ಪಿರಿಯಾಪಟ್ಟಣ: ಪಟ್ಟಣದ ಪ್ರಮುಖ ಕೆರೆಗಳು ಘನತ್ಯಾಜ್ಯದಿಂದ ಭರ್ತಿಯಾಗುತ್ತಿದ್ದು, ಜಲಮಾಲಿನ್ಯದ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿದೆ.
ಐತಿಹಾಸಿಕ ಹಿನ್ನೆಲೆಯಿರುವ, ನೂರಾರು ವರ್ಷಗಳ ಹಿಂದೆ ಪಿರಿಯಾಪಟ್ಟಣವನ್ನು ಆಳಿದ ರಾಜರ ಕಾಲದಲ್ಲಿ ಜನರ ಕುಡಿಯುವ ನೀರಿಗಾಗಿ ನಿರ್ಮಾಣಗೊಂಡಿದ್ದ ಅರಸನಕೆರೆ, ಚಿಕ್ಕಕೆರೆ ಇಂದು ತ್ಯಾಜ್ಯದ ಗುಂಡಿಗಳಾಗುವತ್ತ ಸಾಗಿವೆ.
ಕುರಿ, ಕೋಳಿ ಮಾಂಸದ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ, ಮದ್ಯಪಾನ ಮಾಡಿ ಎಸೆದಿರುವ ಟೆಟ್ರಾ ಪ್ಯಾಕ್ ಗಳು, ಬಿಯರ್ ಬಾಟಲಿಗಳು, ಒಳ ಚರಂಡಿ ನೀರು ಸಹ ಹರಿದು ಬರುತ್ತಿದ್ದು ಇದರಿಂದ ಅಪಾಯಕಾರಿ ವಸ್ತುಗಳು ಸಹ ನೀರಿನೊಳಗೆ ಸೇರಿ ಜಲಚರಗಳಿಗೆ ಕಂಟಕ ಎದುರಾಗಿದೆ.
‘ಕೆರೆಯ ತೂಬಿನ ಬಳಿ ಹೆಚ್ಚು ತ್ಯಾಜ್ಯ ಸಂಗ್ರಹವಾಗಿದ್ದು ಇದರಿಂದ ಜಲಮೂಲವೇ ಕೊಳಚೆಯಾಗಿ ಪರಿವರ್ತನೆಯಾಗಿದೆ. ಜನವಸತಿಗೆ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಆನಂದ್ ಆತಂಕ ವ್ಯಕ್ತಪಡಿಸಿದರು.
‘ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಕೆರೆಗೆ ಸೇರುತ್ತಿರುವ ಚರಂಡಿ ನೀರನ್ನು ಆದಷ್ಟು ಶೀಘ್ರದಲ್ಲಿ ಒಳಚರಂಡಿ ಪೈಪ್ ಲೈನ್‌ಗೆ ಸೇರ್ಪಡೆ ಮಾಡಿದಲ್ಲಿ ಮಾತ್ರ ಅರಸನಕೆರೆ ಅಸ್ತಿತ್ವ ಉಳಿಸಿಕೊಳ್ಳಲಿದೆ’ ಎನ್ನುತ್ತಾರೆ ಸಮಾಜ ಸೇವಕ ಪಿ.ಟಿ.ಲಕ್ಷ್ಮಿ ನಾರಾಯಣ್.
‘ರಾಜರ ಕಾಲದ ಮತ್ತೊಂದು ಐತಿಹಾಸಿಕ ಕೆರೆಯಾದ ಚಿಕ್ಕಕೆರೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆರೆಯ ದಂಡೆಯ ಮೇಲೆ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಘನತ್ಯಾಜ್ಯ ಬಿಸಾಡಲಾಗಿದೆ, ಇದನ್ನು ಕೂಡಲೇ ತೆರವುಗೊಳಿಸದಿದ್ದಲ್ಲಿ ಮುಂದಿನ ಮಳೆಗಾಲದಲ್ಲಿ ಕೆರೆ ತುಂಬಿ ಹರಿದಾಗ ನೀರಿಗೆ ಸೇರುವ ಅಪಾಯ ಎದುರಾಗಿದೆ. ಜಲಚರಗಳಿಗೂ ಮಾರಕವಾಗಲಿದೆ’ ಎಂಬುದು ವನ್ಯಜೀವಿ ಛಾಯಾಗ್ರಾಹಕ ಪ್ರಶಾಂತ್ ಬಾಬು ಅವರ ಆತಂಕ.
‘ಪಟ್ಟಣದ ಹಲವು ಕಡೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಪ್ರವೃತ್ತಿ ಜನರಲ್ಲಿ ಕಾಣುತ್ತಿದ್ದು, ಅಂತಹ ಕಡೆ ಪುರಸಭೆ ಎಚ್ಚರಿಕೆಯ ಫಲಕ ಅಳವಡಿಸಿ, ಭಾರಿ ದಂಡ ವಿಧಿಸುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪರಿಸರವಾದಿ ಪಿ.ಎಸ್.ಹರ್ಷ ಒತ್ತಾಯಿಸಿದ್ದಾರೆ.
‘ಪಟ್ಟಣದ ಕೆರೆಗಳಿಗೆ ಅಪಾಯಕಾರಿ ಘನತಾಜ್ಯ ಎಸೆಯುವ ಮೂಲಕ ಜಲ ಮಾಲಿನ್ಯ ಮತ್ತು ಭೂ ಮಾಲಿನ್ಯ ಮಾಡುವವರ ವಿರುದ್ಧ ಪುರಸಭೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ಆಗ್ರಹ.
‘ಅರಸನಕೆರೆಗೆ ಚರಂಡಿ ಮೂಲಕ ಘನತ್ಯಾಜ್ಯ ಸೇರದಂತೆ ಅಳವಡಿಸಲಾಗಿದ್ದ ಜಾಲರಿಗಳಲ್ಲಿ ಒಂದು ಜಾಲರಿ ಕಿತ್ತು ಹೋಗಿರುವುದರಿಂದ ಸ್ವಲ್ಪಮಟ್ಟಿನ ಪ್ಲಾಸ್ಟಿಕ್ ಘನ ತ್ಯಾಜ್ಯ ಚರಂಡಿಗೆ ಸೇರುತ್ತಿದೆ. ಪುರಸಭೆ ಆಡಳಿತಾಧಿಕಾರಿಗಳ ಗಮನಕ್ಕೆ ತಂದು ಮತ್ತೆ ಜಾಲರಿ ಅಳವಡಿಸಲಾಗುವುದು’ ಎಂದು ಪಿರಿಯಾಪಟ್ಟಣ ಪುರಸಭೆ ಕಂದಾಯ ಅಧಿಕಾರಿ ಆದರ್ಶ್ ತಿಳಿಸಿದರು. ‘ಚರಂಡಿಯ ನೀರು ಒಳಚರಂಡಿ ಯೋಜನೆಯಲ್ಲಿ ಸೇರ್ಪಡೆಗೊಂಡಲ್ಲಿ ಕೊಳಚೆ ನೀರು ಕೆರೆಗೆ ಹರಿಯುವುದು ತಪ್ಪಲಿದೆ. ತೂಬಿನ ಬಳಿ ಸೇರಿಕೊಂಡಿರುವ ಘನತ್ಯಾಜ್ಯವನ್ನು ಶೀಘ್ರದಲ್ಲಿ ಜೆಸಿಬಿ ಮೂಲಕ ತೆಗೆಸಲಾಗುವುದು. ಚಿಕ್ಕಕೆರೆ ಬಳಿ ಎಸೆದಿರುವ ಘನತ್ಯಾಜ್ಯವನ್ನೂ ತೆರವುಗೊಳಿಸುತ್ತೇವೆ. ತ್ಯಾಜ್ಯ ಎಸೆಯದಂತೆ ಫಲಕ ಅಳವಡಿಸಲಾಗುವುದು’ ಎಂದರು.
ಕೆರೆಗಳ ದಂಡೆ ಮೇಲಿರುವ ತ್ಯಾಜ್ಯವನ್ನು ಮಳೆಗಾಲಕ್ಕೂ ಮುಂಚಿತವಾಗಿಯೇ ತೆರವುಗೊಳಿಸಿ ಕೆರೆ ಪರಿಸರ ರಕ್ಷಿಸಿ.-ಪ್ರಶಾಂತ್ ಬಾಬು, ವನ್ಯಜೀವಿ ಛಾಯಾಗ್ರಾಹಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.