ADVERTISEMENT

ರಾಜ್ಯಕ್ಕೆ ಕೇಂದ್ರದ ದ್ರೋಹ; ತೆರಿಗೆ,ಅನುದಾನ ಕಡಿಮೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್

7 ಪುಟಗಳ ಶ್ವೇತ ಪತ್ರ ಬಿಡುಗಡೆಗೊಳಿಸಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 14:24 IST
Last Updated 13 ಜನವರಿ 2024, 14:24 IST
ಎಂ.ಲಕ್ಷ್ಮಣ್‌
ಎಂ.ಲಕ್ಷ್ಮಣ್‌   

ಮೈಸೂರು: ‘ರಾಜ್ಯಕ್ಕೆ ಕೇಂದ್ರದಿಂದ ಬರುತ್ತಿರುವ ತೆರಿಗೆ ಪಾಲು, ಅನುದಾನಗಳು ಹೆಚ್ಚಾಗುವ ಬದಲು ಕಡಿಮೆಯಾಗುತ್ತಿವೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ವಿವಿಧ ಮೂಲಗಳಿಂದ ಹರಿದು ಹೋಗುವ ಸಂಪನ್ಮೂಲಗಳಲ್ಲಿ ತನ್ನ ಪಾಲು ಸರಿಯಾಗಿ ಹಂಚಿಕೆ ಮಾಡದೆ ರಾಜ್ಯಕ್ಕೆ ದ್ರೋಹ ಎಸಗಿದೆ. ಕೇಂದ್ರ ಸರ್ಕಾರ ₹4.54 ಲಕ್ಷ ಕೋಟಿ ತೆರಿಗೆಯನ್ನು ಸಂಗ್ರಹ ಮಾಡುತ್ತಿದ್ದರೂ, ರಾಜ್ಯಕ್ಕೆ ನೀಡಬೇಕಾದ ಅನುದಾನ ಸರಿಯಾಗಿ ಕೊಡುತ್ತಿಲ್ಲ’ ಎಂದು ಆರೋಪಿಸಿದರು.

‘ಮಹಾರಾಷ್ಟ್ರದ ಬಳಿಕ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯ ನಮ್ಮದು. ಅದರಲ್ಲಿ ನಮಗೆ ಶೇ 42ರಷ್ಟು ವಾಪಸ್ ಕೊಡಬೇಕು. ನಾವು ₹100 ಸಂಗ್ರಹಿಸಿ ಕೊಟ್ಟರೆ, ಅವರು ಕೇವಲ ಶೇ10 ರಷ್ಟನ್ನೂ ಕೊಡುತ್ತಿಲ್ಲ. ಈ ಮೂಲಕ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ಆರೋಪಿಸಿ, ಸರ್ಕಾರಕ್ಕೆ ಕೆಟ್ಟ ಹೆಸರು ತರಲೆತ್ನಿಸಿದೆ. ರಾಜ್ಯದಲ್ಲಿ ಬರದಿಂದ ₹35,000 ಕೋಟಿ ನಷ್ಟವಾಗಿದೆ ಎಂದು ಕೇಂದ್ರ ಸಮಿತಿ ವರದಿ ಮಾಡಿದೆ. ಆದರೆ ಅಲ್ಲಿಂದ ಬಿಡಿಗಾಸು ಅನುದಾನವೂ ಬಂದಿಲ್ಲ’ ಎಂದರು.

ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಅಧ್ಯಕ್ಷ ಆರ್.ಮೂರ್ತಿ, ಜಿ.ಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ವಕ್ತಾರ ಕೆ.ಮಹೇಶ್, ಸೇವಾದಳದ ಸಂಚಾಲಕ ಗಿರೀಶ್ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.