ಮೈಸೂರು: ‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲುವುದು ಗ್ಯಾರಂಟಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
‘ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೊಸ ಮುಖ’ ಎಂಬ ಜೆಡಿಎಸ್‌ನವರ ಹೇಳಿಕೆಗೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿ, ‘ಮಂಡ್ಯಕ್ಕೆ ಕುಮಾರಸ್ವಾಮಿ ಹೊಸ ಮುಖ ಅಲ್ಲವೇ? ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮಗನೇ (ನಿಖಿಲ್) ಸೋಲಲಿಲ್ಲವೇ? ಮುಖ್ಯಮಂತ್ರಿಯಾಗಿದ್ದಾಗಲೇ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಈಗ ಅವರು ಗೆಲ್ಲುತ್ತಾರೆಯೇ?’ ಎಂದು ಕೇಳಿದರು.
‘ನಮ್ಮ ಅಭ್ಯರ್ಥಿ ಮಂಡ್ಯದವರು. ಕುಮಾರಸ್ವಾಮಿ ಹಾಸನದವರು’ ಎಂದರು.
‘ಮಂಡ್ಯ ಸಂಸದೆ ಸುಮಲತಾ ಅವರೊಂದಿಗೆ ಚರ್ಚಿಸಿಲ್ಲ. ನಮ್ಮ ಅಭ್ಯರ್ಥಿಯೇ ಸ್ಟ್ರಾಂಗ್ ಇದ್ದಾರೆ. ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ನಾವು ಸೋಲಿಸುತ್ತೇವೆ’ ಎಂದರು.
‘ಕೋಲಾರದಲ್ಲಿ ಸಚಿವರು ಹಾಗೂ ಶಾಸಕರ ನಡುವೆ ಅಸಮಾಧಾನವಿರುವುದು ಸತ್ಯ. ದಲಿತರಲ್ಲಿ ಎಡಗೈ ಬದಲು ಬಲಗೈ ಸಮುದಾಯದವರಿಗೆ ಟಿಕೆಟ್ ಕೊಡಬೇಕು ಎಂಬುದು ಅಲ್ಲಿನವರ ಒತ್ತಾಯ. ನಾನೂ ಮುಖಂಡರ ಜೊತೆ ಮಾತನಾಡಿದ್ದು, ಸಮಾಧಾನದಿಂದ ಇರುವಂತೆ ಹೇಳಿದ್ದೇನೆ. ಅಲ್ಲಿಗೆ ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಆದರೂ ಎಡಗೈಯವರಿಗೆ ಕೊಡಬಹುದೆಂದು ಭಯಪಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.