ADVERTISEMENT

ಧೈರ್ಯವಿದ್ದರೆ ತನಿಖೆ ನಡೆಸಲಿ: ಸಿಎಂ ಬೊಮ್ಮಾಯಿಗೆ ಧ್ರುವನಾರಾಯಣ ಸವಾಲು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 7:42 IST
Last Updated 11 ಸೆಪ್ಟೆಂಬರ್ 2022, 7:42 IST
ಆರ್.ಧ್ರುವನಾರಾಯಣ
ಆರ್.ಧ್ರುವನಾರಾಯಣ   

ಮೈಸೂರು: 'ಕಾಂಗ್ರೆಸ್ ಸರ್ಕಾರದಲ್ಲಿ ಶೇ 100ರಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧೈರ್ಯವಿದ್ದರೆ ತನಿಖೆ ನಡೆಸಿ ಎಲ್ಲವನ್ನೂ ಬಯಲಿಗೆಳೆಯಲಿ' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಸವಾಲೆಸೆದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, 'ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಹೆಸರಿನ ಸಮಾವೇಶದಲ್ಲಿ ರೋಷಾವೇಷದಿಂದ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿರುವ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರು ವಿರೋಧ ಪಕ್ಷದಲ್ಲಿದ್ದಾಗ ಸುಮ್ಮನೆ ಇದ್ದರೇಕೆ? ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಬಯಲಿಗೆ ಎಳೆಯಲಿಲ್ಲವೇಕೆ?' ಎಂದು ಖಾರವಾಗಿ ಪ್ರಶ್ನಿಸಿದರು.

'ನಮ್ಮ ಸರ್ಕಾರವಿದ್ದಾಗ ರೂಪಿಸಿದ್ದ ಜನಪರ ಕಾರ್ಯಕ್ರಮಗಳಿಗೆ ಈ ಸರ್ಕಾರ ಅನುದಾನ ಕಡಿತಗೊಳಿಸಿದೆ' ಎಂದು ಆರೋಪಿಸಿದ ಧ್ರುವನಾರಾಯಣ, ಈಗಿನ ಸರ್ಕಾರ ರೂಪಿಸಿದ ಯೋಜನೆಗಳು ಹಾಗೂ ನಮ್ಮ ಆಡಳಿತದಲ್ಲಿನ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ' ಎಂದು ಹೇಳಿದರು.

ADVERTISEMENT

'ಯಾವುದೇ ಕಾರ್ಯಕ್ರಮ ಕೊಟ್ಟಿಲ್ಲವಾದ್ದರಿಂದ ಹೇಳಿಕೊಳ್ಳುವ ಧೈರ್ಯ‌ ಬಿಜೆಪಿಯವರಿಗೆ ಇಲ್ಲ. ಹೀಗಾಗಿ ಜನಸ್ಪಂದನ ಸಮಾವೇಶದಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ' ಎಂದು ಟೀಕಿಸಿದರು.

'ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯವರು‌ ನಡೆಸಿದ ಜನಸ್ಪಂದನ ಸಮಾವೇಶದಲ್ಲಿ ಜನರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವ ಬದಲಿಗೆ ಕಾಂಗ್ರೆಸ್ ವಿರುದ್ಧ ವ್ಯಾಪಕ ಟೀಕೆ ಮಾಡಿರುವುದನ್ನು‌ ಬಲವಾಗಿ ಖಂಡಿಸುತ್ತೇನೆ. ಅಧಿಕಾರದಲ್ಲಿರುವ ಪಕ್ಷ ಸಮಸ್ಯೆಗಳಿಗೆ ಪರಿಹಾರ ಕೊಡುವುದು ಬಿಟ್ಟು ಮೋಜಿನ ಔತಣ ಕೂಟ ನಡೆಸಿದೆ. ವಿರೋಧ ಪಕ್ಷಗಳನ್ನು ಟೀಕಿಸಲು ಮಾಡಿದ ಕಾರ್ಯಕ್ರಮ ಅದಾಗಿದೆ. ಮುಖ್ಯಮಂತ್ರಿ ಹುದ್ದೆ ಘನತೆಗೆ ತಕ್ಕಂತೆ‌ ಬೊಮ್ಮಾಯಿ ಮಾತನಾಡಿಲ್ಲ. ಧಮ್ ಇದ್ದರೆ, ತಾಕತ್ತಿದ್ದರೆ ಎಂಬ ಪದಗಳನ್ನು ಪ್ರಯೋಗಿಸಿರುವುದು ವಿಷಾದನೀಯ' ಎಂದರು.

'ಬಿಜೆಪಿಯವರಿಗೆ ವಿರೋಧ ಪಕ್ಷದಲ್ಲಿದ್ದಾಗ ಜವಾಬ್ದಾರಿ ಇರಲಿಲ್ಲವೇ? ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿತ್ತೋ ಅದನ್ನು ಕೇಳಲಿಲ್ಲವೇಕೆ? ಆಗಲೂ‌ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇತ್ತಲ್ಲವೇ?. ಶೇ 100ರಷ್ಟು ಭ್ರಷ್ಟಾಚಾರ ನಡೆದಿತ್ತು ಎನ್ನುತ್ತೀರಲ್ಲಾ ಯಾವ ನೈತಿಕತೆ ಇದೆ‌ ನಿಮಗೆ?' ಎಂದು ಕೇಳಿದರು.

'ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು, ಈಗಿನ ಸರ್ಕಾರದ ಭ್ರಷ್ಟಾಚಾರವನ್ನು ‌ಧೈರ್ಯವಾಗಿ ಬಯಲಿಗೆ ಎಳೆದಿದ್ದೇವೆ. ನೀವೇನು ಮಾಡುತ್ತಿದ್ದಿರಿ' ಎಂದು ಪ್ರಶ್ನಿಸಿದರು.

'ನಾವು ಶೇ 100ರಷ್ಟು ಕಮಿಷನ್ ತಗೊಂಡಿದ್ದೇ ಆಗಿದ್ದಲ್ಲಿ, ನಿಮ್ಮ ಸರ್ಕಾರ ಬಂದ ಮೇಲಾದರೂ ತನಿಖೆ ನಡೆಸಲಿಲ್ಲವೇಕೆ? ನಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲವೇಕೆ? ಚುನಾವಣೆ ಸಮೀಪಿಸುತ್ತಿರುವಾಗ ನೀವು ಮಾಡುವ ನಾಟಕ ಅರ್ಥವಾಗುವುದಿಲ್ಲ ಎಂದುಕೊಂಡಿದ್ದೀರಾ?' ಎಂದು ಟೀಕಿಸಿದರು.

'ರಾಜ್ಯದಲ್ಲಿ‌ ನೆರೆ ಹಾಗೂ ಅತಿವೃಷ್ಟಿಯಿಂದಾಗಿ ಅಪಾರ ನಷ್ಟ, ಹಾನಿ‌ ಸಂಭವಿಸಿ‌ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಚಿವ ಉಮೇಶ ಕತ್ತಿ ಅಕಾಲಿಕ ನಿಧನರಾಗಿದ್ದು, ತಿಥಿ ಕಾರ್ಯವೂ ನಡೆದಿಲ್ಲ. ಅವರ ಫೋಟೊ ಇಟ್ಟುಕೊಂಡು ಡ್ಯಾನ್ಸ್ ಮಾಡುತ್ತೀರಿ ಎಂದರೆ ಏನನ್ನಬೇಕು? ಯಾವ ಪುರುಷಾರ್ಥಕ್ಕೆ ಮೋಜು ಮಾಡುತ್ತಿದ್ದೀರಿ?' ಎಂದು ವಾಗ್ದಾಳಿ ನಡೆಸಿದರು.

'ಕಾಂಗ್ರೆಸ್ ಬಗ್ಗೆ ಭಯ ಪ್ರಾರಂಭ ಆಗಿರುವುದರಿಂದಲೇ ಬಿಜೆಪಿಯವರು ಸುಳ್ಳು ಆರೋಪಗಳಲ್ಲಿ ತೊಡಗಿದ್ದಾರೆ. ಅಕ್ಕಿ ಮೋದಿ ಅವರದ್ದು, ಖಾಲಿ ಚೀಲ ಸಿದ್ದರಾಮಯ್ಯ ಅವರದ್ದು ಎಂದು ಮುಖ್ಯಮಂತ್ರಿ ಹೇಳಿರುವುದು ವಿಷಾದನೀಯ. ಕೇಂದ್ರದಲ್ಲಿ ನಮ್ಮ ಯುಪಿಎ ಸರ್ಕಾರವಿದ್ದಾಗ ಆಹಾರ ಭದ್ರತಾ ಕಾಯ್ದೆ ತಂದಿದ್ದು ನೆನಪಿಲ್ಲವೇ?' ಎಂದರು.

'ಈ ಮುಖ್ಯಮಂತ್ರಿ ಯೋಗದಿಂದ ಬಂದವರೇ‌ ಹೊರತು ಯೋಗ್ಯತೆಯಿಂದ ಬಂದವರಲ್ಲ. ಅವರಿಗೆ, ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ' ಎಂದು ತಿರುಗೇಟು ನೀಡಿದರು.

'ಮುಂಬರುವ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಸಾರಥ್ಯ ಹಾಗೂ ಬೊಮ್ಮಾಯಿ ನೇತೃತ್ವ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ. ಹಾಗಿದ್ದರೆ ಅವರ ಪಾತ್ರವೇನು? ಭಜನಾ ಮಂಡಳಿ ಅಧ್ಯಕ್ಷರಾಗಲು ಅವರು ಲಾಯಕ್ ಆಗಿದ್ದಾರೆ' ಎಂದು ಟೀಕಿಸಿದರು.

'ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದ ಸಚಿವೆ ಸ್ಮೃತಿ‌ ಇರಾನಿ ಅವರಿಗೆ ರಾಹುಲ್ ಗಾಂಧಿ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಅವರು ಕೇಂದ್ರದಿಂದ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳೇನು ಎನ್ನುವುದನ್ನು ತಿಳಿಸಬೇಕಿತ್ತು. ಬದಲಿಗೆ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ' ಎಂದರು.

ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಮುಖಂಡ ಭಾಸ್ಕರ್ ಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.