ADVERTISEMENT

ಇಂಗ್ಲಿಷ್ ಕಲಿಯಿರಿ, ಕನ್ನಡ ಬಿಡದಿರಿ: ಸುಧಾ ಮೂರ್ತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 9:46 IST
Last Updated 14 ಸೆಪ್ಟೆಂಬರ್ 2024, 9:46 IST
<div class="paragraphs"><p>ಮೈಸೂರು ವಿಶ್ವವಿದ್ಯಾಲಯ ಹೊರತಂದಿರುವ ‘ಕನ್ನಡ ವಿಶ್ವಕೋಶ–10 ಮತ್ತು 13ನೇ ಸಂಪುಟ’ಗಳ (ಪರಿಷ್ಕೃತ ಆವೃತ್ತಿ)ಯನ್ನು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಕ್ರಾಫರ್ಡ್‌ ಹಾಲ್‌ನಲ್ಲಿ ಶನಿವಾರ ಬಿಡುಗಡೆ ಮಾಡಿದರು.</p><p></p></div>

ಮೈಸೂರು ವಿಶ್ವವಿದ್ಯಾಲಯ ಹೊರತಂದಿರುವ ‘ಕನ್ನಡ ವಿಶ್ವಕೋಶ–10 ಮತ್ತು 13ನೇ ಸಂಪುಟ’ಗಳ (ಪರಿಷ್ಕೃತ ಆವೃತ್ತಿ)ಯನ್ನು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಕ್ರಾಫರ್ಡ್‌ ಹಾಲ್‌ನಲ್ಲಿ ಶನಿವಾರ ಬಿಡುಗಡೆ ಮಾಡಿದರು.

   

–‍ ಪ್ರಜಾವಾಣಿ ಚಿತ್ರ

ADVERTISEMENT

ಮೈಸೂರು: ‘ಉದ್ಯೋಗಗಳ ಅವಕಾಶಕ್ಕೆ, ತಂತ್ರಜ್ಞಾನ ಮತ್ತು ವಿಜ್ಞಾನದ ವಿಷಯಗಳನ್ನು ತಿಳಿದುಕೊಳ್ಳಲು ಇಂಗ್ಲಿಷ್ ಕಲಿಯಬೇಕು ನಿಜ. ಆದರೆ, ನಮ್ಮ ಮಾತೃಭಾಷೆ ಕನ್ನಡವನ್ನು ಬಿಡಬಾರದು’ ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯ ಹೊರತಂದಿರುವ ‘ಕನ್ನಡ ವಿಶ್ವಕೋಶ–10 ಮತ್ತು 13ನೇ ಸಂಪುಟ’ಗಳ (ಪರಿಷ್ಕೃತ ಆವೃತ್ತಿ)ಯನ್ನು ಇಲ್ಲಿನ ಕ್ರಾಫರ್ಡ್‌ ಭವನದಲ್ಲಿ ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ವೃದ್ಧಾಪ್ಯಕ್ಕೆ ಬಂದಾಗ ಎಲ್ಲರಿಗೂ ಮೂಲ ನೆನಪಾಗುತ್ತದೆ. ಆದ್ದರಿಂದ ನಮ್ಮ ಮೂಲ–ನಮ್ಮ ಭಾಷೆ ಕಳೆದುಕೊಳ್ಳಬಾರದು. ಮಹಿಳೆಯರು ಕನ್ನಡ ವಿಶ್ವಕೋಶದಂಥ ಪುಸ್ತಕಗಳನ್ನು ಖರೀದಿಸಿ ಓದಬೇಕು; ಮಕ್ಕಳಿಗೂ ಓದಿಸಬೇಕು. ಇದನ್ನು ಕರ್ತವ್ಯ ಎಂದು ಭಾವಿಸಬೇಕು. ಪ್ರತಿ ಮನೆಯಲ್ಲೂ ಕನ್ನಡ ವಿಶ್ವಕೋಶವನ್ನು ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಈಗ ಶುದ್ಧ ಕನ್ನಡದ ಬಳಕೆಯೇ ಇಲ್ಲದಂತಾಗಿದೆ. ಅದರಲ್ಲೂ ಬೆಂಗಳೂರು ಸಮೀಸುತ್ತಿದ್ದಂತೆಯೇ ಕನ್ನಡದ ಸ್ಥಿತಿ ನೆನೆದರೆ ನೋವಾಗುತ್ತದೆ’ ಎಂದರು.

ಆ ಗುಣ ಕಳೆದುಕೊಳ್ಳಬಾರದು:

‘ನನಗೆ 19 ವರ್ಷ ವಯಸ್ಸಾದಾಗ ತಾಯಿ ಕನ್ನಡ ವಿಶ್ವಕೋಶವನ್ನು ಕೊಡುಗೆ ನೀಡಿದರು. ಇಂಥದ್ದರಿಂದಲೇ ನನ್ನ ಆಳವಾದ ಬೇರುಗಳು ಕನ್ನಡ‌ದ್ದೇ ಆಗಿವೆ. ಜಗತ್ತಿನ ಎಲ್ಲಿಗೇ ಹೋದರೂ ನಾನು ಕನ್ನಡಿಗಳೆ. ಹಲವು ಭಾಷೆ ಗೊತ್ತಿದ್ದರೂ ಕನ್ನಡವೇ ನನ್ನ ತಾಯಿ’ ಎಂದು ಹೇಳಿದರು.

‘ಸಾಹಿತ್ಯ ಮೊದಲಾದವುಗಳನ್ನು ಓದುವ ಮೂಲಕ ಜ್ಞಾನ ಸಂಗ್ರಹಿಸುವ ಪರಂಪರೆ ಕನ್ನಡಿಗರದು. ಆ ಶ್ರೇಷ್ಠ ಗುಣವನ್ನು ನಾವು ‌ಕಳೆದುಕೊಳ್ಳಬಾರದು. ಮುಂದಿನ ತಲೆಮಾರಿಗೂ ಅದನ್ನು ದಾಟಿಸಬೇಕು’ ಎಂದು ಸಲಹೆ ನೀಡಿದರು.

ಕು‍ಲ‍ಪತಿ ಪ್ರೊ.ಎನ್.ಕೆ. ಲೋಕನಾಥ್‌ ಹಾಗೂ ಕುಲಸಚಿವೆ ವಿ.ಆರ್. ಶೈಲಜಾ ಪಾಲ್ಗೊಂಡಿದ್ದರು.

ನಂತರ ಸುಧಾ ಮೂರ್ತಿ ಪಾಲ್ಗೊಂಡಿದ್ದವರೊಂದಿಗೆ ಸಂವಾದ ನಡೆಸಿದರು. ‘ರಾಜಕೀಯ ಪ್ರಶ್ನೆಗಳನ್ನು ಕೇಳಬೇಡಿ. ಏಕೆಂದರೆ, ಅವುಗಳಿಗೆ ನನ್ನ ಬಳಿ ಉತ್ತರವಿಲ್ಲ’ ಎಂದು ಮೊದಲೇ ಕೋರಿದರು.

ಸಂವಾದದಲ್ಲಿ ಸುಧಾ ಮನದಾಳ

  • ಆಡಳಿತ ನಡೆಸುವವರಿಗೆ ಪಾರದರ್ಶಕತೆ ಅಗತ್ಯ. ಮಾತಿನಂತೆ ನಡೆದುಕೊಳ್ಳಬೇಕು.‌ ಆಗ ಮಾತ್ರ ಮರ್ಯಾದೆ ಇರುತ್ತದೆ. ತಪ್ಪಾದಾಗ ಅದನ್ನು ಮರೆಮಾಚದೆ ಒಪ್ಪಿಕೊಳ್ಳಬೇಕು.

  • ತೃಪ್ತಿ ಹಾಗೂ ಶಾಂತಿಯಿಂದ ಇರುವುದರಿಂದಾಗಿ ಸದಾ ಹಸನ್ಮುಖಿಯಾಗಿರುತ್ತೇನೆ. ಸರಳವಾಗಿರುತ್ತೇನೆ. ಓದುವ ಆಸೆ ಬಿಟ್ಟರೆ ಬೇರೇನೂ ಇಲ್ಲ. ಹಿಂದಿನಿಂದಲೂ ಹಣಕ್ಕೆ ಅಷ್ಟೊಂದು ಪ್ರಾಧಾನ್ಯತೆ ಕೊಟ್ಟವಳಲ್ಲ.

  • ಅಹಂಕಾರದಿಂದಲೇ ನಾವು ಜೀವನವನ್ನು ಬಹಳ ಕಷ್ಟ ಮಾಡಿಕೊಳ್ಳುತ್ತೇವೆ. ಬಂದಿದ್ದನ್ನು ಸ್ವೀಕರಿಸಬೇಕು. ನಾನು ಬಡವರಿಂದ ಕಲಿತಿದ್ದೇನೆಯೇ ಹೊರತು ಶ್ರೀಮಂತರಿಂದಲ್ಲ. 3ಸಾವಿರ ಲೈಂಗಿಕ ಕಾರ್ಯಕರ್ತೆಯರಿಗೆ ಸ್ವಯಂ ಉದ್ಯೋಗಕ್ಕೆಂದು ಸಾಲ ಕೊಡಿಸಲು ₹ 3 ಕೋಟಿಗೆ ಜಾಮೀನು ಹಾಕಿದ್ದೆ. ಆ ಮೂರು ಸಾವಿರ ಹೆಣ್ಣು ಮಕ್ಕಳೂ ನನಗೆ ಮೋಸ ಮಾಡಲಿಲ್ಲ. ಕೆಲವು ಶ್ರೀಮಂತರು ಮೋಸ ಮಾಡಿದರು.

  • ನೈತಿಕ ಹಾಗೂ ಕಾನೂನಾತ್ಮಕವಾಗಿ ಸರಿ ಇದ್ದರೆ ಯಾರು ಏನು ಬೇಕಾದರೂ ಮಾತನಾಡಿದರೂ ತಲೆಕೆಡಿಸಿಕೊಳ್ಳಬೇಡಿ. ಜಗತ್ತಿನ ಬಾಯಿ ಮುಚ್ಚಲಾಗದು; ಸೀತೆಯನ್ನೇ ಟೀಕಿಸಲಿಲ್ಲವೇ?

  • ಪ್ರತಿ ಪೀಳಿಗೆಯೂ ಈಗಿನ ಪೀಳಿಗೆ ಕೆಟ್ಟು ಹೋಗಿದೆ ಎಂದೇ ಮಾತನಾಡುತ್ತಾರೆ. ಆದರೆ, ಆಗಿನ ಪೀಳಿಗೆಯ ಒತ್ತಡ ಅರ್ಥವಾಗುವುದಿಲ್ಲ.

  • ಆರ್ಥಿಕ ಅನುಕೂಲಗಳ ಆಧಾರದಲ್ಲಿ ಕೆಲವನ್ನು ಕಳೆದುಕೊಂಡಿದ್ದೇವೆ, ಕೆಲವನ್ನು ಪಡೆದುಕೊಂಡಿದ್ದೇವೆ. ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳಲು ಕಷ್ಟಪಡಬೇಕಾಗಿದೆ.

  • ಹೋಲಿಕೆ ಮಾಡಿಕೊಳ್ಳುವುದು ಬಿಟ್ಟಾಗ ಮಾನಸಿಕ ಒತ್ತಡ ಇರುವುದಿಲ್ಲ. ನಮ್ಮ ಪೈಪೋಟಿ ನಮ್ಮೊಂದಿಗಷ್ಟೆ ಇರಬೇಕು.

  • ಪತಿಯಾದವನು ದುಡಿಯುವ ಮಹಿಳೆಗೆ ಮನೆಕೆಲಸದಲ್ಲಿ ಸಹಕರಿಸಬೇಕು. ಪ್ರತಿ ಯಶಸ್ವಿ ಮಹಿಳೆಯ ಹಿಂದೆ ಅರ್ಥಮಾಡಿಕೊಳ್ಳುವ ಪುರುಷ ಇರುತ್ತಾನೆ.

  • ಸ್ವಸ್ಥ, ಶಾಂತ ಹಾಗೂ ವ್ಯವಸ್ಥಿತವಾದ ಸಮಾಜಕ್ಕೆ ಮದುವೆ ಅಗತ್ಯ. ಆದರೆ, ಅದಕ್ಕಾಗಿ ಅನಗತ್ಯ ಖರ್ಚು ಸಲ್ಲದು.

  • ನನಗೆ ಸಿಕ್ಕಿರುವುದು ಗೌರವ ಡಾಕ್ಟರೇಟ್. ಹೀಗಾಗಿ ನನ್ನನ್ನು ಡಾಕ್ಟರ್‌ ಎನ್ನಬೇಡಿ. ಇಂಥ ಗೌರವವನ್ನು ತೆಗೆದುಕೊಂಡಲ್ಲೇ ಬಿಟ್ಟು ಬರಬೇಕು. ಕನ್ನಡತಿ ಎಂದರಷ್ಟೆ ಸಾಕು. ಒಬ್ಬರೇ ಬರುತ್ತೇವೆ; ಹೋಗುವಾಗಲೂ ಒಬ್ಬರೇ ಹೋಗುತ್ತೇವೆ. ಹೀಗಿರುವಾಗ ಬಿರುದುಗಳೆಲ್ಲಾ ಯಾಕೆ?

‘ನಿರ್ವಹಿಸಲು ಬುದ್ಧಿವಂತ ಮನುಷ್ಯ ಬೇಕೇ ಬೇಕು’

‘ಕೃತಕ ಬುದ್ಧಿಮತ್ತೆ ಹಾಗೂ ರೊಬೊಟ್ ಆತಂಕ ಉಂಟು ಮಾಡಿದೆ ನಿಜ. ಕಂಪ್ಯೂಟರ್ ಬಂದಾಗಲೂ ಅದೇ ಆತಂಕವಿತ್ತು. ಆದರೆ, ಅದರಿಂದ ಉದ್ಯೋಗ ಸೃಷ್ಟಿಯಾಯಿತೇ ಹೊರತು ತೊಂದರೆಯೇನೂ ಆಗಲಿಲ್ಲ. ಎಐ ಬಗ್ಗೆಯೂ ಈಗ ಚರ್ಚೆಯಾಗುತ್ತಿದೆ; ಏನಾಗುತ್ತದೆಯೋ ನೋಡೋಣ. ಏನೇ ತಂತ್ರಜ್ಞಾನ ಬಂದರೂ ನಿರ್ವಹಿಸಲು ಬುದ್ಧಿವಂತ ಮನುಷ್ಯ ಬೇಕೇಬೇಕು’ ಎಂದು ಸುಧಾ ಮೂರ್ತಿ ಪ್ರತಿಪಾದಿಸಿದರು.

‘40 ಮಂದಿಯಲ್ಲಿ ಒಬ್ಬರೂ ಆಯ್ಕೆ ಆಗಲಿಲ್ಲ’

‘ಈಗಿನ ಪರಿಸ್ಥಿತಿಯಲ್ಲಿ ಕೇವಲ ಪದವಿ ಇದ್ದರೆ ಉದ್ಯೋಗ ಸಿಗದು. ಕೌಶಲ ಇರುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೆ ಮುಂದೆ ಬರಬಹುದು. ನಾವು ಈಚೆಗೆ ಅಕೌಂಟೆಂಟ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದೆವು. ಸರಾಸರಿ ಜ್ಞಾನವನ್ನಷ್ಟೆ ಬಯಸಿದ್ದೆವು. 40 ಮಂದಿ ಅರ್ಜಿ ಹಾಕಿದ್ದರು. ಆದರೆ, ಒಬ್ಬರೂ ಪಾಸಾಗಲಿಲ್ಲ. ಅವರೆಲ್ಲರಲ್ಲೂ ಕೌಶಲದ ಕೊರತೆ ಇತ್ತು’ ಎಂದು ಸುಧಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.