ADVERTISEMENT

‘ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚಲಿ’

ಯುವರಾಜ ಕಾಲೇಜಿನಲ್ಲಿ ಸುವರ್ಣ ಕರ್ನಾಟಕ– 50: ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:23 IST
Last Updated 20 ಅಕ್ಟೋಬರ್ 2024, 7:23 IST
<div class="paragraphs"><p>ಮೈಸೂರಿನ ಯುವರಾಜ ಕಾಲೇಜಿನ ಕನ್ನಡ ವಿಭಾಗದಿಂದ ಶನಿವಾರ ಏರ್ಪಡಿಸಿದ್ದ ‘ಸುವರ್ಣ ಕರ್ನಾಟಕ–50: ಸಂಭ್ರಮಾಚರಣೆ’ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಉದ್ಘಾಟಿಸಿದರು</p></div>

ಮೈಸೂರಿನ ಯುವರಾಜ ಕಾಲೇಜಿನ ಕನ್ನಡ ವಿಭಾಗದಿಂದ ಶನಿವಾರ ಏರ್ಪಡಿಸಿದ್ದ ‘ಸುವರ್ಣ ಕರ್ನಾಟಕ–50: ಸಂಭ್ರಮಾಚರಣೆ’ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಉದ್ಘಾಟಿಸಿದರು

   

– ಪ್ರಜಾವಾಣಿ ಚಿತ್ರ

ಮೈಸೂರು: ‘ಕನ್ನಡ ಅನ್ನದ ಭಾಷೆಯಾಗಬೇಕು ಹಾಗೂ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಸಿಗಬೇಕು’ ಎಂದು ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಹೇಳಿದರು.

ADVERTISEMENT

ಇಲ್ಲಿನ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಕನ್ನಡ ವಿಭಾಗವು ಶನಿವಾರ ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ–50: ಸಂಭ್ರಮಾಚರಣೆ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಭಾಷೆಗೆ ದೊರೆತಿರುವ ಶಾಸ್ತ್ರೀಯ ಭಾಷಾ ಸ್ಥಾನಮಾನದ ಸದುಪಯೋಗವಾಗಬೇಕು. ಕೇಂದ್ರದಿಂದ ಅನುದಾನ ಪಡೆದು ವಿದ್ವಾಂಸರಿಗೆ ಉದ್ಯೋಗ ನೀಡಿ, ಮಹತ್ವದ ಗ್ರಂಥಗಳು ಪ್ರಕಟವಾಗುವಂತೆ ನೋಡಿಕೊಳ್ಳಬೇಕು’ ಎಂದರು.

‘ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿದ್ದರೂ ಅದರ ಪ್ರಯೋಜನವು ಎಷ್ಟು ಆಗಬೇಕಿತ್ತೋ ಅಷ್ಟು ಆಗಿಲ್ಲ. ರಾಜ್ಯ ಸರ್ಕಾರ ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ಅನುದಾನ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಬಲವಂತವಾಗಿ ಹಿಂದಿ ಹೇರಬಾರದು. ಕೆಲವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡಕ್ಕೆ ಸರಿಯಾದ ಪ್ರಾಮುಖ್ಯತೆ ನೀಡುತ್ತಿಲ್ಲ. ಅಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ ಬಳಕೆಯಾಗುತ್ತಿದೆ. ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಆದ್ದರಿಂದ ಎಲ್ಲೆಡೆ ಕನ್ನಡ ಬಳಕೆಯಾಗುವಂತೆ ನೋಡಿಕೊಳ್ಳಬೇಕು’ ಎಂದರು.

ಧ್ವನಿ ಫೌಂಡೇಷನ್‌ ಸಂಸ್ಥಾಪಕಿ ಶ್ವೇತಾ ಮಡಪ್ಪಾಡಿ ಮಾತನಾಡಿ, ‘ಇಂಗ್ಲಿಷ್‌ನ ಕಾಲು ಹಾಗೂ ಹಿಂದಿಯ ಸೊಂಟ ಮುರಿದು ಇಟ್ಟುಕೊಂಡರೆ ನಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳಬಹುದು’ ಎಂದು ಹೇಳಿದರು.

ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯ ಸಿ. ಬಸವರಾಜು ಜಟ್ಟಿಹುಂಡಿ ಮಾತನಾಡಿದರು. ಪ್ರಾಂಶುಪಾಲ ಪ್ರೊ.ಎಚ್‌. ಸೋಮಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರೊ.ಎಂ.ಕೆ. ಮಹೇಶ್‌, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ. ಅಜಯ್‌ ಕುಮಾರ್‌, ಐಕ್ಯೂಎಸಿ ಸಂಚಾಲಕ ಪ್ರೊ.ಬಿ.ಎಂ. ವೆಂಕಟೇಶ್‌, ಕನ್ನಡ ವಿಭಾಗದ ಮುಖ್ಯಸ್ಥ ಜಿ. ಶ್ರೀನಿವಾಸ್‌, ಪ್ರಾಧ್ಯಾಪಕರಾದ ಸಿ.ಡಿ. ಪರಶುರಾಮ ಹಾಗೂ ಕೋಕಿಲಾ ಪಾಲ್ಗೊಂಡಿದ್ದರು.

ಬಳಿಕ, ಡಿ. ಬನುಮಯ್ಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್. ಇಂದಿರಮ್ಮ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.