ADVERTISEMENT

ಮಠಮಾನ್ಯಗಳ ಬಗ್ಗೆ ಸರ್ಕಾರದ ದೃಷ್ಟಿ ಬದಲಾಗಲಿ: ಬಿ.ವೈ.ವಿಜಯೇಂದ್ರ

ಕುದೇರು ಮಠದ ಧಾರ್ಮಿಕ ಸಭೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 5:17 IST
Last Updated 24 ಜೂನ್ 2024, 5:17 IST
ಮೈಸೂರಿನ ಆಲನಹಳ್ಳಿ ಬಡಾವಣೆಯ ಕುದೇರು ಮಠದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಿದ್ಧಲಿಂಗ ಸ್ವಾಮೀಜಿ, ಗುರುಶಾಂತ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ ಉದ್ಘಾಟಿಸಿದರು. ಶರತ್‌ಚಂದ್ರ ಸ್ವಾಮೀಜಿ, ಜಿ.ಟಿ. ದೇವೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ. ಟಿ.ಎಸ್‌.ಶ್ರೀವತ್ಸ, ಕವೀಶ್ ಗೌಡ ಹಾಜರಿದ್ದರು– ಪ್ರಜಾವಾಣಿ ಚಿತ್ರ
ಮೈಸೂರಿನ ಆಲನಹಳ್ಳಿ ಬಡಾವಣೆಯ ಕುದೇರು ಮಠದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಿದ್ಧಲಿಂಗ ಸ್ವಾಮೀಜಿ, ಗುರುಶಾಂತ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ ಉದ್ಘಾಟಿಸಿದರು. ಶರತ್‌ಚಂದ್ರ ಸ್ವಾಮೀಜಿ, ಜಿ.ಟಿ. ದೇವೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ. ಟಿ.ಎಸ್‌.ಶ್ರೀವತ್ಸ, ಕವೀಶ್ ಗೌಡ ಹಾಜರಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಅನ್ನ ಹಾಗೂ ಅಕ್ಷರ ದಾಸೋಹ ನೀಡುತ್ತಿರುವ ನಾಡಿನ ಮಠಮಾನ್ಯಗಳ ಬಗ್ಗೆ ಸರ್ಕಾರ ನೋಡುವ ದೃಷ್ಟಿ ಬದಲಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಇಲ್ಲಿನ ಆಲನಹಳ್ಳಿ ಬಡಾವಣೆಯ ಕುದೇರು ಮಠದಲ್ಲಿ ಭಾನುವಾರ ಗುರುಮಲ್ಲೇಶ್ವರರ 125ನೇ ಗಣಾರಾಧನೆ, ತೋಂಟದಾರ್ಯ ಸ್ವಾಮೀಜಿ ಅವರ ಪ್ರಾರ್ಥನಾ ಮಂದಿರ ಉದ್ಘಾಟನೆ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. 

‘ದಾಸೋಹದ ಪರಂಪರೆಗೆ ಶಕ್ತಿ ತುಂಬುವ ಕೆಲಸವನ್ನು ವೀರಶೈವ ಲಿಂಗಾಯತ ಮಠಗಳು ಮಾಡಿವೆ. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಜನಸೇವೆಯನ್ನು ನಿರಂತರವಾಗಿ ಮಾಡಿರುವ ಮಠಗಳ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಮಾಡಿದ್ದರು’ ಎಂದು ಸ್ಮರಿಸಿದರು. 

ADVERTISEMENT

‘ಕುರುಡ ಭಿಕ್ಷುಕನಿಗೆ ಸದ್ದು ಕೇಳುವಂತೆ ಚಿಲ್ಲರೆ ಹಾಕಿ, ನೋಟುಗಳನ್ನು ಎತ್ತಿಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಬಿತ್ತನೆ ಬೀಜ ಶೇ 40ರಷ್ಟು ಬೆಲೆ ಏರಿಕೆ ಆಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು. 

‘ಜೆಡಿಎಸ್‌ಗೆ ಈಗ ಅದೃಷ್ಟ ಬಂದಿದೆ. ಆ ಪಕ್ಷದ ನಾಯಕರ ಮೇಲೆ ಅಭಿಮಾನವೂ ಇದೆ, ಭಯವೂ ಇದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ‘ಆಂಧ್ರಪ್ರದೇಶದಲ್ಲಿ ಉಚಿತ ಯೋಜನೆಗಳನ್ನು ನೀಡಿದ್ದ ಜಗನ್‌ಮೋಹನ್ ರೆಡ್ಡಿ ಅವರಂತೆಯೇ ಕಾಂಗ್ರೆಸ್ ಪಕ್ಷವನ್ನೂ ಜನರು ಮನೆಗೆ ಕಳುಹಿಸುತ್ತಾರೆ. ಲೋಕಸಭಾ ಚುನಾವಣೆಯಲ್ಲಿ 9 ಸ್ಥಾನ ನೀಡಿ ಗ್ಯಾರಂಟಿ ಯೋಜನೆಗಳಿಗಿಂತ ದೇಶ ಮುಖ್ಯವೆಂದಿದ್ದಾರೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ‘ಶಾಂತಿ-ನೆಮ್ಮದಿ, ನೈತಿಕ ಮೌಲ್ಯಕ್ಕಾಗಿ ಜನರಿಗೆ ಧರ್ಮ ಬೇಕು. ಸಂಕಷ್ಟದ ವೇಳೆ ಮಠಾಧೀಶರು, ಶಿವಶರಣರ ಮಾರ್ಗದರ್ಶನ ಕಡೆಗಣಿಸಲಾಗದು’ ಎಂದರು. ಮಠಮಾನ್ಯಗಳು ಬಡವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿವೆ’ ಎಂದರು.

ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಶರತ್‌ಚಂದ್ರ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಶಾಸಕ ಟಿ.ಎಸ್.ಶ್ರೀವತ್ಸ, ವಿದ್ಯಾವಿಕಾಸ ಸಂಸ್ಥೆಯ ಕಾರ್ಯದರ್ಶಿ ವಿ.ಕವೀಶ್‌ಗೌಡ, ನಿವೃತ್ತ ಪ್ರಾಧ್ಯಾಪಕ ಡಿ.ಎಸ್.ಸದಾಶಿವಮೂರ್ತಿ ಹಾಜರಿದ್ದರು.

‘ಮಕ್ಕಳಿಗೆ ಸಂಸ್ಕಾರ ಕಲಿಸಿ’

‘ಮಠಗಳು ಶಿಕ್ಷಣ ದಾಸೋಹದ ಮೂಲಕ ಜನರಿಗೆ ಶಕ್ತಿ ತುಂಬಿದ್ದಾರೆ. ಮಠಗಳಲ್ಲಿ ಕಲಿತವರು ಕೆಎಎಸ್‌– ಐಎಎಸ್‌ ಅಧಿಕಾರಿಗಳು ರಾಜಕಾರಣಿಗಳು ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಆಧುನಿಕ ಯುಗದ ಭರಾಟೆಯಲ್ಲಿ ಮಠಮಾನ್ಯಗಳ ಮೇಲಿನ ಭಕ್ತಿಯು ಇಂದಿನ ಪೀಳಿಗೆಯಲ್ಲಿ ಕಡಿಮೆಯಾಗುತ್ತಿದ್ದು ಪೋಷಕರು ಸಂಸ್ಕಾರ ಕಲಿಸಬೇಕು’ ಎಂದು ವಿಜಯೇಂದ್ರ ಸಲಹೆ ನೀಡಿದರು.  ‘ಸಂಸ್ಕಾರದ ಕೊರತೆ ಇದ್ದಾಗ ಹಿನ್ನಡೆ ಅನುಭವಿಸಬೇಕಾಗುತ್ತದೆ. ಅವ್ಯವಸ್ಥೆ ಸೃಷ್ಟಿಯಾಗುತ್ತದೆ. ಮಕ್ಕಳು ಶ್ರದ್ಧಾಭಕ್ತಿಯಿಂದ ಮಠ ಮಾನ್ಯಗಳಿಗೆ ನಡೆದುಕೊಳ್ಳಬೇಕು. ಸರಿ ದಾರಿಯಲ್ಲಿ ಕರೆದೊಯ್ಯುವ ಕೆಲಸವನ್ನು ಪೋಷಕರು ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.