ADVERTISEMENT

ದಸರಾ ಮಹೋತ್ಸವ ಆಹಾರಮೇಳ: 1 ನಿಮಿಷದಲ್ಲಿ 6 ಇಡ್ಲಿ ತಿಂದ ಅಜ್ಜಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 10:22 IST
Last Updated 1 ಅಕ್ಟೋಬರ್ 2019, 10:22 IST
ಅಕ್ಕಿರೊಟ್ಟಿ– ಎಣಗಾಯಿ ಪಲ್ಯ ತಯಾರಿಸುವ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಅನಿತಾ–ಸ್ವಾತಿ, ಐಶ್ವರ್ಯಾ–ಮಧು ಉಮದಿ ಹಾಗೂ ಸುಚಿತ್ರಾ– ಪ್ರಮೀಳಾ (ಎಡದಿಂದ ಬಲಕ್ಕೆ) ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು
ಅಕ್ಕಿರೊಟ್ಟಿ– ಎಣಗಾಯಿ ಪಲ್ಯ ತಯಾರಿಸುವ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಅನಿತಾ–ಸ್ವಾತಿ, ಐಶ್ವರ್ಯಾ–ಮಧು ಉಮದಿ ಹಾಗೂ ಸುಚಿತ್ರಾ– ಪ್ರಮೀಳಾ (ಎಡದಿಂದ ಬಲಕ್ಕೆ) ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು   

ಮೈಸೂರು: ಒಂದು ನಿಮಿಷದಲ್ಲಿ ಆರು ಇಡ್ಲಿಗಳನ್ನು ತಿಂದ 60 ವರ್ಷ ವಯಸ್ಸಿನ ಸರೋಜಾ ಗಣೇಶ್‌ ಅವರು ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು.

ನಗರದ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದಲ್ಲಿ ಆಹಾರಮೇಳದ ಅಂಗವಾಗಿ ಸೋಮವಾರ ಮಹಿಳೆಯರಿಗೆ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 75 ಗ್ರಾಂದಿಂದ 100 ಗ್ರಾಂ ವರೆಗೆ ತೂಕವಿದ್ದ 6 ಇಡ್ಲಿಗಳನ್ನು ತಿಂದು ಮೊದಲ ಬಹುಮನ ಪಡೆದು ಬೀಗಿದರು ಸರೋಜಾ.

ಅವರು 10 ವರ್ಷಗಳ ಹಿಂದೆ ದಸರಾ ಮಹೋತ್ಸವ ಆಹಾರಮೇಳದಲ್ಲಿ ಏಲಕ್ಕಿ ಬಾಳೆಹಣ್ಣ ತಿನ್ನುವ ಸ್ಪರ್ಧೆಯಲ್ಲಿ 18 ತಿಂದು, ಮೊದಲ ಬಹುಮಾನವಾಗಿ ₹ 3 ಸಾವಿರ ನಗದು ಪಡೆದಿದ್ದರು.

ADVERTISEMENT

‘ಆರು ಇಡ್ಲಿ ತಿನ್ನಲು ಕಾರಣ ಉಪವಾಸ ಇರಲಿಲ್ಲ. ಬೆಳಿಗ್ಗೆ ಸ್ವಲ್ಪ ಚಿತ್ರಾನ್ನ ತಿಂದಿದ್ದೆ. ಜತೆಗೆ, ದೇವಸ್ಥಾನಕ್ಕೆ ಹೋಗಿದ್ದಾಗ ಕೊಟ್ಟ ಪ್ರಸಾದವನ್ನು ತಿಂದಿದ್ದೆ. ಯೋಗ, ಪ್ರಾಣಾಯಾಮ ಮಾಡುವೆ. ಇದು ತಿನ್ನಲು ಸಹಕಾರಿ ಆಗಿರಬಹುದು’ ಎಂದು ಸರೋಜಾ ಪ್ರತಿಕ್ರಿಯಿಸಿದರು.

4 ಇಡ್ಲಿ ತಿಂದು ದ್ವಿತೀಯ ಬಹುಮಾನ ಪಡೆದ ಶಕುಂತಲಾ ಪ್ರಸಾದ್‌ ಅವರು ಗೃಹಿಣಿ. ‘ಬೆಳಿಗ್ಗೆ ರಾಗಿ ಗಂಜಿ ಕುಡಿದಿದ್ದೆ ಅಷ್ಟೆ. ಹಸಿವಿದ್ದರೂ 1 ನಿಮಿಷದಲ್ಲಿ 6 ಇಡ್ಲಿ ತಿನ್ನಲಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಮೂರು ಮುಕ್ಕಾಲು ಇಡ್ಲಿ ತಿಂದ ಎನ್‌.ಕೆ.ಸುಮಾ ತೃತೀಯ ಬಹುಮನ ಪಡೆದರು.

ಹೆಸರು ನೋಂದಾಯಿಸಿದ 25 ಮಹಿಳೆಯರಲ್ಲಿ ಡ್ರಾ ಮೂಲಕ 10 ಮಹಿಳೆಯರನ್ನು ಆಯ್ಕೆಗೊಳಿಸಲಾಯಿತು. ಇದರಲ್ಲಿ 18 ವರ್ಷದಿಂದ 75 ವರ್ಷದ ಪ್ರಮೀಳಾ ಭಾಗವಹಿಸಿದ್ದರು.

ಅತ್ತೆ–ಸೊಸೆಗೆ ಅಕ್ಕಿರೊಟ್ಟಿ– ಎಣಗಾಯಿ ತಯಾರಿಸುವ ಸ್ಪರ್ಧೆ: ಸ್ಕೌಟ್ಸ್‌ ಅಂಡ್‌ ಗೈಡ್ಸ್ ಮೈದಾನದಲ್ಲಿ ಆಹಾರಮೇಳದ ಅಂಗವಾಗಿ ಸೋಮವಾರ ಮಧ್ಯಾಹ್ನ ಅತ್ತೆ– ಸೊಸೆಯಂದಿರಿಗೆ ಅಕ್ಕಿರೊಟ್ಟಿ ಹಾಗೂ ಎಣಗಾಯಿ ಪಲ್ಯ ತಯಾರಿಸುವ ಸ್ಪರ್ಧೆಯಲ್ಲಿ ಆರು ತಂಡಗಳು ಭಾಗವಹಿಸಿದ್ದವು.

ಮಸಾಲೆ ಖಾರ, ಬೆಳ್ಳುಳ್ಳಿ, ದನಿಯಾ, ಶುಂಠಿ, ಕರಿಬೇವು, ಕೊತ್ತಂಬರಿ ಹೀಗೆ ಸುಮಾರು 20 ಪದಾರ್ಥಗಳನ್ನು ಬಳಸಿ ಎಣಗಾಯಿ ಪಲ್ಯ ತಯಾರಿಸಿದರು.

ವಿದ್ಯಾರಣ್ಯಪುರಂನ ಪ್ರಮೀಳಾ – ಸುಚಿತ್ರಾ ಅವರು ಮೊದಲ ಬಹುಮಾನವೆಂದು ₹ 1,500, ಮಧು ಉಮದಿ– ಐಶ್ವರ್ಯಾ ಅವರು ದ್ವಿತೀಯ ಬಹುಮಾನವೆಂದು ₹ 1,000 ಹಾಗೂ ತೃತೀಯ ಬಹುಮಾನವೆಂದು ₹ 500 ಅನಿತಾ – ಸ್ವಾತಿ ಪಡೆದರು.

ತೀರ್ಪುಗಾರರಾದ ಜಿ.ಹರಿಣಿ ಹಾಗೂ ಡಾ.ದೇವಕಿ ಮಾತನಾಡಿ, ‘ನೋಟ, ಬಣ್ಣ, ವಾಸನೆ, ರುಚಿ ಹಾಗೂ ಶುಚಿಗೆ ಆದ್ಯತೆ ನೀಡಿ ಬಹುಮನ ನೀಡಲಾಯಿತು’ ಎಂದರು. ಇನ್ನೊಬ್ಬ ತೀರ್ಪುಗಾರರಾದ ಆಹಾರ ಸುರಕ್ಷತಾಧಿಕಾರಿ ದಾಕ್ಷಾಯಿಣಿ ಬಡಿಗೇರ ಮಾತನಾಡಿ, ‘ಸುರಕ್ಷತೆ, ಗುಣಮಟ್ಟ ಅಳವಡಿಸಿಕೊಂಡು ಪ್ರಸ್ತುತಪಡಿಸಿದ್ದನ್ನು ಗಮನಿಸಿ ಬಹುಮಾನ ಕೊಡಲಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.