ADVERTISEMENT

ಕುರುಬಾರಹಳ್ಳಿ ವಿವಾದ: ನಾಳೆಯಿಂದಲೇ ಖಾತೆ

9 ವರ್ಷದ ಸಮಸ್ಯೆಗೆ ಪರಿಹಾರ: ಸ್ಥಳೀಯರ ಕ್ಷಮೆ ಕೋರಿದ ಶಾಸಕ ಎಸ್‌.ಎ.ರಾಮದಾಸ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 13:15 IST
Last Updated 1 ಆಗಸ್ಟ್ 2020, 13:15 IST
ರಾಮದಾಸ್
ರಾಮದಾಸ್   

ಮೈಸೂರು: ‘ಕುರುಬಾರಹಳ್ಳಿ ಸರ್ವೆ ನಂಬರ್ 4ರ ವ್ಯಾಪ್ತಿಗೊಳಪಡುವ ಐದು ಬಡಾವಣೆಗಳ ಸಮಸ್ಯೆಗೆ ರಾಜ್ಯ ಸರ್ಕಾರ ಇತಿಶ್ರೀ ಹಾಕಿದೆ. ಸೋಮವಾರದಿಂದಲೇ (ಆ.3) ಮೈಸೂರು ಮಹಾನಗರ ಪಾಲಿಕೆಯ ಆಡಳಿತ, ಅಲ್ಲಿನ ನಿವೇಶನ–ಮನೆ ಮಾಲೀಕರಿಗೆ ಖಾತೆ ಮಾಡಿಕೊಡುವುದು’ ಎಂದು ಶಾಸಕ ಎಸ್‌.ಎ.ರಾಮದಾಸ್ ತಿಳಿಸಿದರು.

‘ತಮ್ಮದಲ್ಲದ ತಪ್ಪಿಗೆ ಒಂಬತ್ತು ವರ್ಷದಿಂದ ಆಲನಹಳ್ಳಿ ಬಡಾವಣೆ, ಸಿದ್ಧಾರ್ಥ ನಗರ, ಕೆ.ಸಿ.ನಗರ, ಜೆ.ಸಿ.ಲೇಔಟ್, ಆದಾಯ ತೆರಿಗೆ ಬಡಾವಣೆಯ ಜನರು ತೊಂದರೆ ಅನುಭವಿಸಿದರು. ಇದಕ್ಕೆ ಅವರ ಕ್ಷಮೆ ಕೋರುವೆ’ ಎಂದು ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಮುಡಾ ಆಯುಕ್ತರಿಗೆ ಲಿಖಿತ ಆದೇಶ ನೀಡಿದ್ದಾರೆ. ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಸಹ ಹೈಕೋರ್ಟ್‌ಗೆ 354 ಎಕರೆ ಪ್ರದೇಶವನ್ನು ಬಿ ಖರಾಬು ಮುಕ್ತಗೊಳಿಸಿರುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಮೇಲ್ಮನವಿ ಸಲ್ಲಿಸಿದರೂ, ಈ ಜಾಗ ಅದರ ವ್ಯಾಪ್ತಿಗೆ ಬರಲ್ಲ’ ಎಂದು ರಾಮದಾಸ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಐದು ಬಡಾವಣೆಯ ಜನರು ಆತಂಕಕ್ಕೆ ಒಳಗಾಗಬೇಕಿಲ್ಲ. ಇನ್ಮುಂದೆ ತಮ್ಮ ನಿವೇಶನ, ಮನೆ ದಾಖಲೆಗಳಲ್ಲಿ ಬಿ ಖರಾಬಿನ ಜಾಗದಲ್ಲಿ ನಿಮ್ಮದೇ ಹೆಸರು ಬರಲಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಆಯುಕ್ತರಿಗೂ ಪತ್ರ ಮುಖೇನ ಸೂಚಿಸಲಾಗಿದೆ. ಸೋಮವಾರದಿಂದಲೇ ಖಾತೆ, ನಕ್ಷೆ ಅನುಮೋದನೆ, ಕಟ್ಟಡ ನಿರ್ಮಾಣ ಪರವಾನಗಿಯನ್ನು ಪಾಲಿಕೆ ಆಡಳಿತ ನೀಡಲಿದೆ’ ಎಂದು ಶಾಸಕರು ತಿಳಿಸಿದರು.

‘ಆನ್‌ಲೈನ್‌ನಲ್ಲೂ ಈ ಭಾಗದ ಜನರು ತಮಗೆ ಬೇಕಾದ ದಾಖಲೆ ಪಡೆಯಲು ಅವಕಾಶವಿದೆ’ ಎಂದು ತಿಳಿಸಿದರು.

‘ಬಿ ಖರಾಬಿನ ನೋಟಿಫಿಕೇಶನ್ ಹೊರಡಿಸುವ ಸಂದರ್ಭ, ಆಗಿನ ಜಿಲ್ಲಾಧಿಕಾರಿ ವಸತಿ ಪ್ರದೇಶ ಹೊರತುಪಡಿಸಿ ಎಂಬುದನ್ನು ಸೇರ್ಪಡೆಗೊಳಿಸಿದ್ದರೆ, ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಬಿಜೆಪಿ ಸೃಷ್ಟಿಸಿದ ಸಮಸ್ಯೆ ಇದಲ್ಲ. ಎಲ್ಲದಕ್ಕೂ ತಾರ್ಕಿಕ ಅಂತ್ಯ ಕಂಡುಕೊಳ್ಳಲಾಗಿದೆ’ ಎಂದು ರಾಮದಾಸ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬ್ರಾಹ್ಮಣರಿಗೂ ಜಾತಿ ಪ್ರಮಾಣ ಪತ್ರ

‘ಬ್ರಾಹ್ಮಣರಿಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವ ಬಗ್ಗೆ ಸೃಷ್ಟಿಯಾಗಿದ್ದ ಗೊಂದಲವನ್ನು ರಾಜ್ಯ ಸರ್ಕಾರ ಬಗೆಹರಿಸಿದೆ. ಆ.5ರಿಂದ ರಾಜ್ಯದ ಎಲ್ಲ ಅಟಲ್‌ಜಿ ಸ್ನೇಹ ಕೇಂದ್ರ, ನಾಡ ಕಚೇರಿಗಳಲ್ಲಿ, ತಹಶೀಲ್ದಾರ್ ಕಚೇರಿಗಳಲ್ಲಿ ಬ್ರಾಹ್ಮಣರು ಸಹ ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು’ ಎಂದು ಶಾಸಕ ಎಸ್‌.ಎ.ರಾಮದಾಸ್ ತಿಳಿಸಿದರು.

‘ಬ್ರಾಹ್ಮಣ ಸಂಘಟನೆಗಳು, ಸಮಾಜ ಆತಂಕ ಪಡಬೇಕಿಲ್ಲ. 2018–19ನೇ ಸಾಲಿನಲ್ಲಿ ನಡೆದಿರುವ ಸಮೀಕ್ಷೆಯನ್ನು ಆಧಾರವಾಗಿಟ್ಟುಕೊಂಡಿರುವ ಸರ್ಕಾರ ಮಾನದಂಡವೊಂದನ್ನು ರೂಪಿಸಿದೆ. ಎಲ್ಲ ಅರ್ಹ ಬ್ರಾಹ್ಮಣರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಿಗಲಿದೆ’ ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಸ್ಪತ್ರೆಗಳಿಗೆ ಮೂಲ ಸೌಲಭ್ಯ

‘ಮೈಸೂರು ಜಿಲ್ಲಾ ಕೋವಿಡ್–19 ಆಸ್ಪತ್ರೆ ಹಾಗೂ ಕೆ.ಆರ್.ಆಸ್ಪತ್ರೆಗೆ 50 ವೆಂಟಿಲೇಟರ್, ನರ್ಸ್‌ ಹಾಗೂ ಶುಶ್ರೂಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ’ ಎಂದು ರಾಮದಾಸ್ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಬದಲಾವಣೆಯಿಲ್ಲ: ರಾಮದಾಸ್

‘ಇಳಿ ವಯಸ್ಸಿನಲ್ಲೂ ಬಿ.ಎಸ್.ಯಡಿಯೂರಪ್ಪ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್–19 ನಿಯಂತ್ರಿಸುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ಪ್ರಸ್ತಾಪವೇ ಇಲ್ಲ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
‘ಆದರ್ಶ, ಸಿದ್ಧಾಂತ ಇಟ್ಟುಕೊಂಡಿರುವೆ. ಏನೊಂದು ಇಲ್ಲದ ನನಗೆ ಸಕಲ ಅವಕಾಶವನ್ನು ಪಕ್ಷ ಕೊಟ್ಟಿದೆ. ತಾಯಿ ಸ್ಥಾನದಲ್ಲಿ ನನ್ನನ್ನು ಸಲುಹಿದೆ. ಯಡಿಯೂರಪ್ಪ ತಂದೆಯ ಸ್ಥಾನದಲ್ಲಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿ ನಾನಾಗಿಲ್ಲ. ಪಕ್ಷ ಸೂಚಿಸಿದ ಜವಾಬ್ದಾರಿಯನ್ನಷ್ಟೇ ನಿಭಾಯಿಸುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ಛಾಯಾದೇವಿ, ರೂಪಾ, ಬಿಜೆಪಿ ಮುಖಂಡ ಬಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.