ADVERTISEMENT

ಮೌಲ್ಯ ಸಾರಿದ ಮೇರು ನಟ ರಾಜ್‌ಕುಮಾರ್‌: ಕವಯತ್ರಿ ಲತಾ ರಾಜಶೇಖರ್

​ಪ್ರಜಾವಾಣಿ ವಾರ್ತೆ
Published 12 ಮೇ 2024, 11:40 IST
Last Updated 12 ಮೇ 2024, 11:40 IST
<div class="paragraphs"><p>ಮೈಸೂರಿನಲ್ಲಿ ಇಂಚರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಭಾನುವಾರ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರನ್ನು ಅಭಿನಂದಿಸಲಾಯಿತು ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ‘ಡಾ.ರಾಜ್‌ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.</p></div>

ಮೈಸೂರಿನಲ್ಲಿ ಇಂಚರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಭಾನುವಾರ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರನ್ನು ಅಭಿನಂದಿಸಲಾಯಿತು ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ‘ಡಾ.ರಾಜ್‌ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

   

–ಪ್ರಜಾವಾಣಿ ಚಿತ್ರ

ಮೈಸೂರು: ‘ಮೇರು ನಟ ರಾಜ್‌ಕುಮಾರ್‌ ಅವರು ಚಲನಚಿತ್ರಗಳ ಮೂಲಕ ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ನೀಡಿ‌ ಹೋಗಿದ್ದಾರೆ’ ಎಂದು ಕವಯತ್ರಿ ಲತಾ ರಾಜಶೇಖರ್ ಸ್ಮರಿಸಿದರು.

ADVERTISEMENT

ಇಂಚರ ಸಾಂಸ್ಕೃತಿಕ ಪ್ರತಿಷ್ಠಾನ, ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದ ಸಹಯೋಗದಲ್ಲಿ ಇಲ್ಲಿನ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ‘ಡಾ.ರಾಜ್ ಪ್ರಶಸ್ತಿ ಪ್ರದಾನ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅವರು ಆಗರ್ಭ ಶ್ರೀಮಂತ ಮನೆತನದಿಂದ ಬಂದವರಲ್ಲ‌. ಸಾಧಾರಣ ಕುಟುಂಬದಿಂದ ಬಂದು ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಬಹಳ ವಿದ್ಯಾಭ್ಯಾಸ ಮಾಡದೇ ಇದ್ದರೂ ಕನ್ನಡವನ್ನು ಸ್ಪಷ್ಟವಾಗಿ ಬಳಸುತ್ತಿದ್ದರು; ಅಪಾರ ಜ್ಞಾನವನ್ನು ಹೊಂದಿದ್ದರು. ತಮ್ಮ ನಟನೆಯ ಮೂಲಕ ಈ ನಾಡು–ದೇಶಕ್ಕೆ ಅಚ್ಚಳಿಯದ ಕೊಡುಗೆಗಳನ್ನು ಅವರು ನೀಡಿದ್ದಾರೆ’ ಎಂದು ನೆನೆದರು.

‘ಯಾವುದೇ ಪಾತ್ರವಾದರೂ ಸರಿಯೇ ಜೀವ ತುಂಬಿ ನಟಿಸುತ್ತಿದ್ದರು. ಪರಕಾಯ ಪ್ರವೇಶ ಅವರಿಗೆ ಸಿದ್ಧಿಸಿತ್ತು. ಸದಭಿರುಚಿಯ ಚಲನಚಿತ್ರಗಳನ್ನು ನೀಡುವ ಜೊತೆಗೆ ನಾಡು–ನುಡಿ, ನೆಲ–ಜಲದ ಹಿತರಕ್ಷಣೆಗಾಗಿ ಶ್ರಮಿಸುತ್ತಿದ್ದರು. ಕನ್ನಡಪರ ಹೋರಾಟದಲ್ಲೂ ಮುಂದಿದ್ದರು’ ಎಂದು ತಿಳಿಸಿದರು.

‘ಅಭಿಮಾನಿಗಳನ್ನೇ ದೇವರು ಎಂದ ವಿನಯವಂತ. ಸ್ಟಾರ್‌ ನಟನಾದರೂ ಅಹಂಕಾರ ಇರಲಿಲ್ಲ. ಸರಳವಾಗಿ ಜೀವನ ನಡೆಸಿದರು. ಅವರಿಗೆ ಸಂದ ಪ್ರಶಸ್ತಿಗಳಿಗೆ ಅವರಿಂದಾಗಿ ಹೆಚ್ಚಿನ ಗೌರವ ಬಂದಿತು. ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುವುದು ಹೆಮ್ಮೆ ಹಾಗೂ ಅಭಿಮಾನದ ಸಂಗತಿಯೇ ಸರಿ. ಮಹಾನ್ ಸಾಧಕ ಹಾಗೂ ಅಭಿಜಾತ ಕಲಾವಿದರಾದ ಅವರಿಗೆ ಅವರೇ ಸಾಟಿ’ ಎಂದು ಹೇಳಿದರು.

ರಂಗಕರ್ಮಿ ರಾಜಶೇಖರ ಕದಂಬ ಮಾತನಾಡಿ, ‘ರಾಜ್‌ಕುಮಾರ್ ಎನ್ನುವುದು ಸಂಚಲನ ಮೂಡಿಸುವ ಹೆಸರು. ಅವರು ನಮ್ಮ ಕರ್ನಾಟಕದವರು ಹಾಗೂ ಅವಿಭಜಿತ ಮೈಸೂರು ಜಿಲ್ಲೆಯವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಅವರು ವಿಶ್ವ ಕಲಾವಿದ’ ಎಂದು ಬಣ್ಣಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರನ್ನು ಅಭಿನಂದಿಸಿದ ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ‘ಸಮಾಜದ ಒಳಿತಿಗೆ ಕೆಲಸ ಮಾಡುವವರನ್ನು ಗುರುತಿಸಿ ಸನ್ಮಾನಿಸುವುದು ಹೆಮ್ಮೆಯ ಕಾರ್ಯ. ಸಾಧಕರನ್ನು ಸನ್ಮಾನಿಸಿದರೆ ಮತ್ತಷ್ಟು ಸಾಧನೆಗೆ ಉತ್ತೇಜನ ನೀಡಿದಂತಾಗುತ್ತದೆ’ ಎಂದರು.

ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅವರು ರಾಜ್‌ಕುಮಾರ್ ಕುರಿತು ಉಪನ್ಯಾಸ ನೀಡಿದರು.

ವಿವಿಧ ಕ್ಷೇತ್ರದ ಸಾಧಕರಾದ ಎನ್. ಧನಂಜಯ (ಹವ್ಯಾಸಿ ರಂಗಭೂಮಿ), ಡಾ.ಪೂರ್ಣಿಮಾ ಮಧುಸೂದನ (ವೈದ್ಯಕೀಯ), ಕೆ. ರಮೇಶ್‌ (ಸಾಹಿತ್ಯ), ಆರ್.ಡಿ. ಕುಮಾರ್ (ಕಾನೂನು ಮತ್ತು ಸಂಘಟನೆ), ರಮೇಶ್ ಕುಮಾರ್‌ (ಗಾಯನ) ಮತ್ತು ಭಾಗ್ಯಲಕ್ಷ್ಮಿ (ಭರತನಾಟ್ಯ) ಅವರಿಗೆ ‘ಡಾ.ರಾಜ್‌ ಸಾಧನಾ ಪ್ರಶಸ್ತಿ’ಯನ್ನು ‍ಪ್ರದಾನ ಮಾಡಲಾಯಿತು.

ಸಮಾಜ ಸೇವಕ ರಘುರಾಂ ವಾಜಪೇಯಿ, ಲೇಖಕ ರಂಗನಾಥ್ ಮೈಸೂರು, ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.