ADVERTISEMENT

ಕೆಐಎಡಿಬಿ: ಹುದ್ದೆಗೆ ಮುಂದುವರಿದ ಗೊಂದಲ!

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 15:53 IST
Last Updated 23 ಆಗಸ್ಟ್ 2024, 15:53 IST

ಮೈಸೂರು: ಇಲ್ಲಿನ ಕೆಐಎಡಿಬಿ ಶಾಖಾ ಕಚೇರಿಯ ಮುಖ್ಯಸ್ಥರ ಹುದ್ದೆಗೆ ಇಬ್ಬರು ಹಿರಿಯ ಅಧಿಕಾರಿಗಳು ಹಕ್ಕು ಚಲಾಯಿಸುತ್ತಿರುವ ಘಟನೆ ತಿರುವು ಪಡೆದುಕೊಂಡಿದೆ. ಗೊಂದಲ ಮುಂದುವರಿದಿದೆ.

ಈ ಹಿಂದೆ ಇಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ದಿಢೀರನೆ ವರ್ಗಾವಣೆಗೊಂಡಿದ್ದ ಸುಷ್ಮಾ ಅಕಾಲಿಕ ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದರು. ಈ ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ನೀಡಿತ್ತಲ್ಲದೇ ಹುದ್ದೆಯಲ್ಲಿ ಮುಂದುವರಿಯುವಂತೆ ಸುಷ್ಮಾ ಆವರಿಗೆ ಸೂಚಿಸಿತ್ತು.

ತಡೆಯಾಜ್ಞೆಯೊಂದಿಗೆ ಕೆಐಎಡಿಬಿ ಕಚೇರಿಗೆ ಸುಷ್ಮಾ ಮರಳಿದರೂ, ಅವರ ಬದಲಿಗೆ ನೇಮಕಗೊಂಡಿದ್ದ ಮತ್ತೊಬ್ಬ ಅಧಿಕಾರಿ ಸಿ.ಎನ್.ಮೂರ್ತಿ ಹುದ್ದೆ ಬಿಟ್ಟು ಕೊಟ್ಟಿರಲಿಲ್ಲ. ಈ ನಡುವೆ ಕೆಎಟಿ ತಡೆಯಾಜ್ಞೆ ಪ್ರಶ್ನಿಸಿ ಮೂರ್ತಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು. ಈ ಅರ್ಜಿ ವಿಲೇವಾರಿ ಮಾಡಿರುವ ನ್ಯಾಯಾಲಯ ಕೆಎಟಿ ಮುಂದೆ ಹಾಜರಾಗಿ ಅಲ್ಲಿಯೇ ತಕರಾರು ಬಗೆಹರಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ.

ADVERTISEMENT

‘ಈ ನಡುವೆ ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ನೀಡಿದ್ದರೂ ಆದೇಶ ಗೌರವಿಸದೆ ಹುದ್ದೆ ಬಿಟ್ಟುಕೊಡಲು ನಿರಾಕರಿಸಿದ್ದ ಸಿ.ಎನ್.ಮೂರ್ತಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಷ್ಮಾ ದಾಖಲಿಸಿದ್ದಾರೆ. ಇದು ಸೋಮವಾರ (ಆ.26) ವಿಚಾರಣೆಗೆ ಬರುವ ಸಾಧ್ಯತೆ ಇದೆ’ ಎಂದು ತಿಳಿದುಬಂದಿದೆ.

ಕೆಲ ತಿಂಗಳ ಹಿಂದೆ ಮೂರ್ತಿ ಮೈಸೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ, ಅವರು ಹಾಗೂ ಬಂಧುಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮೂರ್ತಿ ಅವರನ್ನು ಸರ್ಕಾರ ವರ್ಗಾಯಿಸಿತ್ತು. ಆದರೆ ಅವರು ಅದೇ ಸ್ಥಾನಕ್ಕೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ತವರಾದ ಇಲ್ಲಿನ ಈ ಕಚೇರಿ ಈಗ ಗೊಂದಲದ ಗೂಡಾಗಿದೆ. ಇಬ್ಬರು ಅಧಿಕಾರಿಗಳು  ಒಂದೇ ಕುರ್ಚಿಗೆ ಹಕ್ಕು ಚಲಾಯಿಸುತ್ತಿದ್ದಾರೆ. ಈ ಗೊಂದಲ ನಿವಾರಣೆಗೆ ಅಧಿಕಾರಿಗಳು ಕ್ರಮ ವಹಿಸಿಲ್ಲ’ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.