ಕೆ.ಆರ್.ನಗರ: ಲಕ್ಷಾಂತರ ರೂಪಾಯಿ ಸಂಬಳದ ಕೆಲಸ ಬಿಟ್ಟ ಮೂವರು ಸ್ನೇಹಿತರು, ಎತ್ತಿನ ಗಾಣದ ಎಣ್ಣೆ ಉದ್ಯಮವಾದ ‘ದೇಸಿರಿ ನ್ಯಾಚುರಲ್ ಸಂಸ್ಥೆ’ಯನ್ನು ಸ್ಥಾಪಿಸಿ 80ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡುವ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಕೆ.ಆರ್.ನಗರದ ಎಚ್.ಆರ್.ನವೀನ್ ಕುಮಾರ್, ಚಾಮರಾಜ ನಗರದ ಮಹೇಶ್, ಬೆಂಗಳೂರಿನ ಯೋಗೇಶ್ ಅವರೇ ಈ ಸಾಧನೆಯ ರೂವಾರಿಗಳು.
8 ವರ್ಷಗಳ ಹಿಂದೆ ಮೂವರು ಸೇರಿ ತಾಲ್ಲೂಕಿನ ಅಡಗನಹಳ್ಳಿಯಲ್ಲಿನ 2 ಎಕರೆ 4 ಗುಂಟೆ ಜಮೀನಿನಲ್ಲಿ ಒಂದು ಎತ್ತಿನ ಗಾಣವನ್ನು ಸ್ಥಾಪಿಸಿ ಕಡಲೆಕಾಯಿ, ಕೊಬ್ಬರಿ, ಎಳ್ಳು, ಹುಚ್ಚಳ್ಳು, ಕುಸುಬೆ, ಸಾಸುವೆ, ಅಗಸೆ ಹರಳೆಣ್ಣೆ ಸೇರಿದಂತೆ ವಿವಿಧ ಬಗೆಯ ರಾಸಾಯನಿಕ ಮುಕ್ತ ಎಣ್ಣೆ, ಹಿಂಡಿ ತಯಾರಿಸಲು ಆರಂಭಿಸಿದರು. ದೇಸಿರಿ ನ್ಯಾಚುರಲ್ ಸಂಸ್ಥೆಯನ್ನು ಸ್ಥಾಪಿಸಿ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಿದರು. ಬ್ಯಾಂಕ್‌ನಿಂದ ₹25 ಲಕ್ಷ ಸಾಲ ಪಡೆದು ಉದ್ದಿಮೆ ಬೆಳೆಸಿದರು. ಮೂರು ವರ್ಷಗಳಲ್ಲಿ ಸಾಲ ಮರುಪಾವತಿ ಮಾಡಿದ್ದರು. ಸದ್ಯ ಅಡಗನಹಳ್ಳಿಯ 1ನೇ ಘಟಕದಲ್ಲಿ 8 ಹಾಗೂ ಮಾಗಡಿಯ 2ನೇ ಘಟಕದಲ್ಲಿ 7 ಸೇರಿ ಒಟ್ಟು 15 ಎತ್ತಿನ ಗಾಣಗಳಿದ್ದು, 3ನೇ ಘಟಕವನ್ನು ಸ್ಥಾಪಿಸಲು ಮುಂದಾಗಿದ್ದಾರೆ.
ಹಳ್ಳಿಕಾರ್, ಅಮೃತ್ ಮಹಲ್, ಮಲ್ನಾಡ್ ಗಿಡ್ಡ, ದೇವಿಣಿ, ಕಿಲಾರಿ, ಬರಗೂರು, ಗಿರ್ ಸೇರಿದಂತೆ ವಿವಿಧ ದೇಸಿ ತಳಿಯ 40ಕ್ಕೂ ಹೆಚ್ಚು ಎತ್ತುಗಳನ್ನು ಸಾಕಿದ್ದು, ಗಾಣಕ್ಕೆ ಬಳಸುತ್ತಾರೆ.
ಗಾಣದ ಎಣ್ಣೆ, ಹಿಂಡಿ, ಸಿರಿಧಾನ್ಯ, ಸಾಂಬಾರ ಪದಾರ್ಥಗಳು, ಬೆಲ್ಲ, ಜೇನುತುಪ್ಪ, ದೇಸಿ ತುಪ್ಪ ಸೇರಿದಂತೆ 70 ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.
‘ನಾವು ತಿನ್ನುವ ಪ್ರತಿಯೊಂದು ಆಹಾರ ಕಲಬೆರಕೆಯಾಗುತ್ತಿದ್ದು, ಮನುಷ್ಯನ ಆಯುಷ್ಯ ಕ್ಷೀಣಿಸುತ್ತಿದೆ. ರಾಸಾಯನಿಕ ಮುಕ್ತ ಎಣ್ಣೆ ತೆಗೆಯುವ ಗಾಣದ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ಕೆಲಸಗಾರರಾದ ಕೃಷ್ಣ ಮತ್ತು ಮಹದೇವ ಅವರಿಂದ ಎತ್ತುಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ತಿಳಿದೆ’ ಎಂದು ದೇಸಿರಿ ನ್ಯಾಚುರಲ್ ಸಂಸ್ಥೆಯ ಸಂಸ್ಥಾಪಕ ಎಚ್.ಆರ್.ನವೀನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.