ADVERTISEMENT

ಹುಣಸೂರು | ತಂಬಾಕಿಗೆ ಎಲೆ ಸುರುಳಿ ರೋಗ

ರೈತರಲ್ಲಿ ಆತಂಕ; ವೈಜ್ಞಾನಿಕ ನಿರ್ವಹಣೆಯಿಂದ ರೋಗಕ್ಕೆ ಕಡಿವಾಣ ಸಾಧ್ಯ

ಎಚ್.ಎಸ್.ಸಚ್ಚಿತ್
Published 26 ಜೂನ್ 2024, 5:33 IST
Last Updated 26 ಜೂನ್ 2024, 5:33 IST
ತಂಬಾಕು ಹೊಲದಲ್ಲಿ ಎಲೆ ಸುರುಳಿ ರೋಗಕ್ಕೆ ತುತ್ತಾಗಿರುವ ಸಸಿ
ತಂಬಾಕು ಹೊಲದಲ್ಲಿ ಎಲೆ ಸುರುಳಿ ರೋಗಕ್ಕೆ ತುತ್ತಾಗಿರುವ ಸಸಿ   

ಹುಣಸೂರು: ವಾತಾವರಣದ ಬದಲಾವಣೆಯಿಂದಾಗಿ ವಾಣಿಜ್ಯ ಬೆಳೆ ತಂಬಾಕಿಗೆ ಎಲೆ ಸುರುಳಿ ರೋಗ ಬಾಧೆ ಕಾಣಿಸಿಕೊಂಡಿದ್ದು, ರೈತರು ಇಳುವರಿ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ.

ಹುಣಸೂರು ಉಪವಿಭಾಗದಲ್ಲಿ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆದಿದ್ದು, ಕನಿಷ್ಠ ಶೇ 40ರಷ್ಟು ಪ್ರದೇಶದಲ್ಲಿ ಎಲೆ ಸುರುಳಿ ರೋಗ ಬಾಧೆ ಕಾಣಿಸಿಕೊಂಡಿದೆ. ರೈತರು ಮುನ್ನೆಚ್ಚರಿಕೆ ಕ್ರಮವಹಿಸದಿದ್ದಲ್ಲಿ ಈ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ.

ಜೂನ್ ಆರಂಭದಲ್ಲಿ ಬಿದ್ದ ಉತ್ತಮ ಮಳೆಗೆ ಸಸಿ ನಾಟಿ ಕೆಲಸ ಮಾಡಲಾಗಿತ್ತು. ಬಳಿಕ ಜೂನ್‌ 15ರವರಗೆ ನಿರೀಕ್ಷಿತ ಮಳೆಯಾಗದೆ ಒಣಹವೆ ಕಾಣಿಸಿಕೊಂಡಿದ್ದು, ಈ ಹಂತದಲ್ಲಿ ಬಿಳಿ ನೊಣಗಳ(ವೈಟ್ ಫ್ಲೈ) ಸಂಖ್ಯೆ ಹೆಚ್ಚಾಗಿದ್ದು, ಇವು ರೋಗಕ್ಕೆ ಕಾರಣವಾಗುವ ವೈರಸ್‌ ಹರಡುತ್ತಿದೆ.

ADVERTISEMENT

ಬಿಳಿ ನೊಣವನ್ನು ಆಶ್ರಯಿಸುವ ‘ತಂಬಾಕು ಎಲೆ ಸುರುಳಿ ವೈರಸ್‌’ಗಳು ಸಸಿಯ ಎಲೆ ಹಿಂಭಾಗದಲ್ಲಿ ನೊಣ ಗಳೊಂದಿಗೆ ಆಶ್ರಯಪಡೆದು ಎಲೆಯ ಸಾರವನ್ನು ಹೀರಿ ಆರೋಗ್ಯವಂತ ಎಲೆ ಮೊರಟಿ(ಸುರುಳಿ) ಕೊಳ್ಳಲು ಕಾರಣವಾಗುತ್ತದೆ. ನೊಣಗಳು ಮೊಟ್ಟೆಯಿಟ್ಟಷ್ಟು, ಇವುಗಳು ಹೆಚ್ಚಾಗುತ್ತಾ ಅತಿವೇಗವಾಗಿ ಹರಡಿ ಸಂತತಿ ಹೆಚ್ಚಿಸಿಕೊಳ್ಳುತ್ತಿದೆ. ಬೆಳೆಯ ಇಳುವರಿಗೆ ಅಪಾಯ ತಂದಿದೆ. ಇದರೊಂದಿಗೆ ಹಸಿರು ಹುಳ ಬಾಧೆಯೂ ಹೆಚ್ಚಳವಾಗುತ್ತಿರುವುದು ಆತಂಕಕಾರಿ.

‘45ರಿಂದ 50 ದಿನ ಬೆಳೆದ ತಂಬಾಕು ಸಸಿ ವೈಟ್ ಫ್ಲೈ ರೋಗಕ್ಕೆ ತುತ್ತಾದಲ್ಲಿ ಶೇ 5ರಿಂದ 10ರಷ್ಟು ಇಳುವರಿ ಕಡಿತವಾಗಲಿದ್ದು, 30 ದಿನದೊಳಗಿನ ಸಸಿ ರೋಗಕ್ಕೆ ತುತ್ತಾದಲ್ಲಿ ಗಣನೀಯವಾಗಿ ಇಳುವರಿ ಕುಸಿತವಾಗುವ ಸಾಧ್ಯತೆ ಹೆಚ್ಚಿದೆ. ಉತ್ತಮ ಮಳೆಯಿಂದ ರೋಗ ಬಾಧೆ ಪ್ರಾಕೃತಿಕವಾಗಿ ನಿಯಂತ್ರಣಗೊಳ್ಳಲಿದೆ. ಇದರೊಂದಿಗೆ ವಿಜ್ಞಾನಿಗಳು ಶಿಫಾರಸ್ಸು ಮಾಡಿದ ಔಷಧಿ ಸಿಂಪಡನೆಯಿಂದ ರೋಗ ಹತೋಟಿಗೆ ಬರಲಿದೆ’ ಎಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿ ರಾಮಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂಬಾಕಿಗೆ ಹಸಿರು ಹುಳು ಬಾಧೆ ಕಾಡುತ್ತಿದ್ದು, ರೈತರು ಕೊರಾಜನ್ ಔಷಧಿಯನ್ನು ಪ್ರತಿ 15 ಲೀ. ನೀರಿಗೆ 5 ಗ್ರಾ. ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಹುಳು ಬಾಧೆಯಿಂದ ಮುಕ್ತರಾಗಬಹುದು’ ಎಂದು ಅವರು ಸಲಹೆ ನೀಡಿದ್ದಾರೆ.

‘ಸಕಾಲಕ್ಕೆ ಔಷಧಿ ನೀಡಿ’

‘ಎಲೆ ಸುರುಳಿ ರೋಗಕ್ಕೆ ಸಕಾಲಕ್ಕೆ ಸೂಕ್ತ ಔಷಧಿ ನೀಡಿದರೆ ರೋಗ ಬಾಧೆ ತಗ್ಗಿಸಬಹುದು’ ಎಂದು ವಿಜ್ಞಾನಿ ರಾಮಕೃಷ್ಣ ಹೇಳಿದರು.

‘ಮೊವೆಂಟ್ ಎನರ್ಜಿ ಔಷಧಿಯನ್ನು ಪ್ರತಿ 15 ಲೀ. ಗೆ 20 ಮಿ.ಲೀ. ಮಿಶ್ರಣ ಮಾಡಿ ಸಂಜೆ ಸಮಯದಲ್ಲಿ ಎಲೆಗಳ ಹಿಂಭಾಗಕ್ಕೆ ಸಿಂಪಡಿಸಬೇಕು. ಇದರೊಂದಿಗೆ ಪೊಟ್ಯಾಷಿಯಂ ನೈಟ್ರೇಟ್ ಸಿಂಪಡಿಸುವುದು ಅಗತ್ಯ. ಕಾಸ್‌ಬೋ ಪೋಷಕಾಂಶ (ಕ್ಯಾಲ್ಸಿಯಂ ಜಿಂಕ್ ಬೋರಾಕ್ಸ್) ಒಳಗೊಂಡ ಔಷಧಿಯನ್ನು15 ಲೀ.ಗೆ 30 ಮಿ.ಲಿ ಮಿಶ್ರಣ ಮಾಡಿ ಸಿಂಪಡಿಸುವುದರಿಂದಲೂ ನಿಯಂತ್ರಣ ಸಾಧ್ಯ’ ಎಂದರು.

‘ರೋಗಬಾಧೆಗೆ ತುತ್ತಾದ ಸಸಿ ಬೆಳವಣಿಗೆಗೆ ಪೊಟ್ಯಾಷಿಯಂ ನೈಟ್ರೇಟ್ ಅಥವಾ ಕ್ಯಾಲ್ಸಿಯಂ ನೈಟ್ರೇಟ್ 150 ಗ್ರಾ. ಪ್ರತಿ 15 ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪಡನೆ ಉತ್ತಮ’ ಎಂದರು.

10 ಎಕರೆಯಲ್ಲಿ ಬೆಳೆದ ತಂಬಾಕು ಎಲೆ ಸುರಳಿ ರೋಗಕ್ಕೆ ತುತ್ತಾಗಿತ್ತು. ವಿಜ್ಞಾನಿಗಳ ಸಲಹೆ ಮೇಲೆ ಔಷಧಿ ಸಿಂಪಡಿಸಿದ್ದು ರೋಗಮುಕ್ತವಾಗಿದೆ.
ಎಚ್.ಆರ್.ನಿತಿನ್, ಪ್ರಗತಿಪರ ರೈತ, ಹರವೆ ಮಲ್ಲರಾಜಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.