೋಡುತ್ತೇವೆ ಎಂದು ಸ್ವಾಮೀಜಿಯೊಬ್ಬರು ಹೇಳುತ್ತಾರೆ. ಹಾಗಿದ್ದರೆ ನಾವು ರಾಜಪ್ರಭುತ್ವಕ್ಕೆ ಮರಳುತ್ತಿದ್ದೇವೆಯೇ?’ ಎಂದು ಪ್ರಶ್ನಿಸಿದರು.

ಪ್ರಧಾನ ಭಾಷಣ ಮಾಡಿದ ಲೇಖಕ ಎಲ್‌.ಎನ್. ಮುಕುಂದರಾಜ್‌, ‘ಜೆಡಿಎಸ್ ಅನ್ನು ಕನ್ನಡದ ಪಕ್ಷವೆಂದು ಬೆಂಬಲಿಸಿದ್ದೆವು. ಆದರೆ ಈಗ ಹಸಿರು ಶಾಲು ತೆಗೆದು‌ ಕೇಸರಿ ಶಾಲು ಬದಲಿಸಿದ್ದಾರೆ. ಹೀಗಾದ ಮಾತ್ರಕ್ಕೆ ಕಾರ್ಯಕರ್ತರು ಬದಲಾಗುತ್ತಾರಾ? ಕುಮಾರಸ್ವಾಮಿ ಎಂದಾದರೂ ಬಿಜೆಪಿ ಬಿಟ್ಟು ಬಂದರೂ, ಈಗ ಬಿಜೆಪಿ ಸೇರುತ್ತಿರುವ ಕಾರ್ಯಕರ್ತರು ಬಿಜೆಪಿ ಬಿಟ್ಟು ವಾಪಸ್‌ ಬರುವುದಿಲ್ಲ. ಈ ಎಚ್ಚರಿಕೆ ಅವರಿಗಿರಬೇಕು. ಎಸ್.ಬಂಗಾರಪ್ಪನವರ ಬದುಕು ಅವರಿಗೆ ಪಾಠವಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.