ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ; ಸರ್ಕಾರಕ್ಕೆ ಕೆಟ್ಟ ಹೆಸರು: ಎಂ.ಲಕ್ಷ್ಮಣ ಆಕ್ರೋಶ

ಅವೈಜ್ಞಾನಿಕ ಹಂಪ್ಸ್‌: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 7:12 IST
Last Updated 2 ಫೆಬ್ರುವರಿ 2024, 7:12 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮೈಸೂರು: ‘ಜಿಲ್ಲಾಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ದೂರಿದರು.

‘ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯ ಪ್ರವೇಶ ದ್ವಾರದ ಸಮೀಪದಿಂದ ಬೋಗಾದಿ ರಸ್ತೆಯ ಅಲ್ಲಲ್ಲಿ ಏಕಾಏಕಿ ಹಂಪ್‌ಗಳನ್ನು ಹಾಕಲಾಗಿತ್ತು. ಅದು ಅವೈಜ್ಞಾನಿಕವಾಗಿದ್ದರಿಂದ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಹೊಣೆ ಯಾರು?’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಕೇಳಿದರು.

‘ಆ ರಸ್ತೆಯು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯದ್ದೋ, ಮಹಾನಗರಪಾಲಿಕೆ ನಿರ್ವಹಿಸುತ್ತಿದೆಯೋ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು. ಮೂವರ ಸಾವಿಗೆ ಕಾರಣವಾದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕೂಡಲೇ ಬಂಧಿಸಬೇಕು. ಇಲ್ಲಿನ ಅಧಿಕಾರಿಗಳ ಧೋರಣೆ ಖಂಡಿಸಿ ಹಾಗೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ನಗರ ಕಾಂಗ್ರೆಸ್ ಸಮಿತಿಯಿಂದ ಮುಖ್ಯಮಂತ್ರಿಗೆ ಪತ್ರ ಬರೆಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಇಷ್ಟು ದೊಡ್ಡ ಘಟನೆ ನಡೆದಿದ್ದರೂ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ದುರಂತ’ ಎಂದರು.

ವಿದಾಯದ ಬಜೆಟ್:

‘ಕೇಂದ್ರ ಸರ್ಕಾರ ಮಂಡಿಸಿರುವ 2024–25ನೇ ಸಾಲಿನ ಮಧ್ಯಂತರ ಬಜೆಟ್‌ ಕೇಸರಿಕರಣ ಪಕ್ಷದ ವಿದಾಯದ ಬಜೆಟ್ ಆಗಿದೆ’ ಎಂದು ಟೀಕಿಸಿದರು.

‘ನಮ್ಮ ಸರ್ಕಾರವಿದ್ದಾಗ ಬಜೆಟ್‌ ಮಂಡನೆ ಗಂಟೆಗಟ್ಟಲೆ ನಡೆಯುತ್ತಿತ್ತು. ರೈಲ್ವೆ ಬಜೆಟ್‌ಗೂ ಕೆಲವು ತಾಸು ಆಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಆಡಳಿತಾತ್ಮಕ ಕಸರತ್ತನ್ನು ಮಾತ್ರವೇ ನಡೆಸಿ ಪ್ರಕ್ರಿಯೆಯನ್ನು ತೀರಾ ಕೆಳಮಟ್ಟಕ್ಕೆ ತಂದು ನಿಲ್ಲಿಸಿದೆ. ಕೇವಲ 4 ತಿಂಗಳಿಗೇ ₹ 16 ಲಕ್ಷ ಕೋಟಿ ಸಾಲ ಮಾಡುವ ಉದ್ದೇಶವನ್ನು ಈ ಸರ್ಕಾರ ಹೊಂದಿದೆ. ಆದರೆ, ಪಡೆದ ಸಾಲವನ್ನು ಯಾವ್ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ’ ಎಂದು ದೂರಿದರು.

‘ನಿರುದ್ಯೋಗ, ಬರಗಾಲ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಕ್ರಮ ಕೈಗೊಂಡಿಲ್ಲ. ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ’ ಎಂದು ದೂರಿದರು.

‘ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ ಪ್ರಮಾಣವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಬಡವರು, ಮಧ್ಯಮ ವರ್ಗದವರ ಮೇಲೆ ತೆರಿಗೆ ಹೊರೆ ಹಾಕಲಾಗಿದೆ. ಅಭಿವೃದ್ಧಿ ಹೊಂದಿದ ದೇಶ‌ ಮಾಡುತ್ತೇವೆ ಎನ್ನುವ ಸರ್ಕಾರವು ಬಜೆಟ್ ಗಾತ್ರವನ್ನು ಶೇ 9ರಷ್ಟು ಮಾತ್ರವೇ ಹೆಚ್ಚಿಸಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಸರಾಸರಿ ಶೇ 13ರಷ್ಟು ಜಾಸ್ತಿ ಆಗಿತ್ತು’ ಎಂದು ತಿಳಿಸಿದರು.

‘ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ಮೊದಲಾದವುಗಳ ಬಗ್ಗೆ ಪ್ರಸ್ತಾಪವೇ ಇಲ್ಲ. ಮೈಸೂರು–ಕೊಡಗು ಲೋಕಸಭಾ ಕ್ಷೇತ್ರಕ್ಕೆ ಈ ಬಜೆಟ್‌ನಲ್ಲಿ ಐದು ಪೈಸೆಯನ್ನೂ ಕೊಟ್ಟಿಲ್ಲ. ಕುಶಾಲನಗರಕ್ಕೆ ರೈಲು ಮೊದಲಾದ ಯೋಜನೆಗೆ ಅನುದಾನ ಕೊಟ್ಟಲ್ಲ’ ಎಂದು ದೂರಿದರು.

ಪಕ್ಷದ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ನಾಗಭೂಷಣ್ ತಿವಾರಿ, ಗಿರೀಶ್ ಹಾಗೂ ವಕ್ತಾರ ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.