ಮೈಸೂರು: ‘ಭೌತಿಕ ಶ್ರೀಮಂತಿಕೆ ಕ್ಷಣಿಕವಾದುದು; ಪರಂಪರೆಯ ಸಂಪತ್ತು ಶಾಶ್ವತವಾದುದು’ ಎಂದು ವಿದ್ವಾನ್ ಮೈಸೂರು ಎಂ.ಮಂಜುನಾಥ್ ಪ್ರತಿಪಾದಿಸಿದರು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಜತ ಮಹೋತ್ಸವ ಹಾಗೂ ಶಿಲ್ಪಿಗಳಾದ ದೇವಲಕುಂದ ವಾದಿರಾಜ್ ಮತ್ತು ಬಿ.ಬಸವಣ್ಣ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮುಂದುವರಿದ ದೇಶಗಳು ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಬಹುದು. ಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿಯಬಹುದು. ಆದರೆ, ಭಾರತದಂತೆ ಸಾಂಸ್ಕೃತಿಕ, ಪಾರಂಪರಿಕ ಹಾಗೂ ಸಾಹಿತ್ಯಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿವೆಯೇ?’ ಎಂದು ಕೇಳಿದರು.
ಸರಿಸಮನಾಗವು:‘ಯಾವುದೇ ದೇಶದ ಗೌರವ, ಘನತೆ ಹಾಗೂ ಹಿರಿಮೆಯ ಅಳತೆಗೋಲು ಅಲ್ಲಿ ಸಂಸ್ಕೃತಿ, ಸಂಸ್ಕಾರ ಹಾಗೂ ಕಲೆಗೆ ಎಷ್ಟು ಮಹತ್ವ ಕೊಟ್ಟಿದ್ದಾರೆ ಎನ್ನುವುದೇ ಆಗಿದೆ. ಐಟಿ- ಬಿಟಿ, ಕೈಗಾರಿಕೆ, ತಂತ್ರಜ್ಞಾನ ಎಲ್ಲವೂ ಅಗತ್ಯವೇ. ಆದರೆ, ಇತಿಹಾಸದ ಭವ್ಯ ಪರಂಪರೆಗೆ ಯಾವುದೇ ದೊಡ್ಡ ಕಟ್ಟಡಗಳೂ ಸಮನಾಗವು. ನಮ್ಮದು ಭವ್ಯ ಇತಿಹಾಸವೆಂದು ಗರ್ವದಿಂದ ಹೇಳಿಕೊಳ್ಳಬಹುದು. ಆದರೆ, ಅಮೆರಿಕ ಅಥವಾ ಚೀನಾದವರಿಗೆ ಅದು ಸಾಧ್ಯವಿಲ್ಲ’ ಎಂದರು.
ಹೆಮ್ಮೆ ಪಡಬೇಕು:‘ನಮ್ಮ ಇತಿಹಾಸ, ಪರಂಪರೆ, ಕಲೆ ಹಾಗೂ ಸಾಹಿತ್ಯದ ಬಗ್ಗೆ ಹೆಮ್ಮೆ ಪಡಬೇಕು ಹಾಗೂ ಮತ್ತಷ್ಟು ವಿಸ್ತರಿಸಬೇಕು. ನಮ್ಮ ಕಲಾ ಪ್ರಕಾರಗಳನ್ನು ಉಳಿಸಿ-ಬೆಳೆಸಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
‘ಯಾವ ಕೆಲಸವು ಹೆಚ್ಚು ಹಣ ತಂದುಕೊಡುತ್ತದೆಯೋ ಅದನ್ನು ಓದಿಸುವುದೇ ನಮ್ಮ ಜವಾಬ್ದಾರಿ ಎಂದುಕೊಂಡಿದ್ದೇವೆ. ಅದೇ ಶಿಕ್ಷಣವೆಂದೂ ಭಾವಿಸಿದ್ದೇವೆ. ಅದರ ಹೊರತಾಗಿಯೂ ಕಲಿಕೆ ಇದೆ. ಜಾಗೃತ ಸಮಾಜವು ನಮ್ಮ ಕಲಾ ಪ್ರಕಾರಗಳನ್ನು ಪೋಷಿಸಬೇಕು. ಅಂತಹ ವಾತಾವರಣ ನಿರ್ಮಾಣವಾಗಬೇಕು. ವೈದ್ಯರು, ಎಂಜಿನಿಯರ್‌ಗಳು ಎಲ್ಲ ದೇಶಗಳಲ್ಲೂ ಇರುತ್ತಾರೆ. ಆದರೆ, ನಮ್ಮ ಸಂಗೀತ ವಿದ್ವಾಂಸರು, ಕಲಾವಿದರು ಹಾಗೂ ಸಾಹಿತಿಗಳನ್ನು ವಿದೇಶಿಯರು ಗೌರವದಿಂದ ಆಹ್ವಾನಿಸುತ್ತಾರೆ. ನಮ್ಮ ಕಾರ್ಯಕ್ರಮ ಆಯೋಜಿಸುತ್ತಾರೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನ ವಂಶಸ್ಥ ಶ್ರೀಕೃಷ್ಣದೇವರಾಯ ಮಾತನಾಡಿ, ‘ದೇಶ ಹಾಗೂ ಸಂಸ್ಕೃತಿಗಾಗಿ ಏನನ್ನಾದರೂ ಕೊಡುಗೆ ನೀಡಿದರೆ ಮುಂದಿನ ಪೀಳಿಗೆ ನಮ್ಮನ್ನು ನೆನಪಿಟ್ಟುಕೊಳ್ಳುತ್ತದೆ’ ಎಂದು ತಿಳಿಸಿದರು.
‘ಆಧುನಿಕತೆಯ ಬೆನ್ನತ್ತಿರುವ ನಮ್ಮ ಬದುಕಿನಲ್ಲಿ ಈಗ ಶಿಕ್ಷಣವು ವಿದ್ಯಾರ್ಜನೆಯ ಉದ್ದೇಶವಾಗಿ ಉಳಿದಿಲ್ಲ; ಧನಾರ್ಜನೆಯೇ ಮುಖ್ಯ ಎಂಬಂತಾಗಿ ಹೋಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಚೆನ್ನೈನ ಡಾ.ಕನಕರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷ ವೀರಣ್ಣ ಎಂ.ಅರ್ಕಸಾಲಿ ಮಾತನಾಡಿದರು.
ಅಕಾಡೆಮಿಯ ರಿಜಿಸ್ಟ್ರಾರ್ ಆರ್.ಚಂದ್ರಶೇಖರ್ ಸ್ವಾಗತಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ, ಶಿಲ್ಪಿಗಳಾದ ದೇವಲಕುಂದ ವಾದಿರಾಜ್ ಹಾಗೂ ಬಿ.ಬಸವಣ್ಣ ಬದುಕು ಮತ್ತು ಕಲಾಕೃತಿ ಕುರಿತು ಕ್ರಮವಾಗಿ ಗಣೇಶ್ ಎಲ್.ಭಟ್ ಹಾಗೂ ಪಿ.ಆರ್.ನಾಗರಾಜ್ ಮಾತನಾಡಿದರು.
*
ಯಾವುದೇ ಸಂಸ್ಥೆ 2–3 ವರ್ಷ ನಡೆಯುವುದೇ ದೊಡ್ಡ ವಿಷಯ. ಹೀಗಿರುವಾಗ ಶಿಲ್ಪಕಲಾ ಅಕಾಡೆಮಿಯು ರಜತ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ.
–ವಿದ್ವಾನ್ ಮೈಸೂರು ಎಂ.ಮಂಜುನಾಥ್
*
ಕಲೆ–ಸಂಸ್ಕೃತಿಯು ಮನುಷ್ಯನನ್ನು ಅಮರನನ್ನಾಗಿ ಮಾಡುತ್ತದೆ. ಅದನ್ನು ಉಳಿಸಿಕೊಳ್ಳಬೇಕು.
–ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಜಂಟಿ ನಿರ್ದೇಶಕ, ಮೈಸೂರು ವಿಭಾಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.