ADVERTISEMENT

ಮೈಸೂರು | ಪಾರ್ಕ್‌ಗೆ ದುಬಾರಿ ವೆಚ್ಚ; ನಿರ್ವಹಣೆ ನಗಣ್ಯ

ಡಿ.ಕೆ.ಬಸವರಾಜು
Published 15 ಜುಲೈ 2024, 8:01 IST
Last Updated 15 ಜುಲೈ 2024, 8:01 IST
<div class="paragraphs"><p>ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಫೌಂಟೇನ್‌ ಹಾಳಾಗಿರುವುದು </p></div>

ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಫೌಂಟೇನ್‌ ಹಾಳಾಗಿರುವುದು

   

–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಈಗಾಗಲೇ ಹಲವು ಬಾರಿ ಮಳೆಯಾಗಿದೆ. ಉದ್ಯಾನದಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಇವುಗಳ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.

ADVERTISEMENT

ಮೈಸೂರು ನಗರದಲ್ಲಿ ಒಟ್ಟು 529 ಉದ್ಯಾನಗಳಿದ್ದು, ಅವುಗಳಲ್ಲಿ 295 ಉದ್ಯಾನಗಳು ಅಭಿವೃದ್ಧಿಯಾಗಿವೆ. 234 ಉದ್ಯಾನಗಳು ಯಾವುದೇ ಅಭಿವೃದ್ಧಿಯಾಗಿಲ್ಲ. 

ಹಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೆ ಬೆಳಿಗ್ಗೆ ಹಾಗೂ ಸಂಜೆ ವಾಕಿಂಗ್, ವ್ಯಾಯಾಮ ಹಾಗೂ ವಿಶ್ರಾಂತಿಗೆ ಉದ್ಯಾನಗಳು ಅನುಕೂಲಕರವಾಗಿವೆ. ಆದರೆ, ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಗಿಡಗಂಟಿಗಳಿಂದಲೇ ತುಂಬಿ ಹೋಗಿವೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌, ಕಾಗದ ಸೇರಿದಂತೆ ತ್ಯಾಜ್ಯವನ್ನು ಬಿಸಾಡಲಾಗಿದೆ. ಕೆಲವು ಕಡೆ ಕುಳಿತುಕೊಳ್ಳುವ ಆಸನಗಳು ಮುರಿದುಬಿದ್ದರೆ, ಮಕ್ಕಳ ಆಟಿಕೆಗಳು ಹಾಳಾಗಿವೆ. ಕೆಲವು ಉದ್ಯಾನಗಳಲ್ಲಿ ವ್ಯಾಯಾಮದ ಉಪಕರಣಗಳನ್ನು ಅಳವಡಿಸಿದ್ದರೂ, ನಿರ್ವಹಣೆ ಕೊರತೆಯಿಂದ ಉಪಯೋಗಕ್ಕೆ ಬಾರದಂತಾಗಿವೆ.

ಉದ್ಯಾನಗಳಲ್ಲಿ ದೀಪದ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಸಂಜೆ ಮತ್ತು ರಾತ್ರಿ ವೇಳೆ ಉದ್ಯಾನಗಳಿಗೆ ಹೋಗಲು ಮಹಿಳೆಯರು ಮತ್ತು ಮಕ್ಕಳು ಭಯಪಡುವಂತಾಗಿದೆ. ಅಲ್ಲದೇ ಕೆಲವು ಉದ್ಯಾನಗಳಲ್ಲಿ ಪುಂಡಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಅನೈತಿಕ ಚಟುವಟಿಕೆಯ ತಾಣವಾಗುತ್ತಿವೆ. ಅಲ್ಲಲ್ಲಿ ಮದ್ಯದ ಖಾಲಿ ಬಾಟಲಿಗಳು, ಗಾಜುಗಳನ್ನು ಎಸೆದಿದ್ದು, ನಾಗರಿಕರಿಗೆ ಕಿರಿಕಿರಿಯಾಗುತ್ತಿದೆ.

ಸರಸ್ವತಿಪುರಂ ಬಳಿ ರಾಮಮಂದಿರ ಉದ್ಯಾನದಲ್ಲಿ ಆಟಿಕೆಗಳನ್ನು ಅಳವಡಿಸಲಾಗಿದ್ದು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿದ್ದರೂ ನಿರ್ವಹಣೆ ಚೆನ್ನಾಗಿಲ್ಲ. ಶೌಚಾಲಯದಲ್ಲಿ ನಿರಂತರವಾಗಿ ನೀರು ಸುರಿಯುತ್ತಿರುತ್ತದೆ. ಅದನ್ನು ನಿಲ್ಲಿಸುವ ಗೋಜಿಗೆ ಹೋಗಿಲ್ಲ.

‘ಈ ಹಿಂದೆ ಪಾರ್ಕ್ ತೀರ ಅವ್ಯವಸ್ಥೆಯಾಗಿತ್ತು. ಈಗ ಸ್ವಲ್ಪ ಸುಧಾರಿಸಿದೆ. ಜನರೂ ಬರುತ್ತಾರೆ’ ಎಂದು ಪಾರ್ಕ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ ತೋಟಗಾರ ಮರಿಗೌಡ.

ನಗರದ ಶಾಂತಲಾ ಥಿಯೇಟರ್ ಎದುರು ಇರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಫೌಂಟೆನ್‌ನಲ್ಲಿ ಕೊಳಚೆ ನೀರು ಇದ್ದು, ಸೊಳ್ಳೆಗಳ ತಾಣವಾಗಿದೆ. ಪಾರ್ಕ್ ಕಾಂಪೌಂಡ್‌ ಬಳಿಯೇ ಹಸುಗಳನ್ನು ಕಟ್ಟಿ ಹಾಕುವುದು ಕೂಡ ಕಂಡುಬರುತ್ತಿದೆ.

‘ವಿಜಯನಗರದ ಎರಡನೇ ಹಂತದ ಎಸ್‌ಬಿಐ ಬ್ಯಾಂಕ್ ಬಳಿಯ ಉದ್ಯಾನದಲ್ಲಿ ಮದ್ಯದ ಬಾಟಲಿಗಳು ಬಿದ್ದಿದ್ದವು. ಹಲವು ಉದ್ಯಾನಗಳಿಗೆ ಬೀದಿ ದೀಪಗಳೇ ಇಲ್ಲ. ಪಾರ್ಕ್‍ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತದೆ. ವಿಜಯನಗರ ಎರಡನೇ ಹಂತದ ಕೆಡಿ ಸರ್ಕಲ್ ಬಳಿ ಇರುವ ಉದ್ಯಾನದಲ್ಲಿ ನಿರ್ವಹಣೆ ಚೆನ್ನಾಗಿದ್ದರೂ ಬೀದಿ ದೀಪಗಳು ಇಲ್ಲ. ವಿಜಯನಗರ ಮೊದಲ ಹಂತ ಯೋಗ ನರಸಿಂಹಸ್ವಾಮಿ ದೇವಾಲಯದ ಬಳಿಯ ಉದ್ಯಾನದಲ್ಲೂ ಇದೇ ಪರಿಸ್ಥಿತಿ ಇದೆ. ಮಕ್ಕಳ ಆಟಿಕೆಗಳು ಹಾಳಾದರೆ ಅವುಗಳನ್ನು ದುರಸ್ತಿ ಮಾಡುತ್ತಿಲ್ಲ’ ಎಂದು ಆಮ್ ಆದ್ಮಿ ಪಾರ್ಟಿಯ ಅನಂತ್ ರಾಜ್ ಸೂರ್ಯ ದೂರಿದರು.

‘ನಗರದ 295 ಉದ್ಯಾನಗಳ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡಲಾಗಿದೆ. ಅವರು ನಿರಂತರವಾಗಿ ಸ್ವಚ್ಛಗೊಳಿಸುವುದು ಗಿಡಗಳಿಗೆ ನೀರುಣಿಸುವುದು ಕಳೆ, ಗಿಡಗಳನ್ನು ಕತ್ತರಿಸಿ ಸ್ವಚ್ಛಗೊಳಿಸುತ್ತಾರೆ. ಆದರೆ, ಅಭಿವೃದ್ಧಿಯಾಗದೇ ಇರುವ 234 ಉದ್ಯಾನಗಳಲ್ಲಿ ಮೂರು ತಿಂಗಳಿಗೊಮ್ಮೆ ಗಿಡಗಂಟಿಗಳನ್ನು ತೆರವುಗೊಳಿಸಲಾಗುತ್ತದೆ’ ಎಂದು ಮಹಾನಗರ ಪಾಲಿಕೆ ತೋಟಗಾರಿಕೆ ವಿಭಾಗದ ಎಇಇ ಪಿ.ಕೆ.ಮೋಹನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಉದ್ಯಾನಗಳ ನಿರ್ವಹಣೆಗೆ ವರ್ಷಕ್ಕೆ ₹9.40 ಕೋಟಿ ವರ್ಷಕ್ಕೆ ವೆಚ್ಚವಾಗಲಿದ್ದು, ಎಸ್‌ಎಫ್‌ಸಿ ಶೇ 5ರಷ್ಟು ಅನುದಾನದಲ್ಲಿ ಮಕ್ಕಳಿಗೆ ಆಟಿಕೆ ಯಂತ್ರಗಳು, ವ್ಯಾಯಾಮ ಉಪಕರಣಗಳ ಖರೀದಿ ಗಿಡಗಳನ್ನು ನೆಡುವ ಕಾರ್ಯ ನಡೆಯುತ್ತದೆ’ ಎಂದರು.

ಪೂರಕ ಮಾಹಿತಿ: ಎಚ್‌.ಎಸ್.ಸಚ್ಚಿತ್, ಪಂಡಿತ್ ನಾಟೀಕಾರ್, ಎಂ.ಮಹದೇವ್, ಸತೀಶ್ ಆರಾಧ್ಯ.

ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಕಸ ಕಲ್ಲುಗಳ ರಾಶಿ ಹಾಕಿರುವುದು –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಕುವೆಂಪುನಗರದ 4ನೇ ಮುಖ್ಯ ರಸ್ತೆಯಲ್ಲಿ (ವಾರ್ಡ್ 47) ಉದ್ಯಾನದಲ್ಲಿ ಅಭಿವೃದ್ಧಿಪಡಿಸಲು ಸಲಕರಣೆಗಳನ್ನು ತಂದಿಡಲಾಗಿದೆ –ಪ್ರಜಾವಾಣಿ ಚಿತ್ರ
ನಗರ ವ್ಯಾಪ್ತಿಯಲ್ಲಿ ಅಧಿಕೃತವಾಗಿ 35 ಉದ್ಯಾನಗಳಿದ್ದು ಖಾಸಗಿ ಬಡಾವಣೆಗಳ ಉದ್ಯಾನ ನಗರಸಭೆಗೆ ಹಸ್ತಾಂತರವಾಗಿಲ್ಲ. ನಿರ್ವಹಣೆಗೆ ಆಗಸ್ಟ್‌ನಲ್ಲಿ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಅನುದಾನ ಕಾಯ್ದಿರಿಸಲಾಗುವುದು.
ಮಾನಸಾ ಆಯುಕ್ತೆ ಹುಣಸೂರು ನಗರಸಭೆ
ಕೆ.ಆರ್‌.ನಗರ ಪಾರ್ಕ್ ಅಭಿವೃದ್ಧಿಗೆ ಪುರಸಭೆಯಲ್ಲಿ ಅನುದಾನ ಇದೆ. ಒಂದು ಹಂತದ ಕಾಮಗಾರಿ ಮಾಡಲಾಗಿದೆ. ಎರಡನೇ ಹಂತದಲ್ಲಿ ಮತ್ತಷ್ಟು ಉದ್ಯಾನ ಅಭಿವೃದ್ಧಿಗೊಳಿಸಲಾಗುತ್ತದೆ. ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ.
ಜಯಣ್ಣ ಪುರಸಭೆ ಮುಖ್ಯಾಧಿಕಾರಿ ಕೆ.ಆರ್.ನಗರ
ಅಭಿವೃದ್ಧಿ ಕಾಣದ ಉದ್ಯಾನ
ಕೆ.ಆರ್.ನಗರದ ವಿದ್ಯಾನಗರ ಬಡಾವಣೆಯಲ್ಲಿನ ಉದ್ಯಾನದ ಸುತ್ತ ಈಚೆಗಷ್ಟೇ ಗ್ರಿಲ್ ಉದ್ಯಾನದ ಒಳಗೆ ಕುಳಿತುಕೊಳ್ಳಲು ಬೆಂಚ್ ಹಾಕಲಾಗಿದೆ. ಆದರೆ ಒಳಗೆ ಮಣ್ಣು ಹಾಕಿ ಅಭಿವೃದ್ಧಿಗೊಳಿಸಿಲ್ಲ. ಒಂದು ಕಡೆ ಎತ್ತರ ಮತ್ತೊಂದು ಕಡೆ ಇಳಿಜಾರು ಇದೆ. ಅಲ್ಲದೇ ಮಳೆಗಾಲ ಪ್ರಾರಂಭವಾಗಿದ್ದರಿಂದ ಹುಲ್ಲು ಕಸಕಡ್ಡಿ ಬೆಳೆದು ನಿಂತಿದೆ. ಇದರಿಂದ ಬಡಾವಣೆ ನಿವಾಸಿಗಳಿಗೆ ತೊಂದರೆಯಾಗಿದೆ. ಕೂಡಲೇ ಅಭಿವೃದ್ಧಿ ಪಡಿಸಬೇಕು. ಪಿ.ಮಹಾದೇವ ಕೆ.ಆರ್.ನಗರ ಬೆಳೆದ ಪೊದೆ ಹುಣಸೂರು ಹೌಸಿಂಗ್ ಬೋರ್ಡ್ ಕಾಲೊನಿ ಉದ್ಯಾನವನ್ನು ರೋಟರಿ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಇತ್ತೀಚೆಗೆ ಸಂಸ್ಥೆಯಿಂದ ನಗರಸಭೆ ಹಿಂಪಡೆದಿದ್ದು ಉದ್ಯಾನದೊಳಗಿನ ಸೌಂದರ್ಯಕ್ಕೆ ಹಾಕಿದ್ದ ಗಿಡಗಳು ಪೊದೆಯಾಗಿವೆ. ಉದ್ಯಾನದಲ್ಲಿನ ಸಸಿಗಳಿಗೆ ಆರಂಭದಲ್ಲಿ ಮಂಜುನಾಥ ಆಟೊರಿಕ್ಷಾ ನಿಲ್ದಾಣದ ಚಾಲಕರು ನೀರು ಹಾಕಿ ಬೆಳೆಸಿ ಪೋಷಿಸಿದ್ದೇವೆ. ಶ್ರೀಕುಮಾರ್ ಆಟೊ ಚಾಲಕ ಹುಣಸೂರು ನಿರ್ವಹಣೆಗೆ ಚಿಂತನೆ ತಿ.ನರಸೀಪುರ ಪಟ್ಟಣದ ನದಿ ದಂಡೆಯಲ್ಲಿರುವ ದುಃಸ್ಥಿತಿಯನ್ನು ಕಂಡು‌ ನಮ್ಮ‌ ಬೆಳಕು‌ ಸೇವಾ ಟ್ರಸ್ಟ್ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಿರ್ವಹಣೆಗೆ ಅವಕಾಶ ನೀಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ‌ ಮಾಡಿದ್ದೆವು. ಕಳೆದ ಡಿಸೆಂಬರ್‌ನಲ್ಲಿ ತಾಲ್ಲೂಕು ಆಡಳಿತ ನಮಗೆ ಅನುಮತಿ‌ ನೀಡಿದೆ. ಈಗ ಒಂದಷ್ಟು ನಿರ್ವಹಣೆ ಮಾಡುತ್ತಿದ್ದೇವೆ. ಮೊದಲ ಹಂತದಲ್ಲಿ ಉದ್ಯಾನ ನಿರ್ವಹಣೆ ಆಗುತ್ತದೆ. ಉಳಿದಂತೆ ಕೆಳ ಭಾಗದಲ್ಲಿರುವ ಉದ್ಯಾನ ನಿರ್ವಹಣೆಗೆ ಚಿಂತನೆ ಮಾಡಿದ್ದೇವೆ. ಅರವಿಂದ್ ಬೆಳಕು ಸೇವಾ ಸಂಸ್ಥೆ ತಿ.ನರಸೀಪುರ ಕೊಳಚೆ ಪ್ರದೇಶಗಳಾಗಿವೆ ಎಚ್‌.ಡಿ.ಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಉದ್ಯಾನಗಳು ನಿರ್ವಹಣೆ ಇಲ್ಲದೆ ಕೊಳಚೆ ಪ್ರದೇಶಗಳಾಗಿವೆ. ಇವುಗಳಿಂದಾಗಿ ಸೊಳ್ಳೆ ಹಾಗೂ ಹಾವು ಚೇಳುಗಳು ಮನೆಗಳಿಗೆ ಬರುತ್ತಿವೆ. ರವಿಸುಬ್ರಹ್ಮಣ್ಯ ಎಚ್.ಡಿ.ಕೋಟೆ
ಉದ್ಯಾನದ ನಿರ್ವಹಣೆಗೆ ಅನುದಾನವಿಲ್ಲ!
ಹುಣಸೂರು: ನಗರ ತನ್ನ ವ್ಯಾಪ್ತಿ ಹಿಗ್ಗಿಸಿಕೊಳ್ಳುತ್ತಿದ್ದು ಜನಸಂಖ್ಯೆಗೆ ಅನುಗುಣವಾಗಿ ಉದ್ಯಾನಗಳ ನಿರ್ವಹಣೆಗೆ ಕೊರತೆ ಎದುರಾಗಿದೆ. ನಗರ ವ್ಯಾಪ್ತಿಯಲ್ಲಿ 35 ಉದ್ಯಾನಗಳಿದ್ದು ಮಕ್ಕಳ ಆಟಿಕೆಗಳ ಅಳವಡಿಕೆ ನಡಿಗೆ ಪಥ ನಿರ್ಮಿಸಿ ಅಲ್ಲಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ತೆರಿಗೆ ಬಳಸಿ ಉದ್ಯಾನ ನಿರ್ಮಿಸಿರುವ ನಗರಸಭೆ ನಿರ್ವಹಣೆಗೆ ಅನುದಾನ ಕಾದಿಡುವಲ್ಲಿ ಹಲವು ಸಮಸ್ಯೆ ಎದುರಿಸುತ್ತಿದೆ. ನಗರದ ಮಧ್ಯ ಭಾಗದ ಮುನೇಶ್ವರ ಕಾವಲ್ ಮೈದಾನ 4 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದು ಮೈದಾನದ ಸುತ್ತಲು ನಡಿಗೆ ನಿರ್ಮಿಸಿ ಸುತ್ತಲು ಬೆಂಗಳೂರಿನ ಲಾಲ್ ಬಾಗ್‌ನಿಂದ ವಿವಿಧ ಪ್ರಭೇದಗಳ ಸಸಿಗಳು ನೆಟ್ಟು ಬೆಳೆಸಿ ಅದರ ನಡುವೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ರಸ್ತೆಬದಿ ವ್ಯಾಪಾರಿಗಳು ದಾಂಗುಡಿ ಇಟ್ಟಿರುವುದರಿಂದ ವಾಯುವಿಹಾರಿಗಳಿಗೆ ತೊಂದರೆ ಉಂಟಾಗಿದೆ. ‘ನಗರಸಭೆ ಬಡಾವಣೆಗಳಲ್ಲಿ ನಿರ್ಮಿಸಿರುವ ಉದ್ಯಾನಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕೆಲಸ ಮಾಡಬೇಕು. ಪೊದೆ ಬೆಳೆದಿದ್ದು ಸೊಳ್ಳೆ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರು ತಿಂಡಿ ಪೊಟ್ಟಣ ಅಲ್ಲಲ್ಲಿ ಎಸೆದು ದುರ್ವಾಸನೆ ಬೀರುತ್ತಿದೆ’ ಎನ್ನುವರು ಹೌಸಿಂಗ್ ಬೋರ್ಡ್ ಉದ್ಯಾನಕ್ಕೆ ಬರುವ ನಿವಾಸಿ ದಿನೇಶ್.
ಖಾಸಗಿ ಸಂಸ್ಥೆಯಿಂದ ಪಾರ್ಕ್ ನಿರ್ವಹಣೆ
ತಿ.ನರಸೀಪುರದ ತ್ರಿವೇಣಿ ಸಂಗಮದ ಕಪಿಲಾ ದಂಡೆಯಲ್ಲಿರುವ ಉದ್ಯಾನ ಕಳೆದ ಕೆಲ ವರ್ಷಗಳಿಂದ ನಿರ್ವಹಣೆ ಇಲ್ಲದೇ ಹಾಳಾಗಿತ್ತು. ಬೆಳಕು ಸೇವಾ ಫೌಂಡೇಷನ್‌ ಸರ್ಕಾರೇತರ ಸಂಸ್ಥೆ ಇದರ ನಿರ್ವಹಣೆಯನ್ನು ಉಚಿತವಾಗಿ ಮಾಡಿಕೊಡಲು ತಾಲ್ಲೂಕು ಆಡಳಿತದಿಂದ ಅನುಮತಿ‌ ಪಡೆದು ಮೊದಲ‌ ಹಂತದ ಉದ್ಯಾನವನ್ನು ನಿರ್ವಹಣೆ ಮಾಡುತ್ತಿದೆ. ಈ ಉದ್ಯಾನದ ಕೆಳಗಿನ‌ ಎರಡು ನಡಿಗೆ ಪಥಗಳನ್ನು ಸೂಕ್ತ ನಿರ್ವಹಣೆ ಮಾಡಬೇಕು. ಬೆಂಚು ವಿದ್ಯುತ್‌ ದೀಪಗಳನ್ನು ಅಳವಡಿಸಬೇಕು.
12ರಲ್ಲಿ ನಾಲ್ಕು ಮಾತ್ರ ನಿರ್ವಹಣೆ
ಎಚ್.ಡಿ.ಕೋಟೆ ಪಟ್ಟಣ ವ್ಯಾಪ್ತಿಯಲ್ಲಿ 12 ಉದ್ಯಾನಗಳಿದ್ದು ಅವುಗಳಲ್ಲಿ ನಾಲ್ಕನ್ನು ಮಾತ್ರ ನಿರ್ವಹಣೆ ಮಾಡಲಾಗುತ್ತಿದೆ. ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿರುವ ಪ್ರಮುಖ ಉದ್ಯಾನಗಳ ನಿರ್ವಹಣೆ ಚೆನ್ನಾಗಿದ್ದು ಇತರೆ ಉದ್ಯಾನಗಳ ನಿರ್ವಹಣೆ ಸರಿ ಇಲ್ಲ. ಗಿಡಗಳು ಬೆಳೆದಿದ್ದು ಮರದ ಕೊಂಬೆಗಳು ಬಿದ್ದಿವೆ. ಜನರು ಇಲ್ಲಿಗೆ ತಂದು ಕಸ ಸುರಿಯುತ್ತಿದ್ದು ಸ್ವಚ್ಛಗೊಳಿಸುವ ಯಾವುದೇ ಪ್ರಯತ್ನ ಮಾಡಿಲ್ಲ. ಉದ್ಯಾನದಲ್ಲಿ ಗಿಡಗಂಟಿಗಳು ಬೆಳೆದು ವಿಷಜಂತುಗಳು ಸೇರಿಕೊಂಡಿದ್ದು ಅಕ್ಕಪಕ್ಕದ ಮನೆಗಳಿಗೆ ನುಗ್ಗಿವೆ. ಸಾರ್ವಜನಿಕರು ಸಂಚರಿಸಲು ತೀವ್ರ ಸಮಸ್ಯೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.