ADVERTISEMENT

ಕುವೆಂಪು ಅವರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸುವುದು ಸಲ್ಲ: ಪ್ರೊ.ನಾಗೇಶ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 13:55 IST
Last Updated 29 ಡಿಸೆಂಬರ್ 2023, 13:55 IST
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕುವೆಂಪು ಕವನಗಳ ಭಾವಗೀತೆ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೊ.ನಾಗೇಶ ವಿ. ಬೆಟ್ಟಕೋಟೆ ಹಾಗೂ ಪ್ರೊ.ಶರಣಪ್ಪ ವಿ. ಹಲಸೆ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕುವೆಂಪು ಕವನಗಳ ಭಾವಗೀತೆ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೊ.ನಾಗೇಶ ವಿ. ಬೆಟ್ಟಕೋಟೆ ಹಾಗೂ ಪ್ರೊ.ಶರಣಪ್ಪ ವಿ. ಹಲಸೆ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಮೈಸೂರು: ‘ಕುವೆಂಪು ಅವರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸುವ ಸಂಸ್ಕೃತಿ ಸಲ್ಲ. ಅವರು ತಮ್ಮ ವೈಚಾರಿಕ ನಿಲುವಿನ ಮೂಲಕ ಅವನ್ನು ವಿರೋಧಿಸಿರುವುದನ್ನು ಮರೆಯಬಾರದು’ ಎಂದು ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ ವಿ. ಬೆಟ್ಟಕೋಟೆ ತಿಳಿಸಿದರು.

ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕುವೆಂಪು ಕವನಗಳ ಭಾವಗೀತೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

‘ಸಾಹಿತ್ಯದ ಎಲ್ಲಾ ವಿಭಾಗಗಳಲ್ಲೂ ಕುವೆಂಪು ಅವರ ಅಕ್ಷರ ಸೌಂದರ್ಯ ಹೊಸ ಲೋಕ ಸೃಷ್ಟಿಸಿದೆ. ಅವರ ಸಾಹಿತ್ಯದ ಗಂಭೀರತೆಯಿಂದಾಗಿ ಸಾಮಾನ್ಯನಿಗೂ ಮಾನ್ಯತೆ ದೊರೆಯುವಂತಾಗಿದೆ. ಹೀಗಾಗಿ ಅವರ ಕಾವ್ಯಗಳಲ್ಲಿ ಬರುವ ಪ್ರತಿ ಪದವೂ ಪ್ರಸ್ತುತ. ಬರಹದ ಶಕ್ತಿಯಿಂದ ವಿಶ್ವವನ್ನೇ ತನ್ನೆಡೆಗೆ ಸೆಳೆಯುವಂತೆ ಮಾಡಿದ ಸಾಹಿತಿಯನ್ನು ಹೊಂದಿದ್ದ ಬಗ್ಗೆ ಹೆಮ್ಮೆ ಪಡಬೇಕು’ ಎಂದು ವಿವರಿಸಿದರು.

ADVERTISEMENT

‘ಬುದ್ಧ, ಬಸವ, ಅಂಬೇಡ್ಕರ್ ಬಳಿಕ ವೈಚಾರಿಕತೆಯನ್ನು ಎತ್ತಿ ಹಿಡಿದು ಅವನ್ನು ಪಾಲಿಸಿದವರು ಕುವೆಂಪು. ಆ ಚಿಂತನೆಗಳಿಂದ ಕೂಡಿದ ಅವರ ಕವಿತೆಗಳು ನಾಡಗೀತೆ, ರೈತ ಗೀತೆಯಾಗಿ ಪ್ರಸ್ತುತಗೊಂಡಿವೆ. ಅಂದಿನ ಕಾಲಘಟ್ಟದಲ್ಲಿ ಅವರನ್ನು ಕವಿ ಎಂದು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದರು. ಅವರ ವಿಚಾರಧಾರೆಗಳನ್ನು ಇಂದಿಗೂ ಒಂದು ಗುಂಪು ಸ್ವೀಕರಿಸುವುದಿಲ್ಲ. ಆದರೂ ಅವರು ವೈಚಾರಿಕ ನಿಲುವಿನ ಕಾರಣದಿಂದ ಎಲ್ಲರ ಮನದಲ್ಲಿದ್ದಾರೆ’ ಎಂದರು.

‘ನಮ್ಮ ತಂಡವು ಮಲೆಗಳಲ್ಲಿ ಮದುಮಗಳು ನಾಟಕವನ್ನು ಮೈಸೂರು, ಬೆಂಗಳೂರಿನಲ್ಲಿ ಪ್ರದರ್ಶನ ಮಾಡಿತ್ತು. ಆ ವೇಳೆ ಟೆಕಿಗಳು ನೋಡಲು ಬರುತ್ತಿದ್ದರು. ಕುವೆಂಪು ಪ್ರೇರಣೆಯಿಂದ ಅವರು ಈಗ ತಮ್ಮ ಸಂಸ್ಥೆಗಳಲ್ಲಿ ಸಾಹಿತ್ಯ ಕೂಟಗಳನ್ನು ರಚಿಸಿ ಕನ್ನಡದ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ಉತ್ತಮ ಸಂಸ್ಕೃತಿ ಮುಂದುವರಿಸಲು ಓದುವ ಸಂಸ್ಕೃತಿ ಹೆಚ್ಚಬೇಕು’ ಎಂದು ಸಲಹೆ ನೀಡಿದರು.

ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಎಲ್‌.ಎನ್‌ ಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಬಿ.ಪ್ರವೀಣ, ಶೈಕ್ಷಣಿಕ ಡೀನ್‌ ಪ್ರೊ.ಎನ್‌.ಲಕ್ಷ್ಮಿ, ಅಧ್ಯಯನ ವಿಭಾಗದ ಡೀನ್‌ ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿ ರಮೇಶ್‌, ಕುವೆಂಪು ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಎನ್.ಆರ್ ಚಂದ್ರೇಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.