ADVERTISEMENT

‘ಪ್ರಭಾರ’ದಿಂದ ಸೊರಗಿದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ

ಕಾಯಂ ನಿರ್ದೇಶಕರ ನೇಮಕಕ್ಕೆ ಆದಿವಾಸಿ ಮುಖಂಡರ ಒತ್ತಾಯ

ಎಂ.ಮಹೇಶ
Published 26 ಅಕ್ಟೋಬರ್ 2024, 7:00 IST
Last Updated 26 ಅಕ್ಟೋಬರ್ 2024, 7:00 IST
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಕಟ್ಟಡ
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಕಟ್ಟಡ   

ಮೈಸೂರು: ಇಲ್ಲಿನ ಬೋಗಾದಿ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಕಾಯಂ ನಿರ್ದೇಶಕರಿಲ್ಲದೆ ಆದಿವಾಸಿಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತೊಡಕಾಗಿ ಪರಿಣಮಿಸಿದೆ. ಮೂಲನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ.

‘ಎರಡು ವರ್ಷಗಳಿಂದಲೂ ಕಾಯಂ ನಿರ್ದೇಶಕರಿಲ್ಲ. ಆಗಿನಿಂದಲೂ ‘ಪ್ರಭಾರ’ ವಹಿಸಿರುವುದು ಸಂಸ್ಥೆಯ ಕಾರ್ಯಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ’ ಎಂಬುದು ಆದಿವಾಸಿ ಸಮುದಾಯಗಳ ಮುಖಂಡರ ಆರೋಪ.

ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ 50 ಬುಡಕಟ್ಟು ಸಮುದಾಯಗಳ ಶ್ರೇಯೋಭಿವೃದ್ಧಿಗೆ ಅಗತ್ಯವಾದ ಸಂಶೋಧನೆ, ಕಾಲಕಾಲಕ್ಕೆ ತರಬೇತಿ, ಕುಲಶಾಸ್ತ್ರೀಯ ಅಧ್ಯಯನ, ಜಾಗೃತಿ ಕಾರ್ಯಕ್ರಮಗಳ ಆಯೋಜನೆ, ಸಾಕ್ಷ್ಯಚಿತ್ರ ನಿರ್ಮಾಣ, ಗ್ರಂಥಾಲಯ ಹಾಗೂ ಬುಡಕಟ್ಟು ವಸ್ತುಸಂಗ್ರಹಾಲಯ ಸ್ಥಾಪನೆಯ ಜವಾಬ್ದಾರಿಯನ್ನು ಸಂಸ್ಥೆಗೆ ನೀಡಲಾಗಿದೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಕಾರ್ಯಾಗಾರ ನಡೆಸಿ ಮಾಹಿತಿ ನೀಡುವುದು, ಅಗತ್ಯ ವರದಿಗಳನ್ನು ಸಿದ್ಧಪಡಿಸುವ ಉದ್ದೇಶಗಳ ಸಾಕಾರಕ್ಕೆ 2009ರಲ್ಲಿ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಾಯಿತು. ಬುಡಕಟ್ಟುಗಳು ಹೆಚ್ಚಾಗಿರುವ ಮೈಸೂರಿನಲ್ಲಿದ್ದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆಂಬ ಆಶಯದಿಂದ 2010ರಲ್ಲಿ ಇಲ್ಲಿಗೆ ಸ್ಥಳಾಂತರಿಸಲಾಯಿತು. 

ADVERTISEMENT

ಅನುದಾನ ಬಿಡುಗಡೆ: ಇದು, ಸಮಾಜದ ಅಂಚಿನಲ್ಲಿರುವ ಹಾಗೂ ಕಾಡಿನಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಬದುಕುತ್ತಿರುವ ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಏಕೈಕ ಸಂಸ್ಥೆ. ಈ ಸಮುದಾಯಗಳ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸುವ ಜೊತೆಗೆ ಆರೋಗ್ಯ ಶಿಬಿರಗಳು, ವಿಚಾರಸಂಕಿರಣಗಳು, ಕಾರ್ಯಾಗಾರಗಳು ಹಾಗೂ ಕಮ್ಮಟಗಳನ್ನು ನಡೆಸಲು ಅನುದಾನ ಬಿಡುಗಡೆಯಾಗುತ್ತಿದೆ.

‘ಸಂಸ್ಥೆಯು ಕೇಂದ್ರ ಸರ್ಕಾರದಿಂದ ಪಡೆದಿರುವ ಅನುದಾನಕ್ಕೆ ಸರಿಯಾದ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸದ ಕಾರಣ, 2016ರಿಂದ ಅನುದಾನ ಒದಗಿಸಿಲ್ಲ’ ಎಂಬ ಆರೋಪವೂ ಕೇಳಿಬಂದಿದೆ. ‘ಸಮುದಾಯಗಳ ಅಭಿವೃದ್ಧಿಗೆ ತೊಡಕಾಗಿದೆ’ ಎನ್ನಲಾಗುತ್ತಿದೆ.

ಇಲ್ಲಿ ಈವರೆಗೆ ನಾಲ್ವರು ನಿರ್ದೇಶಕರು ಕಾರ್ಯನಿರ್ವಹಿಸಿದ್ದಾರೆ. ಒಬ್ಬರು ಹತ್ತು ವರ್ಷ ಇದ್ದರು. ಪ್ರಸ್ತುತ ಪ್ರಭಾರ ನಿರ್ದೇಶಕರಾಗಿರುವ ರಾಜಕುಮಾರ್ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸಂಸ್ಥೆಯಲ್ಲೇ ಲಭ್ಯವಿರುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

ಪ್ರತಿಕ್ರಿಯೆಗೆ ಪ್ರಭಾರ ನಿರ್ದೇಶಕರು ಲಭ್ಯವಾಗಲಿಲ್ಲ.

ಆದಿವಾಸಿಗಳ ಕಲ್ಯಾಣ ಕಾರ್ಯಕ್ರಮಕ್ಕೆ ತೊಡಕು ಜಾಗೃತಿ ಕಾರ್ಯಕ್ರಮಗಳಿಗೆ ಅಡಚಣೆ ಈವರೆಗೆ ನಾಲ್ವರು ನಿರ್ದೇಶಕರ ಕಾರ್ಯನಿರ್ವಹಣೆ

-ಈ ಸಂಸ್ಥೆಯಿಂದ ಬುಡಕಟ್ಟು ಆದಿವಾಸಿಗಳ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಮೂಲ ಆದಿವಾಸಿಗಳಲ್ಲಿ ಉನ್ನತ ಶಿಕ್ಷಣ ಪಡೆದವರನ್ನು ನಿರ್ದೇಶಕರನ್ನಾಗಿ ನೇಮಿಸಬೇಕು
-ಕುಡಿಯರ ಭರತ್‌ಚಂದ್ರ ದೇವಯ್ಯ ರಾಜ್ಯಾಧ್ಯಕ್ಷ ಕಾಡು ಕಾಡಂಚಿನ ಅರಣ್ಯ ಆಧಾರಿತ ಆದಿವಾಸಿಗಳ ಒಕ್ಕೂಟ

ಹಣ ಬಳಕೆಯಾಗಿಲ್ಲ! ‘ಪರಿಶಿಷ್ಟ ಪಂಗಡದ ಆದಿವಾಸಿಗಳಿಗೆ ಅಗತ್ಯ ದಾಖಲಾತಿಗಳನ್ನು ಮಾಡಿಕೊಡುವುದು ಹಾಗೂ ಯೋಜನೆಗಳ ಮಾಹಿತಿ ನೀಡಲು ಬಿಡುಗಡೆಯಾಗಿರುವ ₹6.90 ಕೋಟಿ ಅನುದಾನ ಸದ್ಬಳಕೆಯಾಗಿಲ್ಲ’ ಎನ್ನುವುದು ಮುಖಂಡರ ಆರೋಪ. ಸಮುದಾಯಗಳ ಬಗ್ಗೆ ಜ್ಞಾನದ ಜೊತೆಗೆ ಕಾಳಜಿಯುಳ್ಳವರನ್ನು ನಿರ್ದೇಶಕರನ್ನಾಗಿ ನೇಮಿಸಬೇಕು. ಅಲ್ಲಿಯವರೆಗೆ ಮೈಸೂರಿನಲ್ಲೇ ಲಭ್ಯವಿರುವ ಅಧಿಕಾರಿಗೆ ಪ್ರಭಾರವನ್ನು ವಹಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ‘ಬೆಂಗಳೂರಿನಲ್ಲಿ ಇತರ ಜವಾಬ್ದಾರಿಗಳಿರುವ ಅಧಿಕಾರಿಯನ್ನು ನೇಮಿಸಿದರೆ ಪ್ರಯೋಜನವಾಗದು. ಅವರು ತಿಂಗಳಲ್ಲಿ ಒಮ್ಮೆಯಷ್ಟೆ ಬಂದರೆ ಆಡಳಿತಾತ್ಮಕ ಸೇರಿದಂತೆ ಇತರ ಕೆಲಸಗಳು ಚುರುಕಾಗುವುದಿಲ್ಲ. ಆದಿವಾಸಿಗಳ ಭೇಟಿಯೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಕಾಯಂ ನಿರ್ದೇಶಕರನ್ನು ನೇಮಿಸಬೇಕು’ ಎಂದು ಮುಖಂಡರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.