ಮೈಸೂರು: ‘ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮೊದಲಾದ ಅನ್ಯಭಾಷಿಕರ ಎದುರು ನಾವು ಕನ್ನಡಿಗರು ಎಂದು ಹೇಳಿಕೊಳ್ಳಲು ನಾಚಿಕೆಪಟ್ಟುಕೊಳ್ಳುವುದು ಸರಿಯಲ್ಲ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಇಲ್ಲಿನ ದೊಡ್ಡಕೆರೆ ಮೈದಾನ ದಲ್ಲಿರುವ ದಸರಾ ವಸ್ತುಪ್ರದರ್ಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕನ್ನಡ ಸಮೃದ್ಧವಾದ ಭಾಷೆ. ಸುಲಭವಾಗಿ ಅರ್ಥವಾಗುತ್ತದೆ. ಉದ್ಯೋಗ, ಉದ್ಯಮ ಸೇರಿದಂತೆ ವಿವಿಧ ಉದ್ದೇಶಕ್ಕಾಗಿ ಬಂದು ನಮ್ಮ ನೆಲದಲ್ಲಿ ಬದುಕುತ್ತಿರುವ ಎಲ್ಲರಿಗೂ ಅದರಲ್ಲೂ ಬೇರೆ ಭಾಷೆಯವರಿಗೆ ಕನ್ನಡವನ್ನು ಕಲಿಸುವ ಕಾರ್ಯವಾಗಬೇಕು. ಇಲ್ಲಿನ ಸೌಲಭ್ಯಗಳನ್ನೆಲ್ಲಾ ಬಳಸಿಕೊಳ್ಳುತ್ತಿರುವ ನೀವು ನಮ್ಮ ಭಾಷೆಯನ್ನು ಕಲಿತುಕೊಳ್ಳಿ ಎಂದು ಹೇಳುವಂತಹ ದಕ್ಷತೆ ನಮ್ಮಲ್ಲೂ ಬರಬೇಕು’ ಎಂದರು.
‘ಸರ್ಕಾರಗಳು ಕೈಗಾರಿಕೆಗಳಿಗೆ ಭೂಮಿಯನ್ನು ಕೊಡುತ್ತಿರುವ ಪರಿಣಾಮ, ನಮ್ಮ ರೈತರು ಕೃಷಿ ಜಮೀನುಗಳನ್ನು ಕಳೆದುಕೊಂಡು ಕೂಲಿ ಕೆಲಸಕ್ಕೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳ ಸಂಪೂರ್ಣ ಅನುಷ್ಠಾನ ಈವರೆಗೂ ಸಾಧ್ಯವಾಗಿಲ್ಲ. ಕನ್ನಡಿಗರು ಉದ್ಯೋಗ ಪಡೆದುಕೊಳ್ಳಲು ಪರದಾಡುವುದು ಮುಂದುವರಿದಿದೆ’ ಎಂದು ಹೇಳಿದರು.
‘ಕನ್ನಡ ಭಾಷೆಯನ್ನು ವಿರೋಧಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕೆಲಸವನ್ನು ಸರ್ಕಾರ ಮಾಡಬೇಕು. ನಾಡು–ನುಡಿ ಉಳಿಸುವುದಕ್ಕಾಗಿ ಗಂಭೀರವಾದ ಕ್ರಮಗಳನ್ನು ಜರುಗಿಸಬೇಕು. ಇದಕ್ಕಾಗಿ ಕನ್ನಡಿಗರೆಲ್ಲೂ ಒಗ್ಗಟ್ಟಾಗಬೇಕು. ನಾಡಿನಲ್ಲಿ ಇರುವ ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಬರಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
‘ಹಿಂದೆಲ್ಲಾ ದಸರಾ ವಸ್ತುಪ್ರದರ್ಶನ ಉದ್ಘಾಟನೆಯಾದ ನಂತರವೂ ಜನರು ದಸರಾ ವಸ್ತುಪ್ರದರ್ಶನಕ್ಕೆ ಬರುತ್ತಿರಲಿಲ್ಲ. ಆದರೆ, ಈ ಬಾರಿ ಶಕ್ತಿ ಮೀರಿ ಒಳ್ಳೆಯ ಮೆರುಗನ್ನು ಅಧ್ಯಕ್ಷ ಅಯೂಬ್ ಖಾನ್ ತಂದುಕೊಟ್ಟಿದ್ದಾರೆ’ ಎಂದು ಶ್ಲಾಘಿಸಿದರು.
ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಮೇಯರ್ ಕೆ.ವಿ. ಮಲ್ಲೇಶ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಸಿಇಒ ರುದ್ರೇಶ್, ವಾಗ್ಮಿ ಎಂ.ಕೃಷ್ಣೇಗೌಡ, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಘುರಾಜೇ ಅರಸ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.