ಹುಣಸೂರು: ನಗರದ ಬ್ರಾಹ್ಮಣರ ಬೀದಿಯ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ 188ನೇ ರಥೊತ್ಸವವು ಗುರುವಾರ ಬೆಳಿಗ್ಗೆ ಅದ್ದೂರಿಯಿಂದ ಜರುಗಿತು.
ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ದೇವಸ್ಥಾನದ ಸುತ್ತಲೂ ಮೂರು ಪ್ರದಕ್ಷಿಣೆ ಹಾಕಿದ ಬಳಿಕ ರಥದ ಬೀದಿಯಲ್ಲಿ ಮೆರವಣಿಗೆ ತೆರಳಿ ನಂತರದಲ್ಲಿ ಉದ್ಘೋಷದೊಂದಿಗೆ ರಥಾರೋಹಣ ನೆರವೇರಿಸಿದರು.
ರಥೋತ್ಸವಕ್ಕೆ ಹುಣಸೂರು ನಗರದ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ಕಾಶ್ಯಪ್ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಪುರೋಹಿತ ನಾರಾಯಣಮೂರ್ತಿ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು. ಭಕ್ತರು ರಥವನ್ನು ಭಕ್ತಿಯಿಂದ ಎಳೆದು ದೇವರ ಕೃಪೆಗೆ ಪಾತ್ರರಾದರು. ರಥದೊಂದಿಗೆ ಜೋಡೆತ್ತು ನಡಿಗೆ, ನಾದಸ್ವರ ಮತ್ತು ಡೋಲುಗಳ ವಾದ್ಯಗೋಷ್ಠಿಯೂ ಸೇರಿ ಸಂಭ್ರಮ ಕಳೆ ಕಟ್ಟಿತ್ತು.
ದಾಸೋಹ: ರಥೋತ್ಸವದ ಅಂಗವಾಗಿ ಭಕ್ತರಿಗೆ ದೇವಸ್ಥಾನದ ಆವರಣದಲ್ಲಿ ದಾಸೋಹ ಏರ್ಪಡಿಸಿದ್ದರು. ಸಂಜೆ ದೇವಸ್ಥಾನದ ಆವರಣದಲ್ಲಿ ಬೆಂಗಳೂರಿನ ಶೃತಿ ಭಟ್ ಮತ್ತು ತಂಡದಿಂದ ಹರಿದಾಸ ನಾಮಸಂಕೀರ್ತನೆ ಕಾರ್ಯಕ್ರಮ ನಡೆಯಿತು.
ಮೇ 24ರಂದು ಬೆಳಿಗ್ಗೆ ಮಹಾವಿಷ್ಣು ಯಾಗ, ಸಂಜೆ ಶೇಷ ವಾಹನೋತ್ಸವ, ರಾತ್ರಿ ಡೋಲೋತ್ಸವ ಹಾಗೂ ಗಜವಾಹನೋತ್ಸವ ಹಮ್ಮಿಕೊಳ್ಳಲಾಗಿದೆ. ಮೇ 25 ವಸಂತೋತ್ಸವ ಮತ್ತು ಅಶ್ವಾರೋಹಣೋತ್ಸವ, 26 ಸಹಸ್ರ ತುಳಸಿ ಅರ್ಚನೆ, ಹನುಮಂತೋತ್ಸವ, ಪೂರ್ಣಾಹುತಿ, ಧ್ವಜಾರೋಹಣೋತ್ಸವ, ಮೇ 27 ರಂದು ಮಹಾಭಿಷೇಕ ಮತ್ತು ಶಯನೋತ್ಸವದೊಂದಿಗೆ ಉತ್ಸವ ಪೂರ್ಣಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.