ADVERTISEMENT

ಕೆಎಸ್‌ಒಯುನಲ್ಲಿ ವಿಳಂಬ ಧೋರಣೆ | ನಡೆಯದ ತರಗತಿ, ಪರೀಕ್ಷೆ: ಆತಂಕ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 8:02 IST
Last Updated 29 ಏಪ್ರಿಲ್ 2024, 8:02 IST
ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆಡಳಿತ ಭವನ
ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆಡಳಿತ ಭವನ   

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂಬಿಎ ಕೋರ್ಸ್‌ನ ಸೆಮಿಸ್ಟರ್‌ ಪರೀಕ್ಷೆಗಳು ನಿಯಮಿತವಾಗಿ ನಡೆಯುತ್ತಿಲ್ಲ. ಈ ಬಗ್ಗೆ ‌ಅಧಿಕಾರಿಗಳು ಸಮರ್ಪಕ ಸ್ಪಂದನೆ ನೀಡಿಲ್ಲ. ವಿಳಂಬ ಧೋರಣೆಯಿಂದಾಗಿ 2ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

ಇಲ್ಲಿ ಜನವರಿ ಹಾಗೂ ಜೂನ್‌ನಲ್ಲಿ ಪ್ರವೇಶಾತಿ ನಡೆಯುತ್ತದೆ. 2022-23ನೇ ಸಾಲಿನಲ್ಲಿ ಜನವರಿ ಆವೃತ್ತಿಯಲ್ಲಿ ಪ್ರಥಮ ಸೆಮಿಸ್ಟರ್‌ ಪ್ರವೇಶ ಪಡೆದ ಎಂಬಿಎ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.

ಅವರು 2022ರ ಜನವರಿಯಲ್ಲಿ ಪ್ರವೇಶ ಪಡೆದಿದ್ದರು. ಅವರಿಗೆ ಈವರೆಗೆ ಆಗಿರುವುದು ಒಂದು ಸೆಮಿಸ್ಟರ್‌ ಪರೀಕ್ಷೆ ಮಾತ್ರವೇ. ‘ಹೀಗೆಯೇ ನಡೆದರೆ ನಾವು ಕೋರ್ಸ್‌ ಮುಗಿಸುವುದು, ಪ್ರಮಾಣಪತ್ರ ಪಡೆದುಕೊಳ್ಳುವುದು ಮತ್ತು ಅದನ್ನು ಆಧರಿಸಿ ಉದ್ಯೋಗ ಕಂಡುಕೊಳ್ಳುವುದು ಯಾವಾಗ’ ಎಂಬುದು ವಿದ್ಯಾರ್ಥಿಗಳ ಚಿಂತೆ.

ADVERTISEMENT

‘ಒಂದು ಸೆಮಿಸ್ಟರ್‌ ಮುಗಿಸಲು ಒಂದು ವರ್ಷ ತೆಗೆದುಕೊಂಡಿದ್ದಾರೆ. ಇಡೀ ಕೋರ್ಸ್ ಪೂರ್ಣಗೊಳಿಸಲು ನಾಲ್ಕು ವರ್ಷ ತೆಗೆದುಕೊಂಡರೆ ನಮಗೆ ಎಲ್ಲಿ ಕೆಲಸ ಸಿಗುತ್ತದೆ. ಆ ಪ್ರಮಾಣಪತ್ರಕ್ಕೆ ಮಾನ್ಯತೆ ಇರುತ್ತದೆಯೇ’ ಎನ್ನುವುದು ಅವರ ಪ್ರಶ್ನೆ. ಈ ಬಗ್ಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ಇದೇ ವರ್ಷದ ಫೆಬ್ರುವರಿಯಲ್ಲಿ ಕುಲಪತಿ ಕಚೇರಿಗೆ ಪತ್ರ ಬರೆದಿದ್ದಾರೆ. ಪ್ರಯೋಜನ ಆಗಿಲ್ಲ.

3ನೇ ಸೆಮಿಸ್ಟರ್‌ನಲ್ಲಿರಬೇಕಿತ್ತು:

‘6 ತಿಂಗಳ ಸೆಮಿಸ್ಟರ್‌ ಅನ್ನು ಮುಗಿಸಲು ಆರು ತಿಂಗಳ ಬದಲಿಗೆ ಒಂದು ವರ್ಷ ತೆಗೆದುಕೊಂಡಿದ್ದಾರೆ. ಪರೀಕ್ಷೆ ಬರೆದು ನಾಲ್ಕು ತಿಂಗಳಾದ ಮೇಲೆ ಫಲಿತಾಂಶ ಬಂದಿದೆ. ಈಗ ಆನ್‌ಲೈನ್‌ ಅಥವಾ ಆಫ್‌ಲೈನ್ ತರಗತಿಗಳನ್ನೂ ಆರಂಭಿಸಿಲ್ಲ. 2ನೇ ಸೆಮಿಸ್ಟರ್‌ ತರಗತಿಗಳೇ ಆರಂಭವಾಗಿಲ್ಲ. ಆದರೆ, 3ನೇ ಹಾಗೂ 4ನೇ ಸೆಮಿಸ್ಟರ್‌ಗೆ ಸಂಬಂಧಿಸಿದ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗಿದೆ’ ಎಂದು ವಿದ್ಯಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಬ್ಯಾಚ್‌ನ ವಿದ್ಯಾರ್ಥಿಗಳೆಲ್ಲರೂ ಸೇರಿ ವಿಭಾಗದ ಮುಖ್ಯಸ್ಥರು, ಕುಲಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದೆವು. ಸಹಿ ಸಂಗ್ರಹಿಸಿ ಕುಲಪತಿ ಕಚೇರಿಗೆ ಪತ್ರವನ್ನೂ ಕೊಟ್ಟಿದ್ದೆವು’ ಎಂದರು.

‘ಪ್ರವೇಶ ಪಡೆದು 1 ವರ್ಷ 4 ತಿಂಗಳು ಕಳೆದಿದ್ದರೂ ಮೊದಲ ಸೆಮಿಸ್ಟರ್‌ ಮಾತ್ರವೇ ಮುಗಿದಿದೆ. ಎಲ್ಲವೂ ಸರಿಯಾಗಿ ನಡೆದಿದ್ದರೆ ನಾವೀಗ 3ನೇ ಸೆಮಿಸ್ಟರ್‌ನಲ್ಲಿ ಇರಬೇಕಾಗಿತ್ತು. ತರಗತಿ ಮತ್ತು ಪರೀಕ್ಷೆಗಳನ್ನು ಸಕಾಲಕ್ಕೆ ನಡೆಸುತ್ತಿಲ್ಲ. ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಉದ್ಯೋಗಾಕಾಂಕ್ಷಿಗಳಿಗೆ ತೀವ್ರ ತೊಂದರೆಯಾಗುತ್ತದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

‘ಮುಕ್ತ ವಿವಿಯಲ್ಲೇ ಪದವಿ ಕೋರ್ಸ್‌ ಮಾಡಿದ್ದೆ. ಕೋವಿಡ್ ಸಂಕಷ್ಟದ ಕಾಲದಲ್ಲೂ ವಿಳಂಬವಾಗಿರಲಿಲ್ಲ. ಸರ್ಟಿಫಿಕೆಟ್‌ ಎಲ್ಲವನ್ನೂ ಸಕಾಲಕ್ಕೆ ಕೊಟ್ಟಿದ್ದರು. ಆದರೆ, ಎಂಬಿಎ ಪ್ರವೇಶ ಪಡೆದ ನಂತರ ಕಹಿ ಅನುಭವವೇ ಆಗುತ್ತಿದೆ. ವಿವಿಯಿಂದ ಸಮರ್ಪಕ ಉತ್ತರವೂ ಸಿಗುತ್ತಿಲ್ಲ’ ಎಂದು ಮತ್ತೊಬ್ಬ ವಿದ್ಯಾರ್ಥಿ ತಿಳಿಸಿದರು.

ಪ್ರೊ. ಶರಣಪ್ಪ ವಿ. ಹಲಸೆ
ಎಂಬಿಎ ವಿದ್ಯಾರ್ಥಿಗಳಿಗೆ ಸಂಪರ್ಕ ತರಗತಿಗಳಷ್ಟೆ ಇರುತ್ತವೆ. ಅದು ಏನಾಗಿದೆ ಎಂಬ ಮಾಹಿತಿ ಇಲ್ಲ. ವಿಭಾಗದ ಮುಖ್ಯಸ್ಥರಿಂದ ಮಾಹಿತಿ ‍ಪಡೆದು ಕ್ರಮ ಕೈಗೊಳ್ಳಲಾಗುವುದು
ಪ್ರೊ.ಶರಣಪ್ಪ ವಿ.ಹಲಸೆ ಕುಲಪತಿ ಕೆಎಸ್‌ಒಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.