ಮೈಸೂರು: ಗ್ರಾಮೀಣ ಪ್ರದೇಶದಿಂದ ತಾಲ್ಲೂಕು ಕೇಂದ್ರಕ್ಕೆ ಹಾಗೂ ತಾಲ್ಲೂಕು ಕೇಂದ್ರದಿಂದ ಮತ್ತೊಂದು ತಾಲ್ಲೂಕು ಕೇಂದ್ರಕ್ಕೆ ಮುಂಜಾನೆ–ಮುಸ್ಸಂಜೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಕಾಲಕ್ಕೆ ಸಂಚರಿಸದಿರುವುದರಿಂದ ಜಿಲ್ಲೆಯ ವಿವಿಧೆಡೆ ಪ್ರಯಾಣಿಕರು ನಿತ್ಯವೂ ಪರದಾಡುವಂತಾಗಿದೆ.
ಬೆಳಿಗ್ಗೆ ಎಂಟು ಗಂಟೆಯಿಂದ ಒಂಬತ್ತು ಗಂಟೆಯ ನಡುವೆ ಶಾಲಾ–ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿ ಕೆಲಸಕ್ಕಾಗಿ ತಾಲ್ಲೂಕು ಕೇಂದ್ರಕ್ಕೆ ಹೋಗುವ ಜನಸಾಮಾನ್ಯರ ಸಂಖ್ಯೆಯೇ ಹೆಚ್ಚಿರುತ್ತದೆ. ಈ ವೇಳೆಯೇ ಸಕಾಲಕ್ಕೆ ಸರಿಯಾಗಿ ಸಾರಿಗೆ ಬಸ್ ಸಂಚರಿಸುತ್ತಿಲ್ಲ ಎಂಬ ದೂರು ವಿದ್ಯಾರ್ಥಿ ಸಮೂಹದ್ದಾಗಿದೆ. ಇದಕ್ಕೆ ಪೋಷಕರು, ಜನ ಸಾಮಾನ್ಯರು ಸಹ ದನಿಗೂಡಿಸುತ್ತಾರೆ.
‘ನಮ್ಮ ತರಗತಿ ಆರಂಭವಾಗಿ ಎರಡೂವರೆ ತಿಂಗಳು ಗತಿಸಿತು. ನಿತ್ಯ ಬೆಳಿಗ್ಗೆ 7.30ರಿಂದ 9 ಗಂಟೆಯವರೆಗೂ ಸರಗೂರು ಬಸ್ ನಿಲ್ದಾಣದಲ್ಲಿ ಕಾದರೂ ಸಕಾಲಕ್ಕೆ ಸರಿಯಾಗಿ ಯಾವೊಂದು ಬಸ್ ಬರಲ್ಲ. ಗ್ರಾಮೀಣ ಪ್ರದೇಶದಿಂದ ಬರುವ ಬಸ್ ಅಲ್ಲಿಯೇ ಭರ್ತಿಯಾಗುವುದರಿಂದ ನಮಗೆ ಬಸ್‌ನೊಳಗೆ ಹತ್ತಲು ಸಾಧ್ಯವಾಗಲ್ಲ. ಇದು ಒಂದು ದಿನದ ಸಮಸ್ಯೆಯಲ್ಲ’ ಎಂದು ಸರಗೂರಿನ ವಿದ್ಯಾರ್ಥಿ ಮಲ್ಲೇಶ್ ದೂರಿದರು.
‘ಸರಗೂರು ಬಸ್ ನಿಲ್ದಾಣದ ಟ್ರಾಫಿಕ್ ಕಂಟ್ರೋಲರ್ ಅವರನ್ನು ಈ ಬಗ್ಗೆ ಪ್ರಶ್ನಿಸಿದರೆ ವೇಳಾಪಟ್ಟಿ ನೋಡಿ. ಅದರಂತೆ ಬಸ್ ಬರುತ್ತೆ ಎನ್ನುತ್ತಾರೆ. ಬರಲಿಲ್ಲವಲ್ಲಾ ಸಾರ್ ಎಂದು ಮತ್ತೆ ಕೇಳಿದರೆ, ನನ್ನೊಟ್ಟಿಗೆ ಜಗಳ ಮಾಡಲು ಬಂದಿದ್ದೀರಾ? ಎಂದು ದಬಾಯಿಸುತ್ತಾರೆ ವಿನಾ ಮತ್ತೊಂದು ಬಸ್‌ನ ವ್ಯವಸ್ಥೆ ಮಾಡಲ್ಲ’ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
‘ಸಾಗರೆಯಿಂದ ಬಸ್‌ಗಾಗಿ ಸರಗೂರಿಗೆ ಬರುವೆ. ಬೆಳಿಗ್ಗೆ 8ರಿಂದ 9.30ರವರೆಗೂ ಯಾವೊಂದು ಬಸ್ ಸಕಾಲಕ್ಕೆ ಬರಲ್ಲ. 9.15ಕ್ಕೆ ಗುಂಡ್ಲುಪೇಟೆಗೆ ಹೋಗುವ ಬಸ್ ಬರುತ್ತೆ. ಈ ಬಸ್‌ಗೆ ಹತ್ತಲು ಎಲ್ಲರಿಗೂ ಅವಕಾಶ ಸಿಗಲ್ಲ. ಸರಗೂರಿನಿಂದ ಹ್ಯಾಂಡ್‌ಪೋಸ್ಟ್‌ಗೆ ಖಾಸಗಿ ವಾಹನದಲ್ಲಿ ಹೋಗಿ, ಅಲ್ಲಿಂದ ಜೀಪ್‌ನಲ್ಲಿ ಎಚ್.ಡಿ.ಕೋಟೆಗೆ ನಿತ್ಯವೂ ಪಯಣಿಸಬೇಕಿದೆ’ ಎಂದು ಅಂತಿಮ ಪದವಿ ವಿದ್ಯಾರ್ಥಿ ಪ್ರಮೋದ್ ಅಳಲು ತೋಡಿಕೊಂಡರು.
‘ಸಕಾಲಕ್ಕೆ ಸರಿಯಾಗಿ ಕಾಲೇಜಿನ ತರಗತಿಗೆ ಹಾಜರಾಗದಿದ್ದರೆ ಉಪನ್ಯಾಸಕರು ಎಚ್ಚರಿಕೆ ನೀಡುತ್ತಾರೆ. ಸಮಸ್ಯೆ ಹೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ. ನಾವು ತರಗತಿ ಪ್ರವೇಶಿಸುವುದರೊಳಗಾಗಿ ಪಾಠ ಆರಂಭವಾಗಿರುತ್ತೆ. ಮಧ್ಯದಿಂದ ಏನೊಂದು ಅರ್ಥವಾಗಲ್ಲ. ಹಲವು ದಿನಗಳಿಂದ ನಮ್ಮ ಸಮಸ್ಯೆಗೆ ಪರಿಹಾರವೇ ಸಿಗದಾಗಿದೆ’ ಎಂದು ಹುಣಸೂರಿನ ಛಾಯಾದೇವಿ ಬಿ.ಇಡಿ ಕಾಲೇಜಿನ ವಿದ್ಯಾರ್ಥಿ ವಿನೋದ್, ಸಕಾಲಕ್ಕೆ ಸಾರಿಗೆ ಬಸ್ ಬಾರದಿರುವುದರಿಂದ ತಾವು ಎದುರಿಸುತ್ತಿರುವ ಸಮಸ್ಯೆಯ ಸರಮಾಲೆಯನ್ನೇ ‘ಪ್ರಜಾವಾಣಿ’ ಬಳಿ ಎಳೆಎಳೆಯಾಗಿ ಬಿಚ್ಚಿಟ್ಟರು.
635 ಬಸ್; 6 ಸಾವಿರ ಟ್ರಿಪ್
‘ಮೈಸೂರು ಜಿಲ್ಲೆಯ ಎಲ್ಲಿಯೂ ಸಾರಿಗೆ ಸಂಚಾರದ ಸಮಸ್ಯೆಯಿಲ್ಲ. ಗ್ರಾಮಾಂತರ ವಿಭಾಗದಿಂದ ನಿತ್ಯವೂ 635 ಬಸ್, ಇಷ್ಟೇ ಮಾರ್ಗಗಳಲ್ಲಿ ಆರು ಸಾವಿರ ಟ್ರಿಪ್‌ಗಳಲ್ಲಿ ಸಂಚರಿಸುತ್ತಿವೆ’ ಎನ್ನುತ್ತಾರೆ ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್.ಶ್ರೀನಿವಾಸ್.
‘ಯಾವ ಮಾರ್ಗದಲ್ಲಿ ಸಮಸ್ಯೆಯಿದೆ ಎಂದು ಸಾರ್ವಜನಿಕರು ನಿಖರವಾಗಿ ದೂರು ನೀಡಿದರೆ, ಆ ಭಾಗದಲ್ಲಿನ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸುತ್ತೇವೆ. ಹೆಚ್ಚುವರಿ ಬಸ್ ಸಹ ಓಡಿಸುತ್ತೇವೆ. ಕೋವಿಡ್‌ಗೂ ಮುನ್ನ ಯಾವ ರೀತಿ ಕಾರ್ಯಾಚರಣೆ ನಡೆದಿತ್ತು, ಈಗಲೂ ಅಷ್ಟೇ ಸಂಖ್ಯೆಯ ಬಸ್‌ಗಳು ನಮ್ಮ ವಿಭಾಗದಿಂದ ಕಾರ್ಯಾಚರಿಸುತ್ತಿವೆ. ಎಲ್ಲೆಡೆ ಕನಿಷ್ಠ ಅರ್ಧ ಗಂಟೆಗೊಂದು ಬಸ್ ಸಂಚಾರವಿದೆ. ಬೆಳಿಗ್ಗೆ 8ರಿಂದ 9 ಗಂಟೆಯ ಅವಧಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದು ಸಹಜ’ ಎಂದು ಶ್ರೀನಿವಾಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.