ಮೈಸೂರು: ‘ತಮಿಳುನಾಡಿಗೆ 30 ಟಿಎಂಸಿ ಅಡಿ ಬಾಕಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ಸೂಚಿಸಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಎಸ್.ಕೆ.ಹಲ್ದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ಸೂಚನೆ ಪಾಲಿಸಿದರೆ ನಮ್ಮಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ. ಸರ್ಕಾರ ತಕ್ಷಣ ಸಭೆ ಸೇರಿ ನಿರ್ಣಯ ತೆಗೆದುಕೊಳ್ಳಬೇಕು. ನೀರು ಹರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
‘ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ 25 ರಷ್ಟು ಮಳೆ ಕೊರತೆ ಆಗಿದೆ. ಕೆಆರ್‌ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಒಟ್ಟು 74 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹವಿದೆ. ಇದನ್ನು ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು’ ಎಂದರು.
‘ಜೂನ್‌ನಿಂದ ಆಗಸ್ಟ್‌ವರೆಗೆ ಬಾಕಿಯಿರುವ 30 ಟಿಎಂಸಿ ಅಡಿ ಮತ್ತು ಸೆಪ್ಟೆಂಬರ್ ತಿಂಗಳ ಕೋಟಾ 37 ಟಿಎಂಸಿ ಅಡಿ ಸೇರಿದಂತೆ ಒಟ್ಟು 67 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಾಗುತ್ತದೆ. ಅಷ್ಟೂ ನೀರು ಹರಿಸಿದರೆ, ನಮ್ಮ ವ್ಯಾಪ್ತಿಯಲ್ಲಿ ಬಳಸಲು ಜಲಾಶಯದಲ್ಲಿ ಒಂದು ತೊಟ್ಟು ನೀರೂ ಇರುವುದಿಲ್ಲ’ ಎಂದು ಎಚ್ಚರಿಸಿದರು.
‘ನಳಿನ್ ಕುಮಾರ್ ಒಬ್ಬ ವಿದೂಷಕ’
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ವಿದೂಷಕ. ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಿಲ್ಲ’ ಎಂದು ಎಂ.ಲಕ್ಷ್ಮಣ ತಿರುಗೇಟು ನೀಡಿದರು.
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ. ಜೈಲಿಗೆ ಹೋಗಿ ಬಂದವರಿಂದ ನಮಗೆ ಪಾಠ ಬೇಡ ಎಂದಿದ್ದಾರೆ. ಹಾಗಾದಲ್ಲಿ ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಎಲ್ಲಿಗೆ ಹೋಗಿದ್ದವರು? ಅವರೂ ಜೈಲಿಗೆ ಹೋಗಿ ಬಂದವರಲ್ಲವೇ? ಅಮಿತ್ ಶಾ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು. ಡಿಕೆಶಿ ಅಂತಹ ಯಾವುದೇ ಅಪರಾಧ ಮಾಡಿಲ್ಲ. ಬಿಜೆಪಿಯವರು ಅದನ್ನು ಮರೆಯಬಾರದು’ ಎಂದು ಪ್ರತ್ಯುತ್ತರ ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.