ಮೈಸೂರು: ‘ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವರದಿಯು ನ್ಯೂನತೆಗಳಿಂದ ಕೂಡಿದ್ದು, 2011ರ ಜನಗಣತಿಯ ಅಂಕಿ– ಅಂಶಗಳನ್ನು ಮರೆಮಾಚಲಾಗಿದೆ’ ಎಂಬ ಆಕ್ಷೇಪ ಒಳಪಂಗಡಗಳಿಂದ ವ್ಯಕ್ತ
ವಾಗಿದೆ. ಶಿಫಾರಸನ್ನು ವಾಪಸ್ ಪಡೆಯ ಬೇಕೆಂದು ಒತ್ತಾಯ ಮಾಡಲಾಗಿದೆ.
ಈ ಬಗ್ಗೆ, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು ಅವರು ಮಾಹಿತಿ ಹಕ್ಕು ಕಾಯ್ದೆಯಡಿ 2023ರ ಅ.3ರಂದು ‘ಜನಗಣತಿ ಕಾರ್ಯ ನಿರ್ದೇಶನಾಲಯ’ ದಿಂದ ಪಡೆದಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜಿಲ್ಲಾವಾರು ಅಂಕಿ–ಅಂಶಕ್ಕೂ, ಸರ್ಕಾರವು ಶಿಫಾರಸು ಮಾಡಿರುವ ಒಳಮೀಸಲಾತಿ ಪ್ರಮಾಣಕ್ಕೂ ವ್ಯತ್ಯಾಸವಿದೆ. ಇದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
‘ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವಿದ್ದಾಗ ಆಗಿನ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯ ಐವರು
ಸದಸ್ಯರ ಒಳಮೀಸಲಾತಿ ಸಮಿತಿಯ ಶಿಫಾರಸುಗಳು ಅವೈಜ್ಞಾನಿಕವಾಗಿವೆ. ಅವನ್ನೇ ಕೇಂದ್ರಕ್ಕೆ ಕಳುಹಿಸಲಾಗಿದೆ. ಅದರಿಂದ ಸಮುದಾಯಗಳ ವಿದ್ಯಾಭ್ಯಾಸ, ಉದ್ಯೋಗ, ಸರ್ಕಾರದ ಸೌಲಭ್ಯಗಳು ಅಸಮಾನವಾಗಿ ಹಂಚಿಕೆ
ಯಾಗಲಿವೆ. ಅದು ಸಮುದಾಯಗಳ ಒಳಗೇ ದ್ವೇಷ ಭಾವನೆ ಮೂಡಿಸಲಿದೆ’ ಎಂಬ ಆತಂಕವನ್ನು ಕೆಪಿಸಿಸಿ ವಕ್ತಾರ ಸೀತಾರಾಮು ವ್ಯಕ್ತಪಡಿಸಿದರು.
‘ವರದಿಗೆ ಬೇಕಾದ ಜನಗಣತಿಯ ಅಂಕಿ– ಅಂಶವನ್ನು ಸರ್ಕಾರದ ನೋಡಲ್ ಏಜೆನ್ಸಿಯಾದ ಆರ್ಥಿಕ ಹಾಗೂ ಸಾಂಖ್ಯಿಕ ನಿರ್ದೇಶನಾಲಯದಿಂದ ಪಡೆಯದೆಯೇ ತಪ್ಪು ಮಾಹಿತಿ ಆಧರಿಸಿ ಮೀಸಲಾತಿ ಹಂಚಲಾಗಿದೆ’ ಎಂದು ರಾಜ್ಯ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.
‘ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸುಗಳ ಜಾರಿಗೆ ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಎಡಗೈ ಸಮುದಾಯದವರು ಹೋರಾಟ ನಡೆಸಿದ್ದರು. ಬೊಮ್ಮಾಯಿ ನೇತೃತ್ವದ ಸರ್ಕಾರವು ವರದಿಯನ್ನು ಅನುಷ್ಠಾನ
ಗೊಳಿಸದೆ, ಸಮಿತಿ ರಚಿಸಿ ಹೆಚ್ಚುವರಿ ಒಳ ಮೀಸಲಾತಿ ಹಂಚಿದೆ. ಈ ವರ್ಗೀಕರಣವೇ ತಪ್ಪು. 89 ಸಮುದಾಯಗಳಿಗೆ ನ್ಯಾಯ ಸಿಗಬೇಕೆಂದು ಈಗಿನ ಸರ್ಕಾರದ ಗಮನವನ್ನೂ ಸೆಳೆಯಲಾಗಿದೆ’ ಎಂದರು.
ವ್ಯತ್ಯಾಸ ಪ್ರಮಾಣ...
ಸರ್ಕಾರವು ಶಿಫಾರಸು ಮಾಡಿರುವಂತೆ, ಪರಿಶಿಷ್ಟ ಜಾತಿ ಸಮುದಾಯಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿ ಒಳ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ. ಮೊದಲ ಗುಂಪಿನಲ್ಲಿ ಆದಿ ದ್ರಾವಿಡ, ಮಾದಿಗ, ಸಮಗಾರ ಸೇರಿದಂತೆ 27 ಜಾತಿಗಳ ಜನಸಂಖ್ಯೆಯು ಶೇ 25.06ರಷ್ಟಿದ್ದು, 2011ರ ಜನಗಣತಿ ಪ್ರಕಾರ ಶೇ 4.26 ಒಳ ಮೀಸಲಾತಿ ನೀಡುವ ಬದಲು ಶೇ 6ರಷ್ಟು ನಿಗದಿಪಡಿಸಲಾಗಿದೆ.
ಎರಡನೇ ಗುಂಪಿನಲ್ಲಿ ಆದಿ ಕರ್ನಾಟಕ, ಛಲವಾದಿ, ಚೆನ್ನ ದಾಸರ್, ಮಹರ್ ಸೇರಿದಂತೆ 10 ಜಾತಿಗಳ ಜನಸಂಖ್ಯೆಯು ಶೇ 33.62ರಷ್ಟಿದ್ದು, ಶೇ 5.72 ಒಳ ಮೀಸಲಾತಿ ನೀಡುವ ಬದಲು ಸಮಿತಿಯು ಶೇ 5.50 ನಿಗದಿ ಮಾಡಿದೆ.
ಮೂರನೇ ಗುಂಪಿನಲ್ಲಿ ಬಂಜಾರ, ಲಂಬಾಣಿ, ಬೋವಿ, ಕೊರಚ ಸೇರಿದಂತೆ 19 ಜಾತಿಗಳ ಜನಸಂಖ್ಯೆ ಶೇ 27.19ರಷ್ಟಿದ್ದು ಶೇ 4.62 ಒಳ ಮೀಸಲಾತಿ ನೀಡುವ ಬದಲು ಶೇ 4.5ರಷ್ಟು ನೀಡಲಾಗಿದೆ. ನಾಲ್ಕನೇ ಗುಂಪಿನಲ್ಲಿ 89 ಜಾತಿಗಳಿದ್ದು, ಸಮುದಾಯದ ಜನಸಂಖ್ಯೆಯು ಶೇ 14.14ರಷ್ಟಿದೆ. ಅದರಲ್ಲಿ ಶೇ 2.4ರಷ್ಟು ಒಳ ಮೀಸಲು ನೀಡುವ ಬದಲು ಶೇ 1ರಷ್ಟು ಮೀಸಲನ್ನು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.