ADVERTISEMENT

ಸತ್ಯ ಮರೆಮಾಚಿದರೆ ಶಿಕ್ಷೆ ಸಾಧ್ಯತೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

ಇ.ಡಿ.ಗೆ ಸ್ನೇಹಮಯಿ ಕೃಷ್ಣ ಅವರ ವಿವರ ಕೊಡುತ್ತೇವೆ: ಎಂ.ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 5:02 IST
Last Updated 6 ಅಕ್ಟೋಬರ್ 2024, 5:02 IST
ಎಂ. ಲಕ್ಷ್ಮಣ
ಎಂ. ಲಕ್ಷ್ಮಣ   

ಮೈಸೂರು: ‘ಸಿದ್ದರಾಮಯ್ಯ ವಿರುದ್ಧ ಆಪಾದನೆ ಮಾಡಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದೆ. ಆಪಾದನೆಗೆ ಪೂರಕವಾದ ದಾಖಲೆ ಒದಗಿಸಬೇಕು. ಸತ್ಯ ಮರೆಮಾಚಿದರೆ ಅವರೇ ಶಿಕ್ಷೆಗೆ ಒಳಪಡುವ ಸಾಧ್ಯತೆ ಇದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೂರು ದಾಖಲು ಮಾಡುವವರ ಸಂಪೂರ್ಣ ವಿವರವನ್ನು ಸಮನ್ಸ್ ಕಾಪಿಯಲ್ಲಿ ತಿಳಿಸಬೇಕಿರುತ್ತದೆ. ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರು ಸೇರಿದಂತೆ ರಾಜ್ಯದಲ್ಲಿ ಸುಮಾರು 40 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅವರು ಅಷ್ಟು ದಾಖಲೆ ವಿವರ ನೀಡಲಿ, ನೀಡದಿರಲಿ ನಾವು ಇ.ಡಿ ಅಧಿಕಾರಿಗಳಿಗೆ ಆ ಮಾಹಿತಿಯನ್ನು ಕಳುಹಿಸುತ್ತೇವೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಈಗಾಗಲೇ ಮುಡಾದ 14 ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆ. ಇದೀಗ, ಮೊದಲೇ ಕೊಡಬೇಕಿತ್ತು ಅಂತ ಕೆಲವರು ಹೇಳುತ್ತಿದ್ದಾರೆ. ವಾಪಸ್ ಕೊಡದಿದ್ದರೆ ಏಕೆ ಕೊಟ್ಟಿಲ್ಲ ಅಂತಾರೆ? ಏನ್ ಮಾಡಿದರೂ ಮಾತನಾಡುತ್ತಾರೆ. ಇದು ದುರಂತದ ಸಂಗತಿ’ ಎಂದು ಕಿಡಿಕಾರಿದರು.

ADVERTISEMENT

‘ಎಫ್‌ಐಆರ್ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಎಲ್ಲೂ ತಿಳಿಸಿಲ್ಲ. ಸ್ನೇಹಮಯಿ ಕೃಷ್ಣ ಅವರು ಅಧಿಕಾರಿಗಳಿಗೆ ಪ್ರೋಸೀಡಿಂಗ್ಸ್ ನೀಡಿದ್ದಾರಷ್ಟೆ. 50:50 ಅನುಪಾತದಲ್ಲಿ ಮನಿಲಾಂಡ್ರಿಂಗ್ ವಿಚಾರವೇ ನಡೆದಿಲ್ಲ? ಹೀಗಿದ್ದಾಗ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ.ಯು ದೂರನ್ನು ಹೇಗೆ ದಾಖಲಿಸುತ್ತದೆ’ ಎಂದು ಪ್ರಶ್ನಿಸಿದರು.

ಬೊಬ್ಬೆ ಹೊಡೆಯುವುದು ನಿಲ್ಲಿಸಿ: ‘ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಬೊಬ್ಬೆ ಹೊಡೆಯುವುದನ್ನು ವಿರೋಧ ಪಕ್ಷದ ನಾಯಕರು ನಿಲ್ಲಿಸಬೇಕು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ 19 ಎಫ್‌ಐಆರ್ ದಾಖಲಾಗಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಆರ್.ಅಶೋಕ ಅವರು ಬಿಡಿಎ ಜಾಗ ಕಬಳಿಸಿ ಮತ್ತೆ ಸರ್ಕಾರಕ್ಕೆ ವಾಪಸ್ ಕೊಡುವ ಕೆಲಸ ಮಾಡಿದ್ದಾರೆ. ಇನ್ನೂ ಪ್ರಲ್ಹಾದ್ ಜೋಶಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆಲ್ಲ ರಾಜೀನಾಮೆ ಕೇಳಲು ಯಾವ ನೈತಿಕತೆ ಇದೆ’ ಎಂದು ಕೇಳಿದರು.

ಜೆಡಿಎಸ್‌ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ‘ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಇಷ್ಟೊಂದು ಎಫ್ಐಆರ್ ದಾಖಲಾಗಿದ್ದರೂ ಅದು ಹೇಗೆ ಕೇಂದ್ರ ಸಚಿವ ಸ್ಥಾನದಲ್ಲಿ ಮುಂದುವರಿಯುತ್ತಾರೆ? ನಿಮಗೆ ನೈತಿಕತೆ ಇದೆಯೇ? ನೀವೂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ ಕುಮಾರಸ್ವಾಮಿ ವಿರುದ್ಧ ನಾವೂ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.

‘ಸಿದ್ದರಾಮಯ್ಯ ಪರ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿದ್ದು ಸರಿಯಿದೆ. ಅವರು ಸತ್ಯ ಹೇಳಿದ್ದಾರೆ. ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಸುಳ್ಳು ಹೇಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯೋಜನೆ ತರುವುದನ್ನು ಬಿಟ್ಟು, ಸಿಎಂ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿರುವುದರಲ್ಲಿ ತಪ್ಪಿಲ್ಲ’ ಎಂದು ಸಮರ್ಥಿಸಿಕೊಂಡರು.

‘ಸಂಚಾರ ನಿರ್ವಹಣೆ: ಪೊಲೀಸರ ವಿಫಲ’ ‘ದಸರಾ ಮಹೋತ್ಸವದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಸಂಚಾರ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಎಂ.ಲಕ್ಷ್ಮಣ ಹೇಳಿದರು. ‘ನಗರದಲ್ಲಿ ಕೆಲ ಪ್ರಮುಖ ರಸ್ತೆಗಳನ್ನು ಏಕಮುಖ ಸಂಚಾರ ವ್ಯವಸ್ಥೆ ಮಾಡಿರುವುದರಿಂದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗಿದೆ. ದಸರಾ ಪ್ರಾರಂಭದಲ್ಲೇ ಪ್ರವಾಸಿಗರಿಗೆ ಮೈಸೂರು ಸಹವಾಸ ಸಾಕು ಎಂದು ಭಾವನೆ ಮೂಡಿದೆ. ಅಲ್ಲದೆ ಅರಸು ರಸ್ತೆ ಬಂದ್ ಮಾಡಿದ್ದಾರೆ. ಹಬ್ಬದ ವೇಳೆ ವ್ಯಾಪಾರಸ್ಥರು ವ್ಯಾಪಾರ ಮಾಡದೇ ಅಂಗಡಿ ಬಾಗಿಲು ಮುಚ್ಚಬೇಕಾ’ ಎಂದು ಪ್ರಶ್ನಿಸಿದರು. ‘ಹೊರಗಿನಿಂದ ಬಂದಿರುವ ಪೊಲೀಸರಿಂದ ಸಂಚಾರ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಪೊಲೀಸರಿಗೆ ಸಂಚಾರ ನಿರ್ವಹಣೆ ಬಗ್ಗೆ ಗೊತ್ತು. ಹೊರಗಿನವರಿಗೆ ಕಷ್ಟ ಸಾಧ್ಯ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುತ್ತೇವೆ. ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.