ಮೈಸೂರು: ‘ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಹದಗೆಟ್ಟಿದೆ. ಪೋಲಿಸ್ ಇಲಾಖೆ ಸರ್ಕಾರದ ಕಪಿಮುಷ್ಟಿಯಲ್ಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಕಪಿಮುಷ್ಟಿಯಲ್ಲಷ್ಟೇ ಇದೆ. ಈ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಒತ್ತಾಯಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ನಾಗಮಂಗಲದಲ್ಲಿ ಗಣೇಶ ಮೂರ್ತಿಯನ್ನು ಪೊಲೀಸ್ ಇಲಾಖೆ ವಾಹನದಲ್ಲಿ ಸಾಗಿಸಿದ್ದು ಸರಿಯಲ್ಲ. ಇದರಲ್ಲಿ ಗೃಹ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ’ ಎಂದು ದೂರಿದರು.
‘ಕುಮಾರಸ್ವಾಮಿ ಯಾವುದೇ ದಾಖಲೆ ಇಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡುವುದಿಲ್ಲ. ಅವರು ರಾಜ್ಯಕ್ಕೆ ಬಂದ ನಂತರ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ಕೊಡಲಿದ್ದಾರೆ. ಕಾಂಗ್ರೆಸ್ ಸ್ನೇಹಿತರು ಸಿದ್ದರಾಮಯ್ಯ ಅವರನ್ನು ಯಾವಾಗಲೂ ಸಮರ್ಥಿಸಿಕೊಳ್ಳತ್ತಾರೆ. ಈ ಹಿಂದೆ ವಾಲ್ಮೀಕಿ ನಿಗಮದ ಪ್ರಕರಣದಲ್ಲೂ ಏನೂ ಆಗಿಲ್ಲ ಎನ್ನುತ್ತಿದ್ದರು. ಪರಿಶಿಷ್ಟರ ಹಣ ದುರ್ಬಳಕೆ ನಾಚಿಕೆಗೇಡಿನದ್ದು ಹಾಗೂ ರಾಜ್ಯಕ್ಕೆ ಕಳಂಕ ತರುವಂಥದ್ದು. ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಅವರೇ ಇದಕ್ಕೆ ನೇರ ಹೊಣೆಗಾರರು’ ಎಂದರು.
‘ಕಾಂಗ್ರೆಸ್‌ನವರು ಐದು ಗ್ಯಾರಂಟಿಗಳ ಗುಂಗಿನಲ್ಲಿದ್ದಾರೆ. ಗ್ಯಾರಂಟಿ ಕೊಟ್ಟಿರುವುದರಿಂದಾಗಿ ಏನೇ ಭ್ರಷ್ಟಾಚಾರ ಮಾಡಿದರೂ ಜನರು ಕೇಳುವುದಿಲ್ಲ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದ್ದಾರೆ. ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಕಲಿಸಲಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.