ಮೈಸೂರು: ‘ಮತಾಂತರ ನಿಷೇಧ ಕಾಯ್ದೆ ಆರ್‌ಎಸ್‌ಎಸ್‌ನ ಅಜೆಂಡಾವಲ್ಲದೆ ಬೇರೇನೂ ಅಲ್ಲ. ಆಡಳಿತ ಪಕ್ಷವೊಂದು ಈ ರೀತಿ ಕೀಳುಮಟ್ಟದ ಗಿಮಿಕ್ ಮಾಡುತ್ತಿರುವುದು ಸರಿಯಲ್ಲ’ ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಕಿಡಿಕಾರಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಕಾಯ್ದೆ ಕೆಳವರ್ಗದ ಸಮುದಾಯಗಳಿಗೆ ಮಾಡುತ್ತಿರುವ ಅವಮಾನ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಬಗ್ಗೆ ಸರ್ಕಾರ ಹೀನಾಯ ಧೋರಣೆ ತಳೆದಿದೆ. ಯಾರ ಹಿತ ಕಾಪಾಡಲು ಕಾಯ್ದೆ ಜಾರಿಗೆ ಮುಂದಾಗಿದೆ’ ಎಂದು ಪ್ರಶ್ನಿಸಿದರು.
‘ಬಲವಂತದಿಂದ ಎಷ್ಟು ಮಂದಿ ಮತಾಂತರ ಆಗಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ಜನರ ಮುಂದಿಡಲಿ. ಮುಸ್ಲಿಮರು, ಕ್ರೈಸ್ತರು ಮತ್ತು ಬೌದ್ಧರ ಜನಸಂಖ್ಯೆ ಎಷ್ಟು ಜಾಸ್ತಿ ಆಗಿದೆ? ಅದರಲ್ಲಿ ಎಷ್ಟು ಮಂದಿ ಬಲವಂತದ ಮತಾಂತರಕ್ಕೆ ಒಳಗಾಗಿದ್ದಾರೆ? ಆಮಿಷಕ್ಕೆ ಒಳಗಾಗಿ ದುಡ್ಡು ತೆಗೆದುಕೊಂಡವರು ಎಷ್ಟು? ಈ ಕುರಿತ ಅಂಕಿ–ಸಂಖ್ಯೆಗಳ ದಾಖಲೆಯನ್ನು ಸರ್ಕಾರ ಬಿಡುಗಡೆಗೊಳಿಸಲು’ ಎಂದು ಆಗ್ರಹಿಸಿದರು.
‘ದೇಶದಲ್ಲಿ ಕ್ರೈಸ್ತರ ಜನಸಂಖ್ಯೆ ಕಡಿಮೆಯಾಗಿದೆಯೇ ಹೊರತು, ಹೆಚ್ಚಾಗಿಲ್ಲ. 1951ರಲ್ಲಿ ಇದ್ದ ಜನಸಂಖ್ಯೆಗೆ ಹೋಲಿಸಿದರೆ ಶೇ 0.04 ರಷ್ಟು ಕಡಿಮೆಯಾಗಿದೆ. ಮತಾಂತರ ದೊಡ್ಡ ಪ್ರಮಾಣದಲ್ಲಿ ಆಗಿದ್ದರೆ ಜನಸಂಖ್ಯೆ ಇಮ್ಮಡಿ ಆಗಬೇಕಿತ್ತು. ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಟ್ಟು, ಜನರ ಗಮನ ಬೇರೆಡೆ ಸೆಳೆಯಲು ಕಾಯ್ದೆ ಜಾರಿಗೊಳಿಸುತ್ತಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.